Advertisement

ನಡ ಪ್ರೌಢಶಾಲೆಯಲ್ಲಿ  ಗಣಿತದ ವಿಸ್ಮಯ ಲೋಕ

10:15 AM Jul 16, 2018 | |

ಬೆಳ್ತಂಗಡಿ : ನಮ್ಮ ಮಕ್ಕಳು ಕಲಿಯಬೇಕು, ಅವರೂ ಜೀವನದಲ್ಲಿ ಮುಂದೆ ಬರಬೇಕು, ಸರಕಾರಿ ಶಾಲೆಯಲ್ಲಿ ಕಲಿಯು ತ್ತಿದ್ದರೂ ಖಾಸಗಿ ಶಾಲೆಗಳಿಗೆ ಕಡಿಮೆ ಯಿಲ್ಲದ ರೀತಿಯಲ್ಲಿ ಅವರಿಗೂ ಶಿಕ್ಷಣ ಸಿಗಬೇಕು ಎಂಬ ಕಲ್ಪನೆ ಸರಕಾರಿ ಶಾಲೆಯ ಶಿಕ್ಷಕರಲ್ಲಿದ್ದರೆ, ಅಲ್ಲಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದಕ್ಕೆ ಬೆಳ್ತಂಗಡಿ ತಾ|ನ ನಡ ಪ್ರೌಢಶಾಲೆಯ ಗಣಿತ ಪ್ರಯೋಗಾಲಯ ಸಾಕ್ಷಿ. ಈ ಶಾಲೆಯ ಗಣಿತ ಶಿಕ್ಷಕರ ಅವಿರತ ಶ್ರಮದ ಫಲವಾಗಿ ಈ ಅತ್ಯಾಧುನಿಕ ಪ್ರಯೋಗಾಲಯ ಇಂದು ರಾಜ್ಯದಲ್ಲಿಯೇ ವಿಶೇಷ ಎಂಬಂತಿದೆ. ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಶಿಕ್ಷಕರು ಹೀಗೆ ಎಲ್ಲರೂ ಗಣಿತ ಶಿಕ್ಷಕರ ಮನವಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಈ ಪ್ರಯೋಗಾಲಯ ಇಂದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.

Advertisement

ನಡ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಗಣಿತ ಶಿಕ್ಷಕರಾಗಿರುವ ಯಾಕೂಬ್‌ ಕೊಯ್ಯೂರು ಅವರ ಕಲ್ಪನೆಯ ಕೂಸೇ ಗಣಿತ ಪ್ರಯೋಗಾಲಯ. ಪ್ರಸ್ತುತ ನಡ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಗಣಿತ ತರಗತಿಗಳು ಇದೇ ಪ್ರಯೋಗಾಲಯದಲ್ಲಿ ನಡೆಯುತ್ತಿವೆ. 2014ರಲ್ಲಿ ಶಾಲೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಯೋಗಾಲಯ ಉದ್ಘಾಟನೆಗೊಂಡಿದೆ. 

ಮೈ ಸ್ಟೂಡೆಂಟ್‌ ಗ್ರೂಪ್‌
ಮಕ್ಕಳಿಗೆ ಏನಾದರೂ ಇನ್ನೋವೇಟಿವ್‌ ಶಿಕ್ಷಣ ನೀಡಬೇಕೆಂಬ ಯೋಚನೆ ಯಾಕೂಬ್‌ ಅವರ ಮನದಲ್ಲಿತ್ತು. ವಿದ್ಯಾರ್ಥಿಗಳಿಗೆ ತರಗತಿಗೆ ಒಂದು ಕ್ಲಾಸ್‌ ರೂಮ್‌ ಇರುವ ಬದಲು ವಿಷಯಕ್ಕೊಂದು ತರಗತಿ ಇದ್ದರೆ ಉತ್ತಮ ಎಂದು ಯೋಚಿಸಿದ್ದರು. ವಿಜ್ಞಾನ ಲ್ಯಾಬ್‌, ಗ್ರಂಥಾಲಯ ಶಾಲೆಗಳಲ್ಲಿ ಸಾಮಾನ್ಯವಾಗಿರುತ್ತದೆ. ಅದಕ್ಕಿಂತ ಭಿನ್ನವಾಗಿ ಗಣಿತ ಲ್ಯಾಬ್‌ ಸಿದ್ಧಪಡಿಸಬೇಕು ಎಂಬ ಯೋಚನೆ ಮಾಡಿದರು. ಇದಕ್ಕಾಗಿ ಹಣ ಹೊಂದಿಸಲು ಪೇಸ್‌ ಬುಕ್‌ನಲ್ಲಿ ಮೈ ಸ್ಟೂಡೆಂಟ್‌ ಗ್ರೂಪ್‌ ಮಾಡಿ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಹಾಯ ಕೇಳಿದರು. ಜತೆಗೆ ವಾಟ್ಸ್ಯಾಪ್‌ನಲ್ಲೂ ಗ್ರೂಪ್‌ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಸಹಾಯ ಪಡೆದರು. ಈ ರೀತಿಯಲ್ಲಿ ಶಾಲೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ಅವರಿಗೆ ಎಲ್ಲರ ಸಹಾಯವೂ ಲಭಿಸಿತು. ಅದಕ್ಕಾಗಿ ಉಳಿತಾಯ ಖಾತೆ ಮಾಡಿದಾಗ ಎಲ್ಲರೂ ನೆರವು ನೀಡಿದರು.

ಆದರೆ ಪ್ರಯೋಗಾಲಯ ಮಾಡುವ ಮೊದಲು ಬೇರೆ ಪ್ರಯೋಗಾಲಯವನ್ನು ವೀಕ್ಷಿಸಿದರೆ ಉತ್ತಮ ಎಂದು ಶಿವಮೊಗ್ಗ, ಬೆಂಗಳೂರು, ಮೈಸೂರು, ಬ್ರಹ್ಮಾವರ ಹೀಗೆ ಬೇರೆ ಬೇರೆ ಕಡೆ ಸುತ್ತಾಟ ನಡೆಸಿದರು. ಬಳಿಕ ಪ್ರಯೋಗಾಲದ ಸಾಮಗ್ರಿಗಳನ್ನು ತರಲು ಬೆಂಗಳೂರಿಗೆ ತೆರಳಿದಾಗ ಅಲ್ಲಿನ ದುಬಾರಿ ವೆಚ್ಚವನ್ನು ಕಂಡು, ಮನೆಯಲ್ಲೇ ರಾತ್ರಿ-ಹಗಲು ಕೂತು ಮಾಡೆಲ್‌ಗ‌ಳನ್ನು ತಯಾರಿಸಿದ್ದಾರೆ.

ಗಣ್ಯರ ಮೆಚ್ಚುಗೆ
ಪ್ರಯೋಗಾಲಯಕ್ಕೆ ರಾಜ್ಯದ ಹಿಂದಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಭೇಟಿ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಉಳಿದಂತೆ ಜಿಲ್ಲೆ, ರಾಜ್ಯದ ಮಟ್ಟದ ಗಣ್ಯರು ಭೇಟಿ ನೀಡಿದ್ದು, ಪ್ರಸ್ತುತ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಭೇಟಿ ನೀಡಿ ಪ್ರಯೋಗಾಲಯ ವೀಕ್ಷಿಸುತ್ತಿದ್ದಾರೆ.

Advertisement

ಪ್ರಯೋಗಾಲಯದಲ್ಲೇನಿದೆ ?
ಗಣತಕ್ಕೆ ಸಂಬಂಧಪಟ್ಟಂತೆ ಅನೇಕ ವರ್ಕಿಂಗ್‌ ಮಾಡೆಲ್‌ಗ‌ಳಿವೆ. ಸೋಲಾರ್‌ ಪ್ರಾಜೆಕ್ಟ್ ಇದ್ದು, ಅದರಲ್ಲಿನ ಇನ್‌ಬಿಲ್ಟ್ ವೀಡಿಯೋ ಮೂಲಕ ಮಕ್ಕಳೇ ತರಗತಿಯನ್ನು ಕೇಳಬಹುದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಐರಿಷ್‌ ಡಿವೈಸ್‌ ಮೂಲಕ ರೇಖಾಗಣಿತದ ರಚನೆಗಳನ್ನು ಅಧ್ಯಯನ ಮಾಡಬಹುದಾಗಿದೆ. 50 ಇಂಚಿನ ಟಿವಿ ಇದ್ದು, ಯೂಟ್ಯೂಬ್‌ನಲ್ಲಿರುವ ಗಣಿತಕ್ಕೆ ಸಂಬಂಧಪಟ್ಟ ವೀಡಿಯೋ ವೀಕ್ಷಿಸಲು ಅವಕಾಶವಿದೆ. ಗಣಿತಕ್ಕೆ ಸಂಬಂಧಪಟ್ಟ ಪುಸ್ತಕಗಳೂ ಅಲ್ಲಿವೆ. ಪ್ರಯೋಗಾಲಯದ ಹೊರಗಡೆ ಮ್ಯಾಥ್ಸ್ ಗಾರ್ಡನ್‌ ಇದ್ದು, ಅಲ್ಲಿ ವಿವಿಧ ನಕ್ಷೆಗಳನ್ನು ತಯಾರಿಸಲಾಗಿದೆ.

ಗಣಿತ ಲೋಕದ ಸೃಷ್ಟಿ
ಈ ಪ್ರಯೋಗಾಲಯದ ಒಳಗೆ ಬಂದಾಗ ಗಣಿತ ಲೋಕವೇ ಸೃಷ್ಟಿಯಾಗಬೇಕು ಎಂಬ ನೆಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರಸ್ತುತ ಇಲ್ಲಿ ಇನ್ನೂ ಶೇ. 40ರಷ್ಟು ಕೆಲಸಗಳು ಬಾಕಿಯಿದ್ದು, ಅದನ್ನೂ ಅನುಷ್ಠಾನಗೊಳಿಸಲು ಯೋಜನೆ ಇದೆ. ಪ್ರಸ್ತುತ ಗಣಿತ ಪಾಠದ ಕುರಿತು ತನ್ನದೇ 150 ವೀಡಿಯೋಗಳಿದ್ದು, ಹೊಸ ಪಠ್ಯಕ್ರಮದ ಕುರಿತು ನೋಟ್ಸ್‌ ಸಿದ್ಧಗೊಳಿಸುತ್ತಿದ್ದೇನೆ.
 - ಯಾಕೂಬ್‌ ಕೆಯ್ಯೂರು
ಪ್ರಯೋಗಾಲಯದ ರೂವಾರಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next