ಕಲಕೇರಿ: ಯುವಕರು ಮತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವವನ್ನು ಕ್ರೀಡೆಗಳಿಗೂ ನೀಡಬೇಕು. ಅಂದಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಲ್ಲನಗೌಡ ಬಿರಾದಾರ ಹೇಳಿದರು.
ಗ್ರಾಮದ ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಎಂಪಿಎಸ್ ಶಾಲಾ ಆವರಣದಲ್ಲಿ ಎಬಿಡಿ ಫೌಂಡೇಶನ್ ಮತ್ತು ಅದ್ದೂರಿ ಗೆಳೆಯರ ಬಳಗದ ಸಹಯೋಗದಲ್ಲಿ ದಿ| ರಮೇಶ ಗಡಗಿ ಇವರ ಸ್ಮರಣಾರ್ಥ ಹಮ್ಮಿಕೊಂಡ ಖೇಲ್ ಕಬಡ್ಡಿ ಕಲಕೇರಿ ಕಬಡ್ಡಿ ಹೊನಲು ಬೆಳಕಿನ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕಬಡ್ಡಿ ಭಾರತೀಯರ ಪಾರಂಪರಿಕ ಕ್ರೀಡೆಯಾಗಿದ್ದು, ಅನಾದಿ ಕಾಲದಿಂದಲೂ ಈ ಕ್ರೀಡೆ ತನ್ನ ಮೆರಗನ್ನು ಉಳಿಸಿಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಗತ್ತನ್ನು ಬಿಂಬಿಸುವ ಲಗೋರಿ, ಚಿಣಿದಾಂಡು, ಖೋಖೋ, ಕಬಡ್ಡಿ, ಕುಸ್ತಿಯಂತಹ ದೇಶೀಯ ಕ್ರೀಡೆಗಳ ಕಡೆಗೆ ಯುವಕರ ಒಲವು ಕಡಿಮೆಯಾಗುತ್ತಿರುವದು ಕಳವಳಕಾರಿಯಾಗಿದೆ ಎಂದರು.
ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿದರು. ಪಂಚರಂಗ ಸಂಸ್ಥಾನ ಗದ್ದುಗೆಮಠದ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ವಣಗೆರೆಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದ ಬಸವೇಶ್ವರ ಕಾಲೇಜಿನ ಈರಯ್ಯ ಕಪ್ಪಡಿಮಠ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದವರಿಗೆ ಎಬಿಡಿ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ದೈಹಿಕ ಶಿಕ್ಷಕ ಬಸವರಾಜ ಚಳ್ಳಗಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಬಿಡಿ ಫೌಂಡೇಶನ್‌ನ ಸಂತೋಷ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.
ಡಾ| ಸುರೇಶ ಕಾಕಲರಡ್ಡಿ, ಯಮನೂರಿ ಕುಲಕರ್ಣಿ ಮಾತನಾಡಿದರು. ಮುಕುಂದ ದೇಸಾಯಿ, ಶಾಂತಾಬಾಯಿ ಕಾಕಲರಡ್ಡಿ, ಅರವಿಂದ ಬೇನಾಳ, ದವಲು ನಾಯ್ಕೋಡಿ, ಶಿವರಾಯ ಮೋಪಗಾರ, ಹುಸೇನ ನಾಯ್ಕೋಡಿ, ವಿಶ್ವನಾಥ ರಾಠೊಡ, ಸದಾಶಿವ ಪಾಟೀಲ, ನಬಿಲಾಲ ನಾಯ್ಕೋಡಿ, ಬಿ.ಎಸ್. ಬಗಲಿ, ರಾಜು ರಾಠೊಡ, ಪರಶುರಾಮ ವಡ್ಡರ, ಅಪ್ಪು ದೇಸಾಯಿ, ಸಚಿನ ಝಳಕಿ, ಮಲ್ಲು ಜಂಬಗಿ, ಪ್ರಜ್ವಲ ದೇಸಾಯಿ, ಅಶೋಕ ವಡ್ಡರ, ಮಹ್ಮದಅಲಿ ಯಾಳವಾರಕರ, ಸಂತೋಷ ಪೂಜಾರಿ ಇದ್ದರು.