Advertisement

ಸಂಗೀತ ಕ್ಷೇತ್ರದಲ್ಲಿ ಮಾತಂಗರ ಕಡೆಗಣನೆ: ಡಾ|ಗಂಗಾಧರ್‌

03:38 PM Oct 30, 2017 | |

ದಾವಣಗೆರೆ: ಸಂಗೀತ ಕ್ಷೇತ್ರಕ್ಕೆ ಮೊಟ್ಟ ಮೊದಲ ಗ್ರಂಥ ಕೊಡುಗೆ ನೀಡಿರುವ ಮಾತಂಗ ಮುನಿ ಮಾದಿಗ ಸಮುದಾಯದವರು ಎನ್ನುವ ಕಾರಣಕ್ಕಾಗಿಯೇ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ| ಬಿ. ಗಂಗಾಧರ್‌ ಅಭಿಪ್ರಾಯಪಟ್ಟಿದ್ದಾರೆ. 

Advertisement

ರೋಟರಿ ಬಾಲಭವನದಲ್ಲಿ ಭಾನುವಾರ ಮಾತಂಗ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾತಂಗಮುನಿ ವಿರಚಿತ ಸಂಗೀತ ಶಾಸ್ತ್ರದ ಮಹಾನ್‌ ಕೃತಿ ಬೃಹದ್ದೇಶೀ… ಕುರಿತ ವಿಚಾರ ಸಂಕಿರಣದಲ್ಲಿ ಕೃತಿ ಪ್ರವೇಶಿಕೆ ವಿಷಯ ಕುರಿತು ಮಾತನಾಡಿದ ಅವರು, ಭರತನ ನಟರಾಜ ತನ್ನ ಗ್ರಂಥದಲ್ಲಿ ಸಂಗೀತ ಮಾತ್ರವಲ್ಲದೆ, ನೃತ್ಯದ ವಿಷಯ ಕುರಿತು ಮಾತನಾಡಿದ್ದಾರೆ. ಸಂಗೀತ ರತ್ನಾಕರದಲ್ಲಿ ಸಂಗೀತವನ್ನು ವೈಭವೀಕರಿಸಲಾಗಿದೆ. ಇವೆರಡಕ್ಕೂ ಮುಂಚೆ ಬಂದಂತಹ ಬೃಹದ್ದೇಶೀ ಗ್ರಂಥ ಕೇವಲ ಸಂಗೀತ ಕುರಿತು ಮಾತನಾಡುತ್ತದೆ ಎಂದರು.

ಮಾತಂಗ ಮುನಿ ಸಂಗೀತವನ್ನು ಒಂದು ಸರಳ ವಿದ್ಯೆ, ಅದು ಪ್ರಕೃತಿಯಿಂದಲೇ ಜನ್ಮತಳೆದಿದ್ದು. ಒಂದೊಂದು ಸ್ವರ ಪ್ರಾಣಿ, ಪಕ್ಷಿ ದನಿಯಿಂದ ಕಂಡುಕೊಂಡದ್ದು ಎಂದಿದ್ದಾರೆ. ಇತರೆ ಗ್ರಂಥಗಳಲ್ಲಿ ಸಂಗೀತ ಕುರಿತು ಇಂತಹ ಮಾತುಗಳಿಲ್ಲ. ಸಂಗೀತ ಕಲಿಕೆಗೆ ಅತಿ ಸುಲಭ ಮಾರ್ಗ ಸೂಚಿಸುವಂತಹ ಗ್ರಂಥ ಬೃಹದ್ದೇಶೀ ಪ್ರಕಾರ ಸಂಗೀತ ಅಂದರೆ ದನ ಕಾಯೋನಿಂದ ಹಿಡಿದು, ಮಹಾರಾಜನವರೆಗೆ ಇರುವ ಹಾಡುಗಾರಿಕೆ ಅಷ್ಟೆ. ಅಲ್ಲಿ ಯಾವುದೇ ಭಿನ್ನತೆ ಇಲ್ಲ. ಇಂತಹ ಗಂಭೀರ, ವಾಸ್ತವ, ತಾರ್ಕಿಕ ವಿಷಯಗಳನ್ನು ತಿಳಿಸಿದ ಮಾತಂಗ ಮುನಿ ಮಾದಿಗ ಎಂಬ ಕಾರಣಕ್ಕಾಗಿಯೇ ಸಂಗೀತ ಕ್ಷೇತ್ರದಲ್ಲಿ ಇಂದಿಗೂ ಅವರ ಕಡೆಗಣನೆ ಆಗುತ್ತಿದೆ ಎಂದು ಹೇಳಿದರು.

ನಾವು ಇಂದು ನಿರಭಿಮಾನಿಗಳಾಗಿದ್ದೇವೆ. ಇದಕ್ಕೆ ಕಾರಣ ನಮ್ಮ ಪರಂಪರೆ ನಮಗೆ ಮರೆತುಹೋಗಿದೆ. ಒಂದು ಕೊಂಡಿ ಕಳಚಿಹೋಗಿದೆ. ಅದ್ಯಾವಾಗ ಕಳಚಿಹೋಯಿತು. ಗೊತ್ತಿಲ್ಲ. ಆದರೆ, ವೈದಿಕರು ಬಂದ ಮೇಲೆ ಎಲ್ಲವೂ ಬದಲಾಗಿದೆ ಎಂಬುದು ನಿಜ. ನಮಗೆ ಸಂಸ್ಕೃತ ಹೊಸದಲ್ಲ. ನಮಗೂ ಭವ್ಯ ಪರಂಪರೆ ಇದೆ. ಇದೆಲ್ಲವನ್ನೂ ನಾವು ಮತ್ತೆ ನೆನಪಿಸಿಕೊಳ್ಳಬೇಕಾದರೆ ಬೃಹದ್ದೇಶೀ ಸೇರಿದಂತೆ ವಿವಿಧ ಆಕರಗಳನ್ನು ಕೆದಕಬೇಕು. ವೈದಿಕರ ಪರಂಪರೆಯಿಂದಾಗಿ ಇಂದು ನಮಗೆ ಆಕರಗಳೂ ಸಹ ಇಲ್ಲವಾಗಿವೆ. ನಮ್ಮೆಲ್ಲಾ ಆಕರಗಳನ್ನು ಅವರು ತಿರುಚಿಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾದಿಗ ಅಂದರೆ ಮಹಾ ಆದಿಗ ಎಂದರ್ಥ. ನಮ್ಮಿಂದ ಸಂಸ್ಕೃತ ಕಲಿಯುವುದು ಅಸಾಧ್ಯ ಎಂದೇ ಹೇಳುತ್ತಿದ್ದರು. ಆದರೆ, ಸಂಸ್ಕೃತದ ಬಳಿ ಹೋದ ನಮ್ಮ ಮೊದಲ ತಲೆಮಾರೇ ಇಂದು ನಿರರ್ಗಗಳವಾಗಿ ಸಂಸ್ಕೃತ ಮಾತನಾಡುವ ಮಟ್ಟಕ್ಕೆ ಬಂದು ನಿಂತಿದೆ. ಅಲ್ಲಿಗೆ ನಮಗೆ ಮೊದಲೇ ಸಂಸ್ಕೃತ ಜ್ಞಾನ ಇತ್ತು. ಅದೇ ರೀತಿ ನಮ್ಮ ನಡಾವಳಿಗಳು ಇಂದು ಗಮನಿಸಿದರೆ, ನಾವು ಹಿಂದೆ ರಾಜರಾಗಿದ್ದವರಂತೆ ಅನ್ನಿಸುತ್ತದೆ. ನಮ್ಮ ಕಣ್ಣಿಗೆ ನಮ್ಮ ತಲೆ ಮೇಲೆ ಇರುವ ಕಿರೀಟ ಕಾಣದೇ ಇರಬಹುದು. ಆದರೆ, ನಮ್ಮ ರಕ್ತಕ್ಕೆ ಅದರ ಪರಿಚಯ ಇದೆ. ಅದೇ ಕಾರಣಕ್ಕೆ ನಾವಿಂದು ಎಂತಹ ದೊಡ್ಡ ಸಮಸ್ಯೆಗೂ ಗಂಭೀರವಾಗುವುದಿಲ್ಲ. ತಪ್ಪುಮಾಡಿದವರನ್ನೂ ಸುಖಾಸುಮ್ಮನೇ ಕ್ಷಮಿಸಿಬಿಡುತ್ತೇವೆ ಎಂದು ಹೇಳಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಎಚ್‌. ವಿಶ್ವನಾಥ್‌, ಸಂಗೀತ ಎಂಬುದು ಕೇವಲ ಉನ್ನತ ಜಾತಿಯವರೆಗೆ ಮಾತ್ರ ಸೀಮಿತ ಎಂಬಂತ್ತಿದ್ದ ಕಾಲದಲ್ಲಿ ಮಾದಿಗ ಸಮುದಾಯದ ಮುನಿಯೊಬ್ಬರು ಸಂಗೀತ ಕುರಿತು ಬೃಹತ್‌ ಗ್ರಂಥ ರಚಿಸಿದ್ದಾರೆ ಎಂಬ ವಿಷಯಕ್ಕೆ ನಾವು ಹೆಮ್ಮೆ ಪಡಬೇಕಿದೆ. ನಾವು ಅವಿದ್ಯಾವಂತರಲ್ಲ ಎಂಬುದನ್ನು ಒತ್ತಿಹೇಳಬೇಕಿದೆ ಎಂದರು.

ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ| ಎ.ಕೆ. ಹಂಪಣ್ಣ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ| ಶಿವಾನಂದ ಕೆಳಗಿನಮನಿ, ಚಿಂತಕ ಡಾ|ಒ. ನಾಗರಾಜ ವಿವಿಧ ವಿಷಯ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕುಮಾರ್‌ ಹನುಮಂತಪ್ಪ, ಲೇಖಕಿ ಎನ್‌.ಡಿ. ವೆಂಕಮ್ಮ, ಡಾ| ಶಿವನಂಜಯ್ಯ, ನಗರಸಭೆ ಮಾಜಿ ಸದಸ್ಯ ಎಸ್‌. ಮಲ್ಲಿಕಾರ್ಜುನ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next