ಕನ್ನಡದಲ್ಲಿ ಇತ್ತೀಚೆಗೆ ಒಂದಷ್ಟು ಸಿನಿಮಾಗಳು ಯಾವುದೋ ಭಾಗದ ಆಚರಣೆ, ಸಂಸ್ಕೃತಿ, ಭಾಷೆ ಜೊತೆಗೊಂದು ಗಟ್ಟಿಕಥೆಯನ್ನು ತೋರಿಸುವ ಪ್ರಯತ್ನ ಮಾಡುತ್ತಿವೆ. ಈ ಮೂಲಕ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ ಹೊಸದೇನನ್ನೋ ಹೇಳುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾಗುವ ಸಿನಿಮಾ “ಮತ್ಸ್ಯಗಂಧ’.
ಒಂದೇ ಮಾತಲ್ಲಿ ಹೇಳಬೇಕಾದರೆ ಇದು ಉತ್ತರ ಕನ್ನಡ ಭಾಗದಲ್ಲಿ ನಡೆಯುವ ಕಥೆ. ಅಲ್ಲಿನ ಮೀನುಗಾರರ ಜೀವನ, ಅವರ ಹೋರಾಟ, ಒಗ್ಗಟ್ಟು ಜೊತೆಗೆ ಕಾನೂನು ತೊಡಕು ಹಾಗೂ ಜೊತೆಗೊಂದು ಥ್ರಿಲ್ಲರ್ ಹಾದಿ… ಈ ಅಂಶವನ್ನು “ಮತ್ಸ್ಯಗಂಧ’ ಚಿತ್ರದಲ್ಲಿ ಹೇಳಲಾಗಿದೆ.
ನಿರ್ದೇಶಕ ದೇವರಾಜ್ ಪೂಜಾರಿ ಕಥೆ ಹಾಗೂ ಅದಕ್ಕೆ ಪೂರಕವಾದ ಪರಿಸರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಈ ಸಿನಿಮಾ ಮೀನುಗಾರಿಕೆಯ ನಡುವೆ ನಡೆಯುವ ದಂಧೆಯೊಂದರ ಸುತ್ತ ಸಾಗುತ್ತದೆ. ಈ ಮೂಲಕ ಅಮಾಯಕರು ಹೇಗೆ ಬಲಿಯಾಗುತಾಾ¤ರೆ, ಜೊತೆಗೆ ಈ ಹಾದಿ ಹೇಗಿರುತ್ತದೆ ಎಂಬುದನ್ನು ಥ್ರಿಲ್ಲರ್ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ.
ಪೊಲೀಸ್ ಇಲಾಖೆಯ ಅಂಕು ಡೊಂಕುಗಳ ದರ್ಶನವೂ ಆಗುತ್ತದೆ. ಪ್ರಮುಖ ಆರೋಪಿಯ ಜಾಡು ಹಿಡಿದು ಹೊರಡುವ ನಾಯಕನಿಗೆ ಅನೇಕ ತಾಪತ್ರಯಗಳು ಎದುರಾಗುತ್ತವೆ. ಅದನ್ನೆಲ್ಲ ಮೆಟ್ಟಿ ನಿಲ್ಲುತ್ತಾನ… ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸುತ್ತನಾ ಎಂಬುದೇ ಕುತೂಹಲಕಾರಿ ಘಟ್ಟ. ಪೊಲೀಸ್ ಅಧಿಕಾರಿಯಾಗಿ ಪೃಥ್ವಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಶರತ್ ಲೋಹಿತಾಶ್ವ, ಭಜರಂಗಿ ಲೋಕಿ, ಪ್ರಶಾಂತ್ ಸಿದ್ಧಿ ಖಳರಾಗಿ ಅಬ್ಬರಿಸಿದ್ದಾರೆ. ರಾಮ್ ದಾಸ್ ಹಾಗೂ ಸತೀಶ್ ಚಂದ್ರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಬರುವ ಪಾತ್ರಗಳು, ಅದರ ಹಿನ್ನೆಲೆ ಎಲ್ಲವನ್ನು ನೀಟಾಗಿ ಕಟ್ಟಿಕೊಡುವ ಮೂಲಕ ನಿರ್ದೇಶಕರು ಪ್ರೇಕ್ಷಕರಿಗೆ ಒಂದು ಹೊಸ ಲೋಕ ತೋರಿಸಲು ಪ್ರಯತ್ನಿಸಿದ್ದಾರೆ.
ಆ ಮಟ್ಟಿಗೆ ಈ ಚಿತ್ರ ಒಂದು ಪ್ರಯತ್ನವಾಗಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಮುಖ್ಯವಾಗಿ ಈ ಸಿನಿಮಾದ ಕಥೆಗೆ ಪೂರಕವಾದ ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್‌ಗಳಲ್ಲಿ ಒಂದು. ಸಿನಿಮಾದ ಕೊನೆಯಲ್ಲಿ ಪಾರ್ಟ್ 2ಗೂ ಲಿಂಕ್ ಕೊಡುವ ಮೂಲಕ ಈ ಚಿತ್ರ ಮತ್ತೂಂದು ಕುತೂಹಲವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ.