Advertisement

ಮಾತೆ ಮಹಾದೇವಿ ಬಂಧನಕ್ಕೆ ಒತ್ತಾಯ

09:52 AM Sep 15, 2017 | |

ಕಲಬುರಗಿ: ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ತುಮಕೂರಿನ ಸಿದ್ಧಗಂಗಾ ಶ್ರೀಗಳ ಹೆಸರಿಗೆ ಮಸಿ ಬಳಿಯುವಂತ ಹೇಳಿಕೆ ನೀಡುತ್ತಿರುವ ಜಗದ್ಗುರು ಮಾತೆ ಮಹಾದೇವಿ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಪೇಜಾವರ ಶ್ರೀ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಗರದ ಸರ್ದಾರ ಪಟೇಲ್‌ ವೃತ್ತದಲ್ಲಿ ನಡೆಯಿತು.

Advertisement

ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನ ನಗರದಿಂದ ಆರಂಭವಾಗಿ ಜೇವರ್ಗಿ ತಲುಪಿತು.

ಶುಕ್ರವಾರ ಚಿತ್ತಾಪುರ, ಸೇಡಂ, ಅಫಜಲಪೂರ, ಆಳಂದ, ಚಿಂಚೋಳಿ ತಾಲೂಕುಗಳಲ್ಲಿ ಸಂಚರಿಸಿ ಸಹಿ ಸಂಗ್ರಹ ಮಾಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತೆ ಮಹಾದೇವಿ ಅವರನ್ನು ಬಂಧಿಸಲು ಕೋರಲಾಗುವುದು ಎಂದು ನರಿಬೋಳ ತಿಳಿಸಿದರು. 

ಸಿದ್ದಗಂಗಾ ಶ್ರೀಗಳು ಭಾರತರತ್ನ ಆಸೆಗೆ ಹೇಳಿಕೆ ನೀಡಿದ್ದಾರೆಂಬ ಉದ್ಧಟತನದ ಹೇಳಿಕೆ ನೀಡಿ ಕೋಟ್ಯಂತರ ಶ್ರೀಗಳ ಭಕ್ತರ ಮನಸ್ಸಿಗೆ ನೋವು ಮಾಡಿರುವ ಮಾತೆ ಮಹಾದೇವಿ ಅವರಿಗೆ ನಗರದಲ್ಲಿ ನಡೆಯುವ ಸೆ. 24 ರ ಧರ್ಮ ಒಡೆಯುವ ರ್ಯಾಲಿಯಲ್ಲಿ ಭಾಗವಹಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು. 

ಲಕ್ಷ್ಮೀಕಾಂತ ಸ್ವಾದಿ, ಗೌರೀಶ ಕಾಶೆಂಪುರ, ಶಿವಾಜಿ ಜಿ.ಕೆ., ಸಿ.ಎಂ.ಶಿವಶರಣಪ್ಪ, ಮನೋಹರ ಪೋದ್ದಾರ, ವೀರಭದ್ರಪ್ಪ ವರದಾನಿ, ಸಂತೋಷ ಪಾಟೀಲ ಹರಸೂರ, ಶಿವು ಹಲಗೂಡಕರ, ನಟರಾಜ ಕಿಣಗಿಕರ, ಗಿರೀಶ ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿದ್ದರು. 

Advertisement

ಹಳೆ ವಿದ್ಯಾರ್ಥಿ ಸಂಘದ ಖಂಡನೆ

ಕಲಬುರಗಿ: ಭಾರತರತ್ನ ಕೊಡಿಸುವ ಆಮಿಷದಿಂದ ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಡಾ|ಶಿವಕುಮಾರ ಮಹಾಸ್ವಾಮಿಗಳಿಂದ ಈ ರೀತಿ ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಿರುವ ಮಾತೆ ಮಹಾದೇವಿ ಹೇಳಿಕೆ ಸರಿಯಲ್ಲ ಎಂದು ಸಿದ್ಧಗಂಗಾ ಹಳೆ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ಕಾರ್ಯದರ್ಶಿ ದೇವೆಂದ್ರಪ್ಪ ಆವಂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಬುದ್ಧಿ ಭ್ರಮಣೆಯಾಗಿಲ್ಲ. ಅವರು ಎಂದೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಮಾಡುವುದು ಇಲ್ಲ. ರಾಜ್ಯದ ಒಳಿತಷ್ಟೇ ಅಲ್ಲದೆ ಇಡೀ ಭರತ ಖಂಡಕ್ಕೆ ಒಳಿತಾಗಬೇಕೆಂದು ಶ್ರೀಮಠದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಅವರು ಯಾವುದೇ ಆಮಿಷಕ್ಕೂ ಬಗ್ಗುವುದಿಲ್ಲ. ಆಮಿಷಗಳನ್ನು ಮಠದತ್ತ ಸುಳಿಯಲು ಬಿಡುವುದಿಲ್ಲ. ತಮ್ಮ ಇಡೀ ಜೀವನವನ್ನು ಶ್ರೀಮಠದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ ಎಂದರು.

ಶ್ರೀಮಠದಲ್ಲಿ ಯಾವುದೇ ಜಾತಿಗೆ ಸೇರಿದ ಮಕ್ಕಳಿಲ್ಲ. ಎಲ್ಲ ಜಾತಿಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೆಲ್ಲವನ್ನು ಅರಿತ ಮಾತೆ ಮಹಾದೇವಿ ಈ ರೀತಿ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಶ್ರೀಗಳ ಹೇಳಿಕೆ ತಿರುಚಿ ಅಪಚಾರ ಎಸಗಿದ್ದಾರೆ. ಸ್ವಾರ್ಥಕ್ಕಾಗಿ ಸಿದ್ಧಗಂಗಾ ಮಠದ ಶ್ರೀಗಳನ್ನು ನಡುವೆ ಎಳೆದು ತರುತ್ತಿರುವುದು ಸರಿಯಲ್ಲ. ಕೂಡಲೆ ಸಚಿವ ಎಂ.ಬಿ.ಪಾಟೀಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಚಿವ ಪಾಟೀಲರ ಹೇಳಿಕೆಯಿಂದ ಶ್ರೀಮಠದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳಿಗೆ ನೋವುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮಾತೆ ಮಹಾದೇವಿ, ಎಂ.ಬಿ.ಪಾಟೀಲ ಶ್ರೀಗಳಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಂಘದ ಆವಂಟಿ, ಮಹೇಂದ್ರ ಬಿರಾದಾರ, ಚನ್ನಬಸಯ್ಯ ಗುರುವಿನ, ಜಗದೇವಪ್ಪ ಹಲಕರ್ಟಿ, ರುದ್ರಮುನಿ ಪುರಾಣಿ, ಮಂಜುನಾಥ ಸ್ವಾಮಿ, ವಿಜಯಕುಮಾರ, ಅಶೋಕ ರಟಕಲ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next