Advertisement
ತಾಲೂಕಿನ ಶ್ರವಣಬೆಳಗೊಳದ ಜೈನಮಠದ ಆವರಣದಲ್ಲಿನ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆದ ಅಖೀಲ ಕರ್ನಾಟಕ ಗಣಿತ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಗಣಿತ ಅತಿ ಮುಖ್ಯವಾಗಿದ್ದು ಉತ್ತಮವಾಗಿ ಬದುಕು ನಡೆಸಬೇಕೆಂದರೆ ಗಣಿತ ತಿಳಿವಳಿಕೆ ಅಗತ್ಯವಿದೆ. ಆರ್ಯಭಟ, ಮಹಾವೀರಾಚಾರ್ಯ ಈ ಬಗ್ಗೆ ಅನೇಕ ಸಂಗತಿಗಳನ್ನು ವಿವರವಾಗಿ ತಿಳಿಸಿದ್ದಾರೆ ಎಂದರು.
Related Articles
Advertisement
ಹುಟ್ಟಿನಿಂದಲೇ ಗಣಿತ ಆರಂಭ: ಮನುಷ್ಯ ಹುಟ್ಟಿನಿಂದಲೇ ಗಣಿತ ಆರಂಭವಾಗುತ್ತದೆ. ಯಾವ ಧರ್ಮವೇ ಆಗಲಿ, ಯಾವ ಶಾಸ್ತ್ರಗಳೇ ಆಗಲಿ ಅಲ್ಲಿ ಗಣಿತ ಇರುತ್ತದೆ. ಇಂದಿನ ಸಮಾವೇಶದ ಅಧ್ಯಕ್ಷರಾದ ಪದ್ಮಾವತಮ್ಮ ಕರ್ನಾಟಕದಲ್ಲಿ ಗಣಿತಕ್ಕೋಸ್ಕರ ಶ್ರಮಿಸಿದ ಆಚಾರ್ಯರ ಬಗ್ಗೆ ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಗಣಿತ ಕಷ್ಟವೆಂದು ಅನಿಸದೇ ಇಷ್ಟವೆಂದು ಅನಿಸುವಂತೆ ಮಾಡಬೇಕು ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕತ್ತರಿಘಟ್ಟ ಮೆಳ್ಳಿಯಮ್ಮ ಆಧ್ಯಾತ್ಮಕ ಕೇಂದ್ರದ ಚಂದ್ರಶೇಖರ ಗುರೂಜಿ, ಡಿಡಿಪಿಐ ಕೆ.ಎಸ್.ಪ್ರಕಾಶ್ ಮಾತನಾಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಜಿಪಂ ಸದಸ್ಯೆ ಮಮತಾ, ತಾಪಂ ಸದಸ್ಯರಾದ ಮಹಾಲಕ್ಷ್ಮಿ, ಪ್ರಮೀಳಾ, ಗ್ರಾಪಂ.ಅಧ್ಯಕ್ಷೆ ಲತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಲುವನಾರಾಯಣಸ್ವಾಮಿ, ನಿವೃತ್ತ ನಿರ್ದೇಶಕ ಎಸ್.ಜಯಕುಮಾರ, ನಿವೃತ್ತ ಜಂಟಿ ನಿರ್ದೇಶಕ ರಂಗೇಗೌಡ, ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ, ಬಿಇಒಗಳಾದ ಎನ್.ಜೆ.ಸೋಮನಾಥ, ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ: ಅಖೀಲ ಕರ್ನಾಟಕ ಗಣಿತ ಸಮಾವೇಶದ ಸಮ್ಮೇಳನಾಧ್ಯಕ್ಷೆ ಮೈಸೂರು ಮಾನಸ ಗಂಗೋತ್ರಿಯ ನಿವೃತ್ತ ಪ್ರಾಧ್ಯಾಪಕಿ ಪದ್ಮಾವತಮ್ಮ ಅವರ ಮೆರವಣಿಗೆ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಅದ್ದೂರಿಯಾಗಿ ನಡೆಯಿತು.
ಮೈಸೂರು ಬ್ಯಾಂಡ್ಸೆಟ್, ಚಿಟ್ಟಿಮೇಳ, ಕಳಶ ಹೊತ್ತ ಕೂಷ್ಮಾಂಡಿನಿ ಮಹಿಳಾ ಸಮಾಜದ ಸದಸ್ಯರು, ಕನ್ನಡ ಧ್ವಜ ಹಿಡಿದ ಅಂಬಿಕಾ ಶಾಲೆ ವಿದ್ಯಾರ್ಥಿಗಳು, ಸ್ಕೌಟ್ ವಿದ್ಯಾರ್ಥಿಗಳ ತಂಡದವರು ಮೆರವಣಿಗೆಯಲ್ಲಿ ಸಾಗಿದರು. ವಿದ್ಯಾನಂದ ಧರ್ಮ ಶಾಲಾ ಆವರಣದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕರು ಸಮಾವೇಶದ ಅಧ್ಯಕ್ಷರನ್ನು ಸ್ವಾಗತಿಸಿ ಕನ್ನಡಾಂಬೆಗೆ ಜಯವಾಗಲಿ ಎಂದು ಜೈಕಾರ ಹಾಕಿದರು. ಡಿಡಿಪಿಐ ಕೆ.ಎಸ್.ಪ್ರಕಾಶ್ ಮೆರವಣಿಗೆಗೆ ಚಾಲನೆ ನೀಡಿದರು. ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
700 ಗಣಿತ ಶಿಕ್ಷಕರು ಭಾಗಿ: ಸಮಾವೇಶದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 700 ಕ್ಕೂ ಹೆಚ್ಚು ಗಣಿತ ಶಿಕ್ಷಕರು ಪಾಲ್ಗೊಂಡಿದ್ದರು, ಜೈನಕಾಶಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಮಾವೇಶದ ಅಧ್ಯಕ್ಷೆ ಪದ್ಮಾವತಮ್ಮ ಅವರಿಗೆ ಹಾರ ಮತ್ತು ಗಣಿತ ಮಾದರಿ ಒಳಗೊಂಡ ಪೇಟ ಧಾರಣೆ ಮಾಡುವ ಮೂಲಕ ಪೂರ್ಣಕುಂಭ ಸ್ವಾಗತ ನೀಡಿ, ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಗಮನ ಸೆಳೆದ ಮಾದರಿಗಳು: ಸಭಾ ಮಂಟಪದಲ್ಲಿ ಅಂಕಗಣಿತ, ಬೀಜಗಣಿತ, ರೇಖಾಗಣಿತಕ್ಕೆ ಸಂಬಂಧಿಸಿದ ಬ್ಯಾನರ್, ಮಾದರಿಗಳು ಒಂದೆಡೆಯಾದರೆ, ಗಣಿತ ಶಾಸ್ತ್ರಕ್ಕೆ ಕೊಡುಗೆ ನೀಡಿದ ದಾರ್ಶನಿಕರಾದ ಬ್ರಹ್ಮಗುಪ್ತ, ಆರ್ಯಭಟ, ಶ್ರೀನಿವಾಸ ರಾಮಾನುಜಂ, ಮಹಾವೀರಾಚಾರ್ಯ ವಿವರಗಳೊಂದಿಗೆ ಭಾವಚಿತ್ರಗಳು ಗಮನ ಸೆಳೆದವು.