Advertisement

ಪಠ್ಯ ಪುಸ್ತಕ ಅವಾಂತರ; 8ರ ಕನ್ನಡದಲ್ಲಿ ಗಣಿತ;10ನೇ ತರಗತಿಗೆ 9ರ ಕನ್ನಡ

02:10 PM Jun 06, 2018 | Sharanya Alva |

ವಿಟ್ಲ, ಜೂ. 5: ಕಳೆದ ವರ್ಷ ಸಕಾಲದಲ್ಲಿ ಪಠ್ಯಪುಸ್ತಕ ಸಿಗದೇ ಪರೀಕ್ಷೆ ಬರೆದಿದ್ದ ನೂರಾರು ವಿದ್ಯಾರ್ಥಿಗಳು ಈ ವರ್ಷ ಬೇಗ ಸಿಕ್ಕಿತಲ್ಲ ಎಂದು ಸಂಭ್ರಮಿಸುವಷ್ಟರಲ್ಲೇ ಅದರಲ್ಲಿನ ದೋಷಗಳು ಕಂಗಾಲುಗೊಳಿಸಿವೆ.

Advertisement

ರಾಜ್ಯ ಸರಕಾರ ವಿತರಿಸಿರುವ ಪಠ್ಯಪುಸ್ತಕಗಳಲ್ಲಿ ನಾನಾ ದೋಷಗಳಿವೆ. ಆಂಗ್ಲ ಮಾಧ್ಯಮ ತರಗತಿ ಪುಸ್ತಕಗಳಲ್ಲಿ ಕನ್ನಡ ಮಾಧ್ಯಮದ ಪಾಠ, ಕನ್ನಡ ಪುಸ್ತಕದಲ್ಲಿ ಗಣಿತ, ಎಸೆಸೆಲ್ಸಿಯಲ್ಲಿ 9ನೇ ತರಗತಿ ಪಾಠ. ವಿಟ್ಲದ  ಕೆಲವು ಶಾಲೆ ಗಳಿಗೆ ದೋಷಪೂರಿತ ಪಠ್ಯಪುಸ್ತಕ ವಿತರಣೆಯಾಗಿವೆ.

ಎಂಟರ ಕನ್ನಡದಲ್ಲಿ ಗಣಿತ 8ನೇ ತರಗತಿ ದ್ವಿತೀಯ ಭಾಷೆ “ತಿಳಿ ಕನ್ನಡ’ ಪಠ್ಯ ಪುಸ್ತಕದ ಮೊದಲ ಪಾಠದ “ಬುದ್ಧನ ಸಲಹೆ’ಯ ಎರಡು ಪುಟಗಳು ಸರಿಯಾಗಿವೆ. ಬಳಿಕ ಇದೇ ತರಗತಿಯ ಕನ್ನಡ ಮಾಧ್ಯಮ ಗಣಿತದ 51ನೇ ಪುಟದಿಂದ 66ನೇ ಪುಟದವರೆಗೆ ತುರುಕಲಾಗಿ¨ 19ನೇ ಪುಟದಿಂದ ಮತ್ತೆ “ಬುದ್ಧನ ಸಲಹೆ’ ಮುಂದುವರಿಯುತ್ತದೆ. 

82 ಪುಟಗಳ ಬಳಿಕ ಮತ್ತೆ ಗಣಿತದ ಅವತಾರ. ಕನ್ನಡ ಗದ್ಯ ಭಾಗದ ಎರಡನೇ ಪಾಠವಾದ “ಕನಸು ಮತ್ತು ಸಂದೇಶ’ ಸಂಪೂರ್ಣ ನಾಪತ್ತೆ. ಮೂರನೇ ಪಾಠ “ಗಾಂಧೀಜಿಯ ಬಾಲ್ಯ’ದ ಕೆಲವು ಪುಟಗಳಿವೆ. ಪದ್ಯ ಭಾಗದ “ಅನ್ವೇಷಣೆ’ಯ ಕೊನೆಯ ಪುಟ ಇಲ್ಲ. “ಹಾರಿದ ಹಕ್ಕಿಗಳು’, “ಜ್ಯೋತಿಯೇ ಆಗು ಜಗಕೆಲ್ಲ’ ಪದ್ಯಗಳೇ ಮಾಯ.”ನನ್ನ ಹಾಗೆಯೆ’ ಪದ್ಯದ ಮೊದಲ ಪುಟಗಳಿಲ್ಲ, ಕೊನೆಯ ಪ್ರಶ್ನೋತ್ತರಗಳು ಮಾತ್ರ ಸ್ವಲ್ಪ ಇವೆ. ಕೆಲವು ಪಠ್ಯಪುಸ್ತಕಗಳಲ್ಲಿ ಮೊದಲ ಪಾಠವೇ ನಾಪತ್ತೆ. ವಿಟ್ಲ ಸಮೀಪದ ಒಂದು ಖಾಸಗಿ ಶಾಲೆಗೆ ವಿತರಣೆಯಾದ ಪುಸ್ತಕಗಳಲ್ಲಿ 12ಕ್ಕೂ ಅಧಿಕ ಪಠ್ಯ ಪುಸ್ತಕಗಳಲ್ಲಿ ಇಂತಹ ತಪ್ಪುಗಳಿವೆ.

ಪಠ್ಯ ಪುಸ್ತಕ ಬಂದಿರಲಿಲ್ಲ!
ಕಳೆದ ವರ್ಷ ಖಾಸಗಿ ಶಾಲೆಗಳು ಸೇರಿದಂತೆ ಹಲವೆಡೆ ಸಕಾಲದಲ್ಲಿ ಹಣ ಪಾವತಿಸಿದ್ದರೂ, ಪರೀಕ್ಷೆ ಮುಗಿಯುವವರೆಗೂ ಪಠ್ಯ ಪುಸ್ತಕಗಳು ಸಿಕ್ಕಿರಲಿಲ್ಲ ಎಂಬ ಟೀಕೆಯಿತ್ತು. ಈ ಬಾರಿ ತರಗತಿ ಆರಂಭದ ಹೊತ್ತಿಗೆ ಪಠ್ಯಪುಸ್ತಕಗಳು ಲಭ್ಯವಾಗಿದ್ದರೂ ದೋಷಪೂರಿತವಾಗಿವೆ. ಇದು ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಆತಂಕಕ್ಕೀಡುಮಾಡಿದೆ. ರಾಜ್ಯ ಸರಕಾರ ಹಲವು ವರ್ಷಗಳಿಂದ ಪಠ್ಯಪುಸ್ತಕಗಳನ್ನು ನೇರವಾಗಿ ಶಾಲೆಗಳಿಗೆ ಪೂರೈಸುತ್ತಿದೆ. ಆದರೆ ದೋಷಪೂರಿತ ಪಠ್ಯ ಪುಸ್ತಕಗಳಿಂದ ಮತ್ತಷ್ಟು ಗೊಂದಲ ಹೆಚ್ಚುತ್ತದೆ ಎನ್ನುತ್ತಾರೆ ಕೆಲವು ವಿದ್ಯಾರ್ಥಿಗಳ ಪೋಷಕರು.

Advertisement

ಎಸೆಸೆಲ್ಸಿಗೆ 9ರ ಕನ್ನಡ ಪಾಠ !
ಹತ್ತನೇ ತರಗತಿಯ “ತಿಳಿ ಕನ್ನಡ’ ಪಠ್ಯಪುಸ್ತಕದಲ್ಲಿ ಎರಡನೇ ಪಾಠ “ಅಸಿ-ಮಸಿ- ಕೃಷಿ’ ಪಾಠದ ಬದಲಾಗಿ ಒಂಬತ್ತನೇ ತರಗತಿಯ “ಅರಳಿಕಟ್ಟೆ’ ಪಾಠ ಮುದ್ರಣವಾಗಿದೆ. 7ನೇ ಪುಟದಿಂದ 22ನೇ ಪುಟದವರೆಗೆ ಹಾಗೂ 87ರಿಂದ 102ನೇ ಪುಟದ ವರೆಗೆ ಹಿಂದಿನ ತರಗತಿಯ ಪಠ್ಯವೇ ಇದೆ. 

7ರಲ್ಲಿ ಪುಟಗಳೇ ಹೆಚ್ಚು !
ಏಳನೇ ತರಗತಿಯ ಆಂಗ್ಲ ಮಾಧ್ಯಮದ ವಿಜ್ಞಾನ ಪುಸ್ತಕದಲ್ಲಿ ಒಂದೇ ಪಾಠದ ಪುಟ ಮತ್ತೆ ಮತ್ತೆ ಮುದ್ರಣವಾಗಿದೆ. ಕನ್ನಡ ಮಾಧ್ಯಮ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ -2ರಲ್ಲಿ ಭಾಗ-1ರ ಪುಟಗಳು ಕಂಡುಬಂದಿವೆ.

ಗಮನಕ್ಕೆ ಬಂದಿಲ್ಲ
ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪುಗಳು ನಮ್ಮ ಗಮನಕ್ಕೆ ಬಂದಿಲ್ಲ. ಗೋದಾಮಿನಲ್ಲಿರುವ ಪುಸ್ತಕಗಳನ್ನು ಶಾಲೆಗೆ ವಿತರಿಸಲಾಗುತ್ತಿದ್ದು, ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುತ್ತಾರೆ. ಈಗ ಆಗಿರುವುದು ಮುದ್ರಣ ವ್ಯವಸ್ಥೆಯಲ್ಲಾದ ತಪ್ಪುಗಳೆನಿಸುತ್ತಿದೆ. ಅಂಥ
ಪುಸ್ತಕಗಳನ್ನು ತರಿಸಿ, ಪರಿಶೀಲಿಸುವೆ.
-ಶಿವಪ್ರಕಾಶ್‌ ಎನ್‌.
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

*ಉದಯ್ ಶಂಕರ್ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next