Advertisement

ಸ್ಕೇಲ್‌ ಮೇಲೆ ಗಣಿತ ಪ್ರಮೇಯ!

09:51 AM Jun 13, 2017 | Harsha Rao |

ಆವತ್ತು ಪದವಿಯ ಮೊದಲ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದವು. ರಾತ್ರಿಯೆಲ್ಲಾ ಓದಿದರೂ ಗಣಿತ ಪ್ರಮೇಯಗಳು ತಲೆಯಲ್ಲಿ ಕೂರುತ್ತಲೇ ಇರಲಿಲ್ಲ. “ಬಲ್ಲವರಿಗೆ ರಾಜಮಾರ್ಗ, ಮಿಕ್ಕವರಿಗೆ ಅಡ್ಡದಾರಿಯೇ ಸರಿ’ ಎಂದು ಸಿಕ್ಕಾಪಟ್ಟೆ ತಲೆ ಓಡಿಸಿ, ನಾನು ಅಳತೆಪಟ್ಟಿಯ ಮೇಲೆ ಪ್ರಮೇಯವನ್ನು ಬರೆದುಕೊಂಡೆ. 

Advertisement

ಮಾರನೇ ದಿನ ಪರೀಕ್ಷೆ ಆರಂಭವಾಯಿತು. ಏನಾದರಾಗಲೀ, ಮೊದಲು ಪ್ರಮೇಯ ಬರೆದು ಮುಗಿಸೋಣ ಅಂತ ಶುರುಮಾಡಿಕೊಂಡೆ. ಅದು ಹೇಗೆ, ನಾನು ಕಾಪಿ ಮಾಡುತ್ತಿರುವುದು ಗೆಳೆಯರಿಗೆ ಗೊತ್ತಾಯಿತೋ, ನಾ ಕಾಣೆ… ಆತ “ಲೋ ಮಗಾ, ನಂಗೂ ಸ್ವಲ್ಪ ಅಳತೆ ಪಟ್ಟಿ ಕೊಡೋ’ ಅಂತ ಪೀಡಿಸಲಾರಂಭಿಸಿದ. ಕೊನೆಗೆ, ಸೂಪರ್‌ವೈಸರ್‌ “ಯಾಕ್ರೋ, ಮಾತಾಡುತ್ತಿದ್ದೀರಾ?’ ಎಂದು ಗದರಿದಾಗ, “ಸರ್‌ ಆತನಿಗೆ ಅಳತೆ ಪಟ್ಟಿ ಬೇಕಾಗಿದೆಯಂತೆ’ ಎಂದು ಪಕ್ಕದಲ್ಲಿದ್ದ ಮುಗ್ಧ ಸ್ನೇಹಿತ ಹೇಳಿದ. 

ಮೇಷ್ಟ್ರು “ಅಷ್ಟೇನಾ?’ ಅಂತ ನನ್ನ ಬಳಿಯಿದ್ದ ಅಳತೆಪಟ್ಟಿಯನ್ನು ಆತನಿಗೆ ನೀಡಿದರು. ಅವರು ಅಳತೆಪಟ್ಟಿ ಕೈಗೆತ್ತಿಕೊಂಡಾಗಲೇ ನನ್ನ ಎದೆಯಲ್ಲಿ ಢವ ಢವ ಶುರುವಾಗಿತ್ತು. ಒಬ್ಬರಿಂದ ಒಬ್ಬರಂತೆ ಇಡೀ ಕ್ಲಾಸಿನ ತುಂಬಾ ಆವತ್ತು ನಾನು ತಂದಿದ್ದ ಅಳತೆಪಟ್ಟಿಗೆ ಎಲ್ಲಿಲ್ಲದ ಬೇಡಿಕೆ. ಎಲ್ಲರೂ ಅದೇ ಅಳತೆ ಪಟ್ಟಿ ಕೇಳುತ್ತಿರುವುದನ್ನು ನೋಡಿಯೂ ನಮ್ಮ ಮೇಷ್ಟ್ರಿಗೆ ಕೊಂಚವೂ ಅನುಮಾನ ಬರಲಿಲ್ಲ. ನಾನು ಬಚಾವಾದೆ. ಅಂದಿನಿಂದ ಗೆಳೆಯರೆಲ್ಲ, ನನ್ನ ಪ್ರಯೋಗವನ್ನೇ ಅನುಸರಿಸುತ್ತಿದ್ದಾರೆ. ಪರೀಕ್ಷೆಗೆ ಹಾಲ್‌ಗೆ ಎಂಟ್ರಿ ಕೊಡುವಾಗ ಹಾಲ್‌ಟಿಕೆಟ್‌ ಬಿಟ್ಟರೂ ಅಳತೆಪಟ್ಟಿಯನ್ನು ತರುವುದನ್ನು ಮಾತ್ರ ಯಾರೂ ಮರೆಯುತ್ತಿಲ್ಲ.

– ವಿನಾಯಕ ಬೆಣ್ಣಿ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next