Advertisement

Famous Godesess Temple: ಹಿಂದೂ ನವರತ್ನ ದೇವಾಲಯ ದಕ್ಷಿಣೇಶ್ವರ ಕಾಳಿ ಮಂದಿರ

04:21 AM Oct 09, 2024 | Team Udayavani |

ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಕೋಲ್ಕತಾದ ದಕ್ಷಿಣೇಶ್ವರದಲ್ಲಿ ಕಾಳಿ ದೇಗುಲ.

Advertisement

ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತಾದ ದಕ್ಷಿಣೇಶ್ವರದಲ್ಲಿ ಕಾಳಿ ದೇಗುಲ ಬಂಗಾಲದ ಅತ್ಯಂತ ಸುಪ್ರಸಿದ್ಧ ದೇವಾಲಯವಾಗಿದೆ. ಹೂಗ್ಲಿ ನದಿಯ ಪೂರ್ವ ಭಾಗದ ದಡದಲ್ಲಿ ದಕ್ಷಿಣೇಶ್ವರ ಕಾಳಿ ದೇವಸ್ಥಾನವಿದೆ. ಇಲ್ಲಿ ಕಾಳಿಯ ಸ್ವರೂಪವಾದ ಭವತಾರಿಣಿ, ಮಹಾದೇವಿಯನ್ನು ಪೂಜಿಸಲಾಗುತ್ತದೆ. ಆದಿಶಕ್ತಿ ಕಾಳಿಕಾ ಎಂದೂ ಕರೆಯಲ್ಪಡುವ ಇಲ್ಲಿನ ದೇವಿ ಬಂಗಾಲಿಗರ ಪ್ರಮುಖ ಆರಾಧನ ಕೇಂದ್ರವಾಗಿದೆ. ಹಿಂದೂ ನವರತ್ನ ದೇವಾಲಯ ಎಂಬ ಹೆಗ್ಗಳಿಕೆಯೂ ಈ ದೇಗುಲಕ್ಕಿದೆ.

ಈ ದೇವಸ್ಥಾನವನ್ನು 19ನೇ ಶತಮಾನದಲ್ಲಿ ರಾಣಿ ರಶ್ಮೋನಿ ನಿರ್ಮಿಸಿದಳು ಎನ್ನಲಾಗಿದೆ. ಮಹಾರಾಜರ ನಿಧನದ ಅನಂತರ ರಾಣಿ ರಶ್ಮೋನಿ ಕಾಶಿ ಸಹಿತ ದೇಶದ ಇತರ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ನಿರ್ಧಾರ ಕೈಗೊಂಡಳು. ತೀರ್ಥಯಾತ್ರೆಗೆ ಹೊರಡುವ ಹಿಂದಿನ ದಿನ ರಾಣಿಯ ಕನಸಿನಲ್ಲಿ ದೇವಿ ಕಾಣಿಸಿಕೊಂಡು ನದಿಯ ದಡದಲ್ಲಿಯೇ ತನಗೊಂದು ದೇಗುಲ ನಿರ್ಮಿಸುವಂತೆ ಅಪ್ಪಣೆ ಮಾಡಿದಳು. ಇದರಿಂದ ಪ್ರಭಾವಿತಳಾದ ರಾಣಿಯು ದಕ್ಷಿಣೇಶ್ವರದಲ್ಲಿ ಸ್ಥಳ ವನ್ನು ಗುರುತಿಸಿ ತನ್ನ ಆರಾಧ್ಯ ದೇವತೆಯಾದ ಕಾಳಿಗಾಗಿ ದೇವಾಲಯ ನಿರ್ಮಿ ಸಲು ನಿರ್ಧರಿಸಿದಳು.

ಅದರಂತೆ ತಲೆ ಎತ್ತಿದ ಈ ದೇಗುಲದಲ್ಲಿ 1855ರಲ್ಲಿ ದೇವಿ ವಿಗ್ರಹ ವನ್ನು ಪ್ರತಿಷ್ಠಾಪಿಸಲಾಯಿತು. ರಾಣಿಯ ಕಾಲಾನಂತರ ಅವರ ಕುಟುಂಬ ವರ್ಗ ಈ ದೇಗುಲದ ನಿರ್ವಹಣೆಯನ್ನು ನಡೆಸುತ್ತಿತ್ತು. ಆ ಬಳಿಕ ಸುಮಾರು 30 ವರ್ಷಗಳ ಕಾಲ ರಾಮಕೃಷ್ಣ ಪರಮಹಂಸ ಮತ್ತು ಶಾರದಾ ದೇವಿ ದಂಪತಿ ಈ ದೇವಾಲಯದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಅತ್ಯಂತ ಸಮರ್ಥ ವಾಗಿ ನಿರ್ವಹಿ ಸಿದ್ದರು. ಈ ಸಂದರ್ಭದಲ್ಲಿ ಕಾಳಿ ದೇಗುಲದ ಖ್ಯಾತಿ ಮತ್ತಷ್ಟು ಉತ್ತುಂಗಕ್ಕೇರಿತು.

ಬಂಗಾಲಿ ವಾಸ್ತು ಶಿಲ್ಪದ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ಒಂಬತ್ತು ಗೋಪುರ ಸ್ತಂಭಗಳಿದ್ದು ಇವುಗಳನ್ನು ನವರತ್ನ ಸ್ತಂಭಗಳೆಂದು ಕರೆಯುತ್ತಾರೆ. ಇಲ್ಲಿರುವ ಕಾಳಿ ದೇವಿಯು, ಶಿವನ ಎದೆಯ ಮೇಲೆ ಪಾದವನ್ನಿಟ್ಟು ನಿಂತಿರುವ ಮೂರ್ತಿಯಾಗಿದೆ. ಇಲ್ಲಿ ವಿಷ್ಣು, ರಾಧಾ ದೇವಾಲಯದ ಜತೆಗೆ ಶಿವನ 12 ದೇವಾಲಯಗಳಿವೆ.

Advertisement

ಇಲ್ಲಿ ದೇವಿಗೆ ಕಾಳಿ ಪೂಜೆ, ಸ್ನಾನ ಯಾತ್ರಗಳೆಂಬ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಕಲ್ಪತರುವಿನ ದಿನ ಕಾಳಿ ದೇವಿಗೆ ದೊಡ್ಡ ಉತ್ಸವ ನಡೆಯುತ್ತದೆ. ಈ ದೇವಸ್ಥಾನವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಸಮಸ್ತ ಬಂಗಾಲಿಗರ ಆರಾಧ್ಯ ದೇವಿ ಮಾತ್ರವಲ್ಲದೆ ಬಲುಜನಪ್ರಿಯ ದೇವತೆಯಾದ ಕಾಳಿ ಮಾತೆಯನ್ನು ತಲೆತಲಾಂತರಗಳಿಂದ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಾಧಿಸಿಕೊಂಡು ಬಂದಿದ್ದಾರೆ.

ಪಾರಂಪರಿಕ ಮತ್ತು ಸಾಂಪ್ರದಾಯಿಕ ಬಂಗಾಲಿ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ದಕ್ಷಿಣೇಶ್ವರ ಕಾಳಿ ಮಂದಿರಕ್ಕೆ ಕೇವಲ ಕೋಲ್ಕತಾ ಮತ್ತು ಪಶ್ಚಿಮ ಬಂಗಾಲದಿಂದ ಮಾತ್ರವಲ್ಲದೆ ದೇಶಾದ್ಯಂತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವಿಯ ದರುಶನ ಪಡೆಯುತ್ತಾರೆ. ನವರಾತ್ರಿ ಹಬ್ಬದ ಸಂದರ್ಭದಲ್ಲಂತೂ ಹೂಗ್ಲಿ ನದಿ ತಟದಲ್ಲಿನ ಈ ದೇಗುಲಕ್ಕೆ ಭಕ್ತ ಸಾಗರವೇವ ಹರಿದು ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next