ಬೆಂಗಳೂರು: ತೀವ್ರ ಉಸಿರಾಟದ ತೊಂದರೆಯಿಂದ ಕಳೆದ ಕೆಲವು ದಿನಗಳಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವಧರ್ಮ ಪೀಠದ ಮಾತೆ ಮಹಾದೇವಿ(73ವರ್ಷ) ಲಿಂಗೈಕ್ಯರಾಗಿರುವುದಾಗಿ ಮೂಲಗಳು ತಿಳಿಸಿವೆ.
ಉಸಿರಾಟದ ತೊಂದರೆಯಿಂದಾಗಿ ಅವರು ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ 4.40ರ ಹೊತ್ತಿಗೆ ಕೊನೆಯುಸಿರೆಳೆದಿರುವುದಾಗಿ ವರದಿ ಹೇಳಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮದಲ್ಲಿರುವ ಬಸವ ಪೀಠದ ಅಧ್ಯಕ್ಷೆಯಾಗಿದ್ದ ಮಾತೆ ಮಹಾದೇವಿ ಅವರು ಮೊದಲ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಲಿಂಗಾಯತ ಸಮುದಾಯದ ಧಾರ್ಮಿಕ ಮುಖಂಡರಾಗಿ, ಮೊದಲ ಮಹಿಳಾ ಜಗದ್ಗುರುವಾಗಿದ್ದ ಮಾತೆ ಮಹಾದೇವಿ ಅವರು ಲೇಖಕಿಯಾಗಿ, ವಚನ ಸಾಹಿತಿಯಾಗಿ, ಉತ್ತಮ ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು. ಕೂಡಲ ಸಂಗಮ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಪ್ರತಿವರ್ಷ ಶರಣ ಸಮ್ಮೇಳನ ನಡೆಸುತ್ತಿದ್ದರು.
1946ರ ಮಾರ್ಚ್ 13ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಡಾ.ಬಸಪ್ಪ ಹಾಗೂ ಗಂಗಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ್ದರು. ಇವರ ಪೂರ್ವಾಶ್ರಮದ ಹೆಸರು ರತ್ನ ಎಂಬುದಾಗಿತ್ತು. ಸಚ್ಚಿದಾನಂದ ಎಂಬ ಅಂಕಿತನಾಮವಿಟ್ಟುಕೊಂಡಿದ್ದ ಇವರು 1965ರ ಆಗಸ್ಟ್ 19ರಂದು ಪರಮಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು.
ಆದರೆ ಅವರ ಮನಸ್ಸಿಗೆ ಸಮಾಧಾನವಾಗದ ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿಕೊಂಡು ಬಸವಾದಿ ಶರಣರ ತತ್ವಗಳನ್ನು ಜಗತ್ತಿಗೆ ಬಿತ್ತಿ ಬೆಳೆಸುವ ಉದ್ದೇಶದಿಂದ 1966ರ ಏಪ್ರಿಲ್ 5ರಂದು ತಮ್ಮ ಇಚ್ಛೆಯಂತೆ ಜಂಗಮ ದೀಕ್ಷೆ ಪಡೆದುಕೊಂಡಿದ್ದರು.