Advertisement

ಪುತ್ತೂರು ಸಂತೆ ಇಂದು ಪುನರಾರಂಭ :  ವರ್ಷದ ಬಳಿಕ ವಹಿವಾಟು

01:49 AM Apr 12, 2021 | Team Udayavani |

ಪುತ್ತೂರು: ಹನ್ನೆರಡು ತಿಂಗಳುಗಳಿನಿಂದ ಬಂದ್‌ ಆಗಿದ್ದ ಕಿಲ್ಲೆ ಮೈದಾನದ ಸೋಮವಾರದ ಸಂತೆ ಮಾರುಕಟ್ಟೆ ಏಲಂ ನಡೆದಿದ್ದು, ಎ.12ರಿಂದ ಸಂತೆಯನ್ನು ಪ್ರಾಯೋಗಿಕವಾಗಿ ಪುನರಾರಂಭಿಸಲು ಏಲಂ ವಹಿಸಿದವರು ತೀರ್ಮಾನಿಸಿದ್ದಾರೆ.
ಸಂತೆ ಆರಂಭಿಸುವುದಕ್ಕೆ ನಗರಸಭೆ ಇನ್ನಷ್ಟೇ ಅಧಿಕೃತ ಆದೇಶ ನೀಡಬೇಕಿದೆ.

Advertisement

ವಾರ್ಷಿಕ ಏಲಂ
ದ.ಕ. ಜಿಲ್ಲೆಯಲ್ಲೇ ಅತ್ಯಧಿಕ ವ್ಯವಹಾರ ನಡೆಸುವ ಕಿಲ್ಲೆ ಮೈದಾನದ ಸೋಮವಾರ ಸಂತೆ ನಗರಸಭೆಯ ಸುಪರ್ದಿಗೆ ಒಳಪಟ್ಟಿದೆ. ನಗರಾಡಳಿತಕ್ಕೆ ಆದಾಯದ ಮೂಲವು ಆಗಿದೆ. ನಗರಸಭೆಯು ಪ್ರತೀ ವರ್ಷಕೊಮ್ಮೆ ಮೊತ್ತ ನಿಗದಿಪಡಿಸಿ ಟೆಂಡರ್‌ ಕರೆದು ಗರಿಷ್ಠ ಬಿಡ್‌ದಾರರಿಗೆ ಸಂತೆ ಮಾರುಕಟ್ಟೆಯನ್ನು ನೀಡುತ್ತದೆ. ಏಲಂನಲ್ಲಿ ಪಡೆದುಕೊಂಡವರು ಒಂದು ವರ್ಷದ ತನಕ ಅದರ ಜವಬ್ದಾರಿ ಹೊಂದಿರುತ್ತಾರೆ. ಸಂತೆಯಲ್ಲಿ ಪಾಲ್ಗೊಳ್ಳುವ ಅಂಗಡಿಗಳಿಂದ ನಿರ್ದಿಷ್ಟ ಮೊತ್ತದ ಸ್ಥಳ ಬಾಡಿಗೆಯನ್ನು ಪಡೆದು ನಗರಸಭೆಗೆ ಪಾವತಿಸಿದ ಮೊತ್ತ, ಜತೆಗೆ ಆದಾಯ ಸ‌ಂಗ್ರಹಿಸುತ್ತಾರೆ.

6 ಲಕ್ಷ ರೂ.ಗೆ ಏಲಂ
ಈ ಬಾರಿ ಕಿಲ್ಲೆ ಮೈದಾನದ ಸಂತೆ ನಡೆಯುವ ಸ್ಥಳವನ್ನು 6 ಲಕ್ಷ ರೂ.ಗೆ ಏಲಂ ಮೂಲಕ ನೀಡಲಾಗಿದೆ. ಏಲಂನಲ್ಲಿ ಪಡೆದುಕೊಂಡವರು ಒಟ್ಟು ಮೊತ್ತದ ಶೇ.25 ರಷ್ಟು ಭಾಗವನ್ನು ನಗರಸಭೆಗೆ ಪಾವತಿಸಿದ್ದಾರೆ. ಕಳೆದ ವರ್ಷದ ಏಲಂ ದರಕ್ಕೆ ಹೋಲಿಸಿದರೆ ಈ ಬಾರಿ 1.25 ಲಕ್ಷ ರೂ.ಕಡಿಮೆ ಮೊತ್ತಕ್ಕೆ ಹರಾಜಾಗಿದೆ. ಕೋವಿಡ್‌ ಕಾರಣದಿಂದ ವ್ಯಾಪಾರ ವ್ಯವಹಾರದ ಮೇಲೆ ಪರಿಣಾಮ ಬೀರಿದ ಕಾರಣದಿಂದ ದರ ಕಡಿಮೆಯಾಗಿದೆ ಎನ್ನಲಾಗಿದೆ.

ಮನವಿ ಸಲ್ಲಿಸಿದ್ದರು
ಕಳೆದ ಬಾರಿ ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿದ್ದ ಸಂತೆಯನ್ನು ಕೋವಿಡ್‌ ನಿಯಮಾವಳಿಗೆ ತಕ್ಕಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಪುನರಾರಂಭಿಸಲು ಬಿಡ್‌ದಾರರು ಕಳೆದ ವರ್ಷ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ನಗರಸಭೆಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. ನಗರಸಭೆ ಆಡಳಿತ ಈ ಬಗ್ಗೆ ಆಡಳಿತಾತ್ಮಕ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿತ್ತು. ಆ ಬಳಿಕ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಏಲಂ ಮೂಲಕ ಮಾರುಕಟ್ಟೆ ಹರಾಜು ನಡೆಸಿದೆ.

ಕಳೆದ ಬಾರಿಯ ಬಿಡ್‌ ಮೊತ್ತ ವಾಪಾಸಿಲ್ಲ
ನಗರಸಭೆಯ ಆಡಳಿತಾಧಿಕಾರಿ ಕಾಲದಲ್ಲಿ 2020-21ನೇ ಸಾಲಿಗೆ ಟೆಂಡರ್‌ ಕರೆದಿದ್ದು, 7.26 ಲ.ರೂ.ಬಿಡ್‌ ಮೊತ್ತದಲ್ಲಿ ಸಂತೆ ಮಾರುಕಟ್ಟೆ ಪಡೆದುಕೊಂಡಿದ್ದರು. ಒಟ್ಟು ಮೊತ್ತದ ಶೇ.25 ರಷ್ಟು ಭಾಗವನ್ನು ಅಂದರೆ 1.81 ಲ.ರೂ.ಅನ್ನು ನಗರಸಭೆಗೆ ಪಾವತಿಸಿದ್ದರು. 2020 ಎ.1 ರಿಂದ ಅವರು ಸಂತೆ ಮಾರುಕಟ್ಟೆಯಲ್ಲಿ ಬಾಡಿಗೆ ಮೊತ್ತ ಸಂಗ್ರಹಿಸಬೇಕಿದ್ದರೂ, ಕೋವಿಡ್‌ ಲಾಕ್‌ಡೌನ್‌ ಪರಿಣಾಮ ವಾರದ ಸಂತೆ ಪ್ರಾರಂಭಗೊಂಡಿರಲಿಲ್ಲ. 2021 ಮಾ.31 ರ ತನಕವು ಸಂತೆ ತೆರೆದಿರಲಿಲ್ಲ. ಇದರಿಂದ ಬಿಡ್‌ದಾರರಿಗೆ ಪಾವತಿಸಿದ ಅಸಲು ಮೊತ್ತವೇ ಸಿಕ್ಕಿರಲಿಲ್ಲ. ಏಳು ತಿಂಗಳು ಸಂತೆ ವ್ಯವಹಾರ ಇಲ್ಲದಿರುವ ಕಾರಣ ಬಿಡ್‌ ಮೊತ್ತದಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಅವರು ಸಲ್ಲಿಸಿದ್ದರು. ಆದರೆ ಪಾವತಿಸಿದ ಮೊತ್ತವನ್ನು ವಾಪಾಸು ನೀಡಲು ಅವಕಾಶ ಇಲ್ಲದ ಕಾರಣ ಬಿಡ್‌ದಾರರಿಗೆ ಹಿಂದಕ್ಕೆ ನೀಡಲಾಗುವುದಿಲ್ಲ.

Advertisement

ಅಧಿಕೃತ ಆದೇಶ ನೀಡಿಲ್ಲ
ಕಳೆದ ಹನ್ನೆರಡು ತಿಂಗಳಿನಿಂದ ಕಿಲ್ಲೆ ಮೈದಾನದಲ್ಲಿ ಸಂತೆ ವ್ಯವಹಾರ ನಡೆದಿಲ್ಲ. ಈ ಬಾರಿ 6 ಲಕ್ಷ ರೂ.ಗೆ ಏಲಂ ಆಗಿದೆ. ಸಂತೆ ಆರಂಭಿಸಲು ನಗರಸಭೆ ಅಧಿಕೃತವಾದ ಸೂಚನೆ ನೀಡಿಲ್ಲ. ಏಲಂನಲ್ಲಿ ಪಡೆದುಕೊಂಡವರು ಎ.12 ರಂದ ಪೂರ್ವ ಸಿದ್ಧತೆಯ ದೃಷ್ಟಿಯಿಂದ ವ್ಯವಹಾರ ಆರಂಭಿಸಿ ಗ್ರಾಹಕರಿಂದ ಬರುವ ಪ್ರತಿಕ್ರಿಯೆ ಗಮನಿಸಿ ಸಂತೆ ಮುಂದುವರಿಸುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಸಮಸ್ಯೆ ಇಲ್ಲದಿದ್ದರೆ ಏಲಂನ ಪೂರ್ಣ ಮೊತ್ತ ಪಾವತಿ ಮಾಡಿ ವ್ಯವಹಾರ ನಡೆಸಲಿದ್ದಾರೆ.
-ಜೀವಂಧರ್‌ ಜೈನ್‌, ಅಧ್ಯಕ್ಷರು, ನಗರಸಭೆ ಪುತ್ತೂರು

ಜಾತ್ರೆ ಗದ್ದೆಯಲ್ಲಿ ಸಿಗದ ಅನುಮತಿ ಸಂತೆಗೆ ಸಿಕ್ಕಿತು
ಕೋವಿಡ್‌ ಎರಡನೇ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೆ ನಗರಸಭೆ ದಿಢೀರ್‌ ಆಗಿ ಸಂತೆ ಮಾರುಕಟ್ಟೆ ಏಲಂ ನಡೆಸಿರುವ ಕ್ರಮದ ಬಗ್ಗೆ ಆಕ್ಷೇಪವು ಕೇಳಿ ಬಂದಿದೆ. ಕೋವಿಡ್‌ ಕಾರಣದಿಂದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವರಮಾರು ಗದ್ದೆಯಲ್ಲಿ ನಡೆಯುವ ಸಂತೆ ವ್ಯವಹಾರಕ್ಕೆ ಅನುಮತಿ ಸಿಕ್ಕಿರಲಿಲ್ಲ. ಆದರೆ ಸೋಮವಾರದ ಸಂತೆಗೆ ಅವಕಾಶ ನೀಡಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪುತ್ತೂರಿನ ಸೋಮವಾರದ ಸಂತೆ ಹತ್ತೂರಿಗೆ ಪ್ರಸಿದ್ಧಿ ಪಡೆದಿದ್ದು, ಸುಮಾರು 100 ವರ್ಷಗಳಿಂದ ಆರ್ಥಿಕ ಚಟುವಟಿಕೆ ಮೇಲೆ ದೊಡ್ಡ ಮಟ್ಟದ ಕೊಡುಗೆ ನೀಡಿದ ಹಿನ್ನೆಲೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next