Advertisement

ರಾಜ್ಯದಲ್ಲಿ ತಾಯಿ ಮರಣ ಪ್ರಮಾಣ ಇಳಿಕೆ

10:31 AM Nov 15, 2019 | Suhan S |

ಬೆಂಗಳೂರು: ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ರಾಜ್ಯದಲ್ಲಿ ಶೇ.10.2ಕ್ಕೆ ಇಳಿಕೆಯಾಗಿದೆ.

Advertisement

ಕೇಂದ್ರ ಆರೋಗ್ಯ ಮಂತ್ರಾಲಯದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್‌ಆರ್‌ ಎಸ್‌ (ಸ್ಯಾಂಪಲ್‌ ರಿಜಿಸ್ಟ್ರೇಷನ್‌ ಸಿಸ್ಟಂ) ಬುಲೆಟಿನ್‌ ಪ್ರಕಾರ ಕರ್ನಾಟಕದಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಶೇ.10.2 ಇಳಿಮುಖವಾಗಿದ್ದು, ಇದು ದೇಶದ ಅತಿ ಹೆಚ್ಚಿನ ಸಾಧನೆಯಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಹೆರಿಗೆ ವೇಳೆ ತಾಯಿಯ ಮರಣದ ಅನುಪಾತ ಕುರಿತಂತೆ ಎಸ್‌ಆರ್‌ಎಸ್‌ ಬುಲೆಟಿನ್‌ ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ 2015-17ನೇ ಅವಧಿಯ ಬುಲೆಟಿನ್‌ ಬಿಡುಗಡೆಯಾಗಿದೆ.

2014-16ರ ಬುಲೆಟಿನ್‌ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 108 ತಾಯಂದಿರು ಮೃತಪಡುತ್ತಿದ್ದರು. 2015-17ರ ಅವಧಿಯ ಬುಲೆಟಿನ್‌ನಲ್ಲಿ ಇದು 97ಕ್ಕೆ ಇಳಿದಿದೆ. ಎರಡನೇ ಸ್ಥಾನ ಮಹಾರಾಷ್ಟ್ರಕ್ಕೆ ಲಭಿಸಿದ್ದು, ಇಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಶೇ. 9.8ರಷ್ಟು ಇಳಿದಿದ್ದರೆ, ಮೂರನೇ ಸ್ಥಾನ ಪಡೆದಿರುವ ಕೇರಳದಲ್ಲಿ ಈ ಪ್ರಮಾಣ ಶೇ. 8.7ರಷ್ಟಿದೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ಪ್ರಕರಣಗಳು ನಡೆಯುವ ರಾಜ್ಯಗಳನ್ನು ಈ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ 20 ರಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ.  ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಇಳಿ ಮುಖಕ್ಕೆ ಸಂಬಂಧಿಸಿದಂತೆ ದೇಶದ ಒಟ್ಟಾರೆ ಸರಾಸರಿ ಶೇ. 6.2ರಷ್ಟಿದ್ದರೆ, ಕರ್ನಾಟಕದಲ್ಲಿ ಇಳಿಮುಖ ಪ್ರಮಾಣ ಶೇ. 10.2ರಷ್ಟಿದ್ದು, ಇದೊಂದು ದಾಖಲೆಯೇ ಸರಿ ಎಂಬುದು ತಜ್ಞರ ಅಭಿಮತವಾಗಿದೆ.

ಶೇ. 20ಕ್ಕೆ ಇಳಿಯುವ ನಿರೀಕ್ಷೆ: ಕಳೆದೆರಡು ವರ್ಷಗಳಲ್ಲಿ ಗರ್ಭಿಣಿಯರ ಆರೈಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಪ್ರಮಾಣ ಇನ್ನಷ್ಟು ಇಳಿಯುವ ನಿರೀಕ್ಷೆಯಿದೆ. 2015-17 ಸಾಲಿನಲ್ಲಿ ಇಳಿಕೆ ಪ್ರಮಾಣ ಶೇ. 10.2ರಷ್ಟಿದ್ದು, ಅದು 2017-19ನೇ ಸಾಲಿನಲ್ಲಿ ಮತ್ತಷ್ಟು(ಶೇ. 20) ಇಳಿಯುವ ಅಂದಾಜು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

15 ಲಕ್ಷ ತಾಯಿ ಕಾರ್ಡ್‌ ವಿತರಣೆ: ತಾಯಿ ಮತ್ತು ಮಗುವಿನ ಆರೈಕೆ ಕುರಿತಂತೆ ವಿತರಿಸುವ ತಾಯಿ ಕಾರ್ಡ್‌ ಕೊರತೆ ಸಂಪೂರ್ಣ ನಿವಾರಣೆ ಯಾಗಿದ್ದು, ವಾರ್ಷಿಕ 15 ಲಕ್ಷ ತಾಯಿ ಕಾರ್ಡ್‌ ವಿತರಿಸಲಾಗುತ್ತಿದೆ. ಈ ಪೈಕಿ 15 ಲಕ್ಷ ತಾಯಿ ಕಾರ್ಡ್‌ ರಾಜ್ಯದವರಿಗಾದರೆ, ಇನ್ನು ಸುಮಾರು 3 ಲಕ್ಷ ಕಾರ್ಡ್‌ ಹೊರರಾಜ್ಯಗಳಿಂದ ಹೆರಿಗೆ ಮತ್ತು ಚಿಕಿತ್ಸೆಗಾಗಿ ಬರುವ ತಾಯಂದಿರಿಗೆ ನೀಡಲಾಗುತ್ತಿದೆ. ಪ್ರಸ್ತುತ ತಾಯಿ ಕಾರ್ಡ್‌ ಕೊರತೆ ಬಗೆಹರಿದ ಕಾರಣ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಮತ್ತು ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಗೆ ತಾಯಿ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಮುಖ್ಯ ಮಂತ್ರಿ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ. ಮತ್ತು ಮಾತೃ ವಂದನ ಯೋಜನೆಯಡಿ 5 ಸಾವಿರ ರೂ. ವಿತರಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next