ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ ಮಠಗಳ ಯಾತ್ರೆ ನಡೆಸಿದ್ದಾರೆ. ಗುರುವಾರ ಚಿತ್ರದುರ್ಗ ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಿದ ವಿಜಯೇಂದ್ರ ಅವರು ನೇರವಾಗಿ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಮನೆಗೆ ಆಗಮಿಸಿ ಚಹಾ ಸೇವಿಸಿದ ಬಳಿಕ ಮುರುಘಾ ಮಠದ ಕರ್ತೃ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲಿಂದ ಶ್ರೀಕೃಷ್ಣ ಯಾದವ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಾದ ಪಡೆದರು.
ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ, ಮೈಸೂರಿನ ಎಂ.ಶಿವಣ್ಣ ಉಪಸ್ಥಿತರಿದ್ದರು.
ಅಲ್ಲಿಂದ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ಧರಾ ಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಮಾಜಿ ಸಂಸದ ಜನಾರ್ದನ ಸ್ವಾಮಿ ಆಗಮಿಸಿ ಭೇಟಿ ಯಾದರು. ಬಳಿಕ ಮಡಿವಾಳ ಮಾಚಿ ದೇವ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಮಾಚಿದೇವ ಶ್ರೀಗಳ ಆಶೀರ್ವಾದ ಪಡೆದರು. ಮಧ್ಯಾಹ್ನ ಸಿರಿಗೆರೆಗೆ ಭೇಟಿ ನೀಡಿದ ವಿಜಯೇಂದ್ರ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದರು.
ಚಿತ್ರದುರ್ಗದ ಮಠಗಳ ಬಳಿಕ ಹೊಸದುರ್ಗಕ್ಕೆ ಭೇಟಿ ನೀಡಿದ ವಿಜಯೇಂದ್ರ ಮತ್ತು ಕಾರ್ಯಕರ್ತರ ತಂಡ, ಹೊಸದುರ್ಗ ತಾಲೂಕಿನ ಮಧುರೆ ಭಗೀರಥ ಪೀಠಕ್ಕೆ ಭೇಟಿ ನೀಡಿ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ದರ್ಶನಾಶೀ ರ್ವಾದ ಪಡೆದುಕೊಂಡಿತು. ಅನಂತರ ಸಾಣೇಹಳ್ಳಿಗೆ ತೆರಳಿ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದು ಗೌರವಿಸಿದರು.
ಇಲ್ಲಿಂದ ಹೊಸದುರ್ಗ ಪಟ್ಟಣಕ್ಕೆ ಆಗಮಿಸಿ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅನಂತರ ಕೆಲ್ಲೋಡು ಕನಕ ಗುರುಪೀಠಕ್ಕೆ ತೆರಳಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯ ಆಶೀರ್ವಾದ ಪಡೆದು ಬೆಂಗಳೂರಿಗೆ ತೆರಳಿದರು.
ಇಡೀ ದಿನ ನಡೆದ ಮಠಗಳ ಭೇಟಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ವೈ.ಎ.ನಾರಾಯಣ ಸ್ವಾಮಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮುಂತಾದವರಿದ್ದರು.