Advertisement

ಮ್ಯಾಚ್‌ ಕ್ಯಾನ್ಸಲ್‌

09:56 AM Dec 26, 2018 | |

ಸೀರೆ ಖರೀದಿಸಿದ ನಂತರ ಮೊದಲು ಮಾಡಬೇಕಾದ ಕೆಲಸವೇ ರವಿಕೆ ಹೊಲಿಸುವುದು. ಸೀರೆಯ ಜೊತೆಗೆ ಬರುವ ಬ್ಲೌಸ್‌ ಬಟ್ಟೆಯಿಂದಲೇ ರವಿಕೆ ಹೊಲಿಸಬೇಕು. ಹಾಗಾಗಿ, ಸಮಾರಂಭಕ್ಕೆ ವಾರವಿರುವಾಗಲೇ ಸೀರೆ ಕೊಳ್ಳಬೇಕು. ಇಲ್ಲದಿದ್ದರೆ ಟೈಲರ್‌ಗಳು ಹೇಳಿದ ಸಮಯಕ್ಕೆ ಹೊಲಿದುಕೊಡುವುದಿಲ್ಲ… ಸ್ವಲ್ಪ ನಿಲ್ಲಿ! ಸೀರೆ ಉಡಲು ಇಷ್ಟೊಂದು ಕಷ್ಟಪಬೇಕಾದ ಅಗತ್ಯವೇ ಇಲ್ಲ. ಫ್ಯಾಷನ್‌ ಟ್ರೆಂಡ್‌ ಬದಲಾಗಿದೆ. ನಿಮ್ಮ ಸೀರೆಯ ಬಣ್ಣ, ಬ್ಲೌಸ್‌ನ ಬಣ್ಣ ಒಂದೇ ಆಗಿರಬೇಕೆಂದೇನಿಲ್ಲ…

Advertisement

“ಅಮ್ಮಾ, ಈ ಸೀರೆಗೆ ಈ ಬ್ಲೌಸ್‌ ಮ್ಯಾಚೇ ಆಗಲ್ಲ. ನಾನು ಮ್ಯಾಚಿಂಗ್‌ ಬ್ಲೌಸ್‌ ಇದ್ದರಷ್ಟೇ ಸೀರೆ ಉಡೋದು…’ ಹೀಗೆ ಹೇಳ್ಳೋ ಜಮಾನಾ ಮುಗಿದಿದೆ. ಸೀರೆಯ ಸೆರಗಿನ ತುದಿಯಲ್ಲಿನ ಮ್ಯಾಚಿಂಗ್‌ ಬ್ಲೌಸ್‌ ಪೀಸ್‌ ಅನ್ನು ನೀಟಾಗಿ ಕತ್ತರಿಸಿ,
ಹೊಲಿಸುವುದೆಲ್ಲ ಈಗ ಹಳೇ ಫ್ಯಾಷನ್‌ ಆಗಿಬಿಟ್ಟಿದೆ. ನಿಜಕ್ಕೂ ಈಗ ಮ್ಯಾಚಿಂಗ್‌ಗೆ ಡಿಮ್ಯಾಂಡ್‌ ಇಲ್ಲ ಅನ್ನಬಹುದು. ಈಗೇನಿದ್ದರೂ ಸೀರೆಯ ಬಣ್ಣಕ್ಕೆ  ತದ್ವಿರುದ್ಧವಾದ, ಒಂದಕ್ಕೊಂದು ಸಂಬಂಧವೇ ಇಲ್ಲದ ಬ್ಲೌಸ್‌ ತೊಡುವುದೇ ಹೊಸ ಟ್ರೆಂಡ್‌. ಸೀರೆಯ ಬಣ್ಣಕ್ಕೂ, ರವಿಕೆಯ ಬಣ್ಣಕ್ಕೂ ಎತ್ತಣಿಂದೆತ್ತ ಸಂಬಂಧ ಎಂದು
ಅಚ್ಚರಿಪಡುವಷ್ಟರ ಮಟ್ಟಿಗೆ ಈ ಟ್ರೆಂಡ್‌ ಮಹಿಳೆಯರನ್ನು ಆಕರ್ಷಿಸಿದೆ.

ರೆಡಿಮೇಡ್‌ ಬ್ಲೌಸ್‌ ಹೆಂಗಳೆಯರ ಮನೆಮಾತಾಗಿ ಮಾರ್ಪಾಡಾದ ಬಳಿಕ ಫ್ಯಾಷನ್‌ ಜಗತ್ತಿಗೆ ಕಾಲಿಟ್ಟ ಹೊಸ ಟ್ರೆಂಡೇ ಈ ಕಾಂಟ್ರಾಸ್ಟ್‌ ಬ್ಲೌಸ್‌. ಅದರಲ್ಲೂ, ಪ್ಲೇನ್‌ ಸೀರೆಗಳಿಗೆ ತದ್ವಿರುದ್ಧ ಬಣ್ಣದ ಡಿಸೈನರ್‌ ರವಿಕೆಗಳನ್ನು ತೊಟ್ಟರಂತೂ ಅದ್ಭುತವಾಗಿ ಕಾಣುತ್ತದೆ. ಅಂದ ಹಾಗೆ, ಯಾವ ಬಣ್ಣದ ಸೀರೆಗೆ ಯಾವ ಬಣ್ಣದ ಕಾಂಟ್ರಾಸ್ಟ್‌ ಬ್ಲೌಸ್‌ ಆಕರ್ಷಣೀಯವಾಗಿ ಕಾಣುತ್ತದೆ ಎಂಬ ಮಾಹಿತಿ ಇಲ್ಲಿದೆ.

ಗುಲಾಬಿ ಸೀರೆ
ಗುಲಾಬಿ ಅಥವಾ ತಿಳಿಗೆಂಪು ಬಣ್ಣದ ಸೀರೆಗಳಿಗೆ ನೇರಳೆ, ಕಡು ಹಸಿರು, ಕಡು ನೀಲಿ, ಕಪ್ಪು ಬಣ್ಣದ ಡಿಸೈನರ್‌ ಬ್ಲೌಸ್‌ಗಳನ್ನು ಧರಿಸಿದರೆ ಚೆನ್ನಾಗಿರುತ್ತದೆ.

ಹಸಿರು ಸೀರೆ
ಗಾಢ ಹಸಿರು ಅಥವಾ ಗಿಳಿ ಹಸಿರು(ಪ್ಯಾರಟ್‌ ಗ್ರೀನ್‌) ಬಣ್ಣಗಳ ಸೀರೆಗಳಿಗೆ ಕೆಂಪು, ಗಾಢ ಗುಲಾಬಿ, ಕಪ್ಪು,
ಕಡು ನೀಲಿ, ನೇರಳೆ ಬಣ್ಣದ ಬ್ಲೌಸ್‌ ಸರಿಯಾಗಿ ಹೊಂದಾಣಿಕೆಯಾಗುತ್ತದೆ.

Advertisement

ಬಿಳಿ ಸೀರೆಗೆ
ಬಿಳಿ ಅಥವಾ ಕೆನೆಬಣ್ಣದ ಸೀರೆಗಳಿಗೆ ಗಾಢ ಬಣ್ಣದ ಯಾವುದೇ ರವಿಕೆಯನ್ನು ತೊಟ್ಟರೂ ಸುಂದರವಾಗಿ
ಕಾಣುತ್ತದೆ. ಗಾಢ ನೀಲಿ, ಕಪ್ಪು, ಕೇಸರಿ, ಹಸಿರು, ಮರೂನ್‌, ಕೆಂಪು, ಕಡು ಗುಲಾಬಿ ಬಣ್ಣದ ಬ್ಲೌಸ್‌ ಗಳು ಸೂಕ್ತ

ನೀಲಿ ಸೀರೆ
ನೀಲಿ ಬಣ್ಣದ ಸೀರೆಗಳಿಗೆ ಕಡುಗೆಂಪು, ಡಾರ್ಕ್‌ ಪಿಂಕ್‌, ಬೂದು ಬಣ್ಣ, ಕೇಸರಿ ಬಣ್ಣದ ಬ್ಲೌಸ್‌ಗಳು ಆಕರ್ಷಕವಾಗಿ
ಕಾಣುತ್ತದೆ. 

ಕೇಸರಿ ಬಣ್ಣದ ಸೀರೆ
ಕಡು ನೀಲಿ, ಕಡು ಗುಲಾಬಿ, ಕಪ್ಪು, ಹಸಿರು, ನೇರಳೆ, ಕ್ರೀಮ, ಪ್ಯಾರಟ್‌ ಗ್ರೀನ್‌ ಬ್ಲೌಸ್‌ಗಳು ಒಪ್ಪುತ್ತವೆ

ಇಲ್ಲಿ ಚೂರು ಕೇಳಿ
*  ನಿಮ್ಮ ಆಯ್ಕೆಯ ನಿರ್ದಿಷ್ಟ ಬಣ್ಣಗಳ ಡಿಸೈನರ್‌ ಬ್ಲೌಸ್‌ಗಳನ್ನು ಆಯ್ಕೆ ಮಾಡಿಕೊಂಡರೆ, ಪ್ರತಿಯೊಂದು
ಸೀರೆಗೂ ಬ್ಲೌಸ್‌ ಹೊಲಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ.
* ಡಿಸೈನರ್‌ ಬ್ಲೌಸ್‌ಗಳ ಜೊತೆಗೆ ಕೆಲವೊಂದು ಪ್ಲೇನ್‌ ಬ್ಲೌಸ್‌ಗಳನ್ನೂ ಖರೀದಿಸಿ. ಡಿಸೈನರ್‌ ಸೀರೆಗಳಿಗೆ ಪ್ಲೇನ್‌ ಬ್ಲೌಸ್‌ ಹಾಗೂ ಪ್ಲೇನ್‌ ಸೀರೆಗಳಿಗೆ ಡಿಸೈನರ್‌ ಬ್ಲೌಸ್‌ ಯಾವತ್ತೂ ಲುಕ್‌ ನೀಡುತ್ತದೆ.
* ಸಾಮಾನ್ಯ ಸೀರೆಯಿಂದ ಹಿಡಿದು ಗುಜರಾತಿ, ಬೆಂಗಾಲಿ, ಕಾಂಚೀವರಂ, ರೇಷ್ಮೆ ಸೀರೆ ಸೇರಿದಂತೆ ಯಾವುದೇ ಶೈಲಿಯ ಸೀರೆಗೂ ಕಾಂಟ್ರಾಸ್ಟ್‌ ಬ್ಲೌಸ್‌ ಆಕರ್ಷಕವಾಗಿ ಕಾಣುತ್ತದೆ.
* ಕಪ್ಪು, ಬಿಳಿ, ಗುಲಾಬಿ ಹಾಗೂ ಕೆಂಪು ಬಣ್ಣದ ಬ್ಲೌಸ್‌ ಗಳನ್ನು ಸಿದ್ಧವಾಗಿಟ್ಟುಕೊಂಡರೆ ಉತ್ತಮ. ಏಕೆಂದರೆ ಈ
ಬ್ಲೌಸ್‌ಗಳನ್ನು ಯಾವ ಸೀರೆಗೆ ಬೇಕಿದ್ದರೂ ತೊಡಬಹುದು.

ಹಲೀಮತ್‌ ಸ ಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next