Advertisement

ಇನ್ನೂ ಹಳಿಯೇರದ ಮತ್ಸ್ಯಗಂಧ: ಮುಂಬಯಿ ಸಂಚಾರ ಸಂಕಷ್ಟ

02:07 AM Dec 08, 2020 | mahesh |

ಮಂಗಳೂರು: ದೇಶದ ವಿವಿಧೆಡೆ‌ ಇದೀಗ ವಿಶೇಷ ರೈಲುಗಳ ಸಂಚಾರ ಆರಂಭಗೊಳ್ಳುತ್ತಿದ್ದರೂ ಮುಂಬಯಿಗೆ ಕರಾವಳಿ ಕರ್ನಾಟಕದಿಂದ ಪ್ರಮುಖ ಸಂಚಾರ ಕೊಂಡಿಯಾಗಿದ್ದ ಮಂಗಳೂರು -ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸéಗಂಧ ಎಕ್ಸ್‌ಪ್ರೆಸ್‌ ಆರಂಭವಾಗಿಲ್ಲ. ಇದರಿಂದಾಗಿ ಮುಂಬಯಿ ಭಾಗಕ್ಕೆ ಉದ್ಯೋಗ, ವ್ಯವಹಾರಗಳಿಗೆ ತೆರಳುತ್ತಿದ್ದ ಜನರು ಸಂಚಾರ ಸಂಕಷ್ಟ ಎದುರಿಸುವಂತಾಗಿದೆ.

Advertisement

ಮಂಗಳೂರು ಸೆಂಟ್ರಲ್‌ನಿಂದ ಮುಂಬಯಿಗೆ ಸಂಚರಿಸುವ ಮತ್ಸ್ಯ ಗಂಧ ಎಕ್ಸ್‌ಪ್ರಸ್‌ ಸಂಚಾರವನ್ನು ಕೊರೊನಾ ಹಿನ್ನೆಲೆಯಲ್ಲಿ ಮಾ. 22ರಿಂದ ಸ್ಥಗಿತಗೊಳಿಸಲಾಗಿದೆ. ಸಂಚಾರ ಸ್ಥಗಿತಗೊಂಡು ಸರಿಸುಮಾರು 9 ತಿಂಗಳಾಗಿವೆ. ಕೊರೊನಾ ಸೋಂಕು ಇಳಿಮುಖವಾಗಿ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ದೇಶದ ವಿವಿಧ ಭಾಗಗಳಿಗೆ ವಿಶೇಷ ನೆಲೆಯಲ್ಲಿ ಈಗಾಗಲೇ ಹಿಂದೆ ಚಾಲನೆಯಲ್ಲಿದ್ದ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.

ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಭಾಗದ ಜನರು ಸಂಚಾರ, ಉದ್ಯೋಗ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಗೋವಾ, ಮುಂಬಯಿ ಭಾಗಕ್ಕೆ ಸಂಚರಿಸಲು ಹೆಚ್ಚಿನ ಪ್ರಮಾಣದಲ್ಲಿ ಮತ್ಸéಗಂಧ ರೈಲನ್ನು ಆಶ್ರಯಿಸುತ್ತಿದ್ದರು. ಮಳೆಗಾಲ ಹೊರತುಪಡಿಸಿ ಅಪರಾಹ್ನ 2.40ರ ವೇಳೆಗೆ ಮಂಗಳೂರಿನಿಂದ ಹೊರಡುತ್ತಿದ್ದ ರೈಲು ಮರುದಿನ 6.40ರ ವೇಳೆಗೆ ಮುಂಬಯಿ ತಲುಪುತ್ತಿತ್ತು. ಆದೇ ರೀತಿ ಮುಂಬಯಿಂದ ಅಪರಾಹ್ನ 3.30ಕ್ಕೆ ಹೊರಟು ಮಂಗಳೂರಿಗೆ ಮರುದಿನ ಸುಮಾರು 7.30ಕ್ಕೆ ಆಗಮಿಸುತ್ತಿತ್ತು.

ಇನ್ಯಾಕೆ ತಡ?
ಪ್ರಸ್ತುತ ಕೊರೊನಾ ಲಾಕ್‌ಡೌನ್‌ ಬಹುತೇಕ ಸಡಿಲಗೊಂಡಿದ್ದು ಆರ್ಥಿಕತೆ ತೆರೆದುಕೊಳ್ಳುತ್ತಿದೆ. ಮಂಗಳೂರು-ಮುಂಬಯಿ ಮಧ್ಯೆ ಜನ ಸಂಚಾರ ಹೆಚ್ಚುತ್ತಿದ್ದು, ವಾಣಿಜ್ಯ ವ್ಯವಹಾರಗಳು ಸುಧಾರಣೆಯಾಗುತ್ತಿವೆ. ವಿಮಾನ, ಬಸ್‌ಗಳ ಸಂಚಾರವೂ ಆರಂಭಗೊಂಡಿವೆ. ಹಾಗಿರುವಾಗ ಈ ರೈಲಿನ ಆರಂಭಕ್ಕೆ ಯಾಕೆ ತಡ ಎಂದು ಪ್ರಶ್ನಿಸುವಂತಾಗಿದೆ. ಪ್ರಸ್ತುತ ಮುಂಬಯಿಗೆ ನೇರವಾಗಿ ಹೋಗಲು ತಿರುವನಂತಪುರದಿಂದ ಮಂಗಳೂರು ಜಂಕ್ಷನ್‌ ಮೂಲಕ ಹಾದು ಹೋಗುವ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಮಾತ್ರ ಆಸರೆಯಾಗಿದೆ. ಮತ್ಸ್ಯಗಂಧ ಪ್ರಾರಂಭಗೊಂಡರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರಿಗೆ ಗೋವಾ, ಮುಂಬಯಿ ಸಂಚಾರ ಮಾತ್ರವಲ್ಲದೆ ಕುಮಟಾ, ಅಂಕೋಲಾ ಮುಂತಾದ ಕಡೆಗಳಿಗೂ ಸಂಚಾರಕ್ಕೆ ಅನುಕೂಲವಾಗಲಿದೆ.

ರೈಲು ಮಂಡಳಿ ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸœಗಿತಗೊಳಿಸಿದ್ದ ರೈಲುಗಳ ಸಂಚಾರಗಳನ್ನು ವಿಶೇಷ ರೈಲುಗಳೆಂಬ ನೆಲೆಯಲ್ಲಿ ಆರಂಭಿಸಿವೆ. ಇದೇ ರೀತಿ ಮಂಗಳೂರಿನಿಂದ ಮುಂಬಯಿಗೆ ಪ್ರಮುಖ ರೈಲು ಸಂಚಾರವಾಗಿದ್ದ ಮತ್ಸ್ಯ ಗಂಧವನ್ನು ಕೂಡಲೇ ಮರು ಆರಂಭಿಸಬೇಕು. ಈ ಬಗ್ಗೆ ಈಗಾಗಲೇ ದಕ್ಷಿಣ ರೈಲ್ವೇಗೆ ಈ ಭಾಗದ ರೈಲು ಬಳಕೆದಾರರ ಸಂಘಟನೆಗಳಿಂದ ಒತ್ತಾಯ ಮಾಡಲಾಗಿದೆ.
– ಅನಿಲ್‌ ಹೆಗ್ಡೆ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next