Advertisement

ಯುವ ಕ್ರೀಡಾ ತಾರೆಗಳ ಭವಿಷ್ಯ ಕಗ್ಗತ್ತಲೆಗೆ: ಇದು ಭಾರತದ ಕ್ರಿಕೆಟ್ ಲೋಕದ ಫಿಕ್ಸಿಂಗ್ ಇತಿಹಾಸ

09:55 AM Nov 26, 2019 | keerthan |

ಕರ್ನಾಟಕ ಪ್ರೀಮಿಯರ್‌ ಲೀಗ್‌‌ ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಫಟನೆಗಳು ಬೆಳವಣಿಗೆಗಳು ಇದೀಗ ಬೆಳಕಿಗೆ ಬರುತ್ತಿವೆ. ಅದರೊಂದಿಗೆ  ಕ್ರೀಡಾ ಲೋಕವೇ ಬೆಚ್ಚಿ ಬೀಳಿಸುವ ಸಂಗತಿಯೇನೆಂದರೆ ಹನಿಟ್ರ್ಯಾಪ್ ಜಾಲದ ಮೂಲಕ ಫಿಕ್ಸಿಂಗ್ ನಡೆಸಲಾಗಿದೆ. ಆಟವನ್ನು ಎಷ್ಟು ಪಾರದರ್ಶಕವಾಗಿ ಆಯೋಜನೆ ಮಾಡಿದರೂ ಕೆಲವು ಹುಳುಕುಗಳು ಇದ್ದೇ ಇವೆ.

Advertisement

ಅಂದಹಾಗೆ ಭಾರತದಲ್ಲಿ ಫಿಕ್ಸಿಂಗ್ ಭೂತ ಕಾಡಿದ್ದು ಇದೇ ಮೊದಲೇನಲ್ಲ. ಈ ಮೊದಲೂ ಇಂತಹ ಘಟನೆಗಳು ನಡೆದಿವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ಮೊಹಮ್ಮದ್‌ ಅಜರುದ್ದೀನ್
ಭಾರತ ತಂಡವನ್ನು ಮುನ್ನಡೆಸಿದ ಶ್ರೇಷ್ಠ ನಾಯಕರ ಪೈಕಿ ಮೊಹಮ್ಮದ್‌ ಅಜರುದ್ದೀನ್ ಓರ್ವ. ಮ್ಯಾಚ್ ಫಿಕ್ಸಿಂಗ್ ಕಳಂಕ ಒಂದಲ್ಲದಿದ್ದರೆ ಅಜರ್ ಗೆ ಇಂದಿಗೂ ಅದೇ ಗೌರವ ಸಿಗುತ್ತಿತ್ತು. 47 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅಜರ್ ಮುಂದೊಂದು ದಿನ ಮೋಸದಾಟದ ಕಳಂಕಕ್ಕೆ ಒಳಗಾದ.

99 ಟೆಸ್ಟ್‌ ಪಂದ್ಯವಾಡಿದ್ಗ ಅಜರ್ ತನ್ನ ವೃತ್ತಿಜೀವನದ ಕೊನೆಯಲ್ಲಿ ತಪ್ಪು ಮಾಡಿದ. ಭಾರತದ ವಿರುದ್ಧದ ಸರಣಿಯಲ್ಲಿ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದ  ದಕ್ಷಿಣ ಆಫ್ರಿಕಾ ತಂಡದ ಹ್ಯಾನ್ಸಿ ಕ್ರೋಂಜೆ ತನಗೆ ಬುಕ್ಕಿಗಳನ್ನು ಪರಿಚಯಿಸಿದ್ಜೇ ಅಜರ್ ಎಂಬ ಹೇಳಿಕೆ ನೀಡಿದ್ದ. ಹೀಗಾಗಿ ಅಜರ್ ಗೂ ಕಳ್ಳಾಟದ ನಂಟಿತ್ತು ಎಂಬ ವಿಷಯ ಜಗಜ್ಜಾಹೀರಾಗಿತ್ತು. ಬಿಸಿಸಿಐ ಅಜರ್ ಗೆ ಜೀವಾವಧಿ ನಿಷೇಧ ಹೇರಿತ್ತು. ಆದರೆ 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ಅಜರ್ ನ ಪ್ರಕರಣವನ್ನು ಖುಲಾಸೆ ಮಾಡಿ ನಿಷೇಧವನ್ನು ತೆರವು ಮಾಡಿತು.

Advertisement

ಮನೋಜ್ ಪ್ರಭಾಕರ್
ಆರಂಭಿಕ ಬೌಲಿಂಗ್‌ ಮತ್ತು ಆರಂಭಿಕ ಬ್ಯಾಟಿಂಗ್‌ ಮಾಡಬಲ್ಲ ಅಪರೂಪದ ಆಲ್ ರೌಂಡರ್ ಆಗಿದ್ದರು ಮನೋಜ್ ಪ್ರಭಾಕರ್ .96 ಟೆಸ್ಟ್ ವಿಕೆಟ್ 157 ಏಕದಿನ ವಿಕೆಟ್ ಪಡೆದಿದ್ದ ಮನೋಜ್ ಸತತ 20 ಟೆಸ್ಟ್‌ ಪಂದ್ಯಗಳಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಆರಂಭಿಸಿದ್ದರು. ಇದೂ ಒಂದು ವಿಶ್ವ ದಾಖಲೆಯಾಗಿತ್ತು.

1999ರಲ್ಲಿ ತೆಹಲ್ಕಾ ಎಕ್ಸ್ ಪೋಸ್ ನಲ್ಲಿ ಭಾಗಿಯಾದ ಮನೋಜ್ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆಂಬ ಮಾತು ಹೇಳಿದ್ದರು. ಮನೋಜ್ ಆ ಕಾಲದ ಅತಿ ವಿವಾದಿತ ವ್ಯಕ್ತಿಯಾಗಿದ್ದರು. ಆದರೆ ಮನೋಜ್ ಹೇಳಿಕೆಗಳು ಆತನಿಗೆ ಮುಳ್ಳಾದವು. ಸ್ವತಃ ಮನೋಜ್ ಮೋಸದಾಟದಲ್ಲಿ ಸಿಕ್ಕಿ ಬಿದ್ದು ನಿಷೇಧ ಶಿಕ್ಷೆ ಅನುಭವಿಸಿದ.

ಅಜಯ್ ಶರ್ಮಾ
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅದ್ಭುತ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಫಲರಾಗಿ ನಂತರ ಫಿಕ್ಸಿಂಗ್ ಆರೋಪಕ್ಕೆ ಗುರಿಯಾದವರು ಅಜಯ್ ಶರ್ಮಾ. 31 ರಣಜಿ ಶತಕಗಳೊಂದಿಗೆ ಹತ್ತು ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದರೂ ಭಾರತದ ಪರವಾಗಿ ಆಡಿದ್ದು ಕೇವಲ ಒಂದು ಟೆಸ್ಟ್‌ ಮಾತ್ರ.

ಸುಮಾರು 31 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಶರ್ಮಾ, ತನ್ನ ನಿಜವಾದ ಆಟವನ್ನು ಪ್ರದರ್ಶಿಸಲು ವಿಫಲರಾದರು. ಶರ್ಮಾ ಪ್ರಥಮ ದರ್ಜೆ ಪಂದ್ಯದಲ್ಲಿ 67.46 ಸರಾಸರಿ ಹೊಂದಿದ್ದ ಶರ್ಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ರನ್ ಗಳಿಸಿದ್ದು ಕೇವಲ 20.19ರ ಸರಾಸರಿಯಲ್ಲಿ. ಇಂತಹ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಜಯ್ ಶರ್ಮಾರನ್ನು ಬಂಧಿಸಲಾಯಿತು. ಮತ್ತು ಅಜಯ್ ಶರ್ಮಾಗೆ ಬಿಸಿಸಿಐ ಜೀವಾವಧಿ ನಿಷೇಧ ಹೇರಿತ್ತು. ನಂತರ 2014ರಲ್ಲಿ ಅಜಯ್ ಶರ್ಮಾ ಈ ಹಗರಣದಲ್ಲಿ ನಿರಪರಾಧಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿತ್ತು.

ಶಾಂತಕುಮಾರನ್ ಶ್ರೀಶಾಂತ್
21ನೇ ದಶಕದ ಆರಂಭದಲ್ಲಿ ಭಾರತಕ್ಕೆ ಸಿಕ್ಕ ಅದ್ಭುತ – ಅಪರೂಪದ ವೇಗಿ ಈ ಶ್ರೀಶಾಂತ್. ತನ್ನ ಘಾತಕ ವೇಗ, ಕರಾರುವಕ್ ಲೈನ್ ಮತ್ತು ಲೆಂತ್, ಆಕ್ರಮಣಕಾರಿ ಆಟದಿಂದ ಗಮನ ಸೆಳೆದಿದ್ದರು ಶ್ರೀಶಾಂತ್. ಮೂಲತಃ ಕೇರಳದವರಾದ ಈ ಸ್ಪೀಡ್ ಸ್ಟಾರ್ ಮೈದಾನದಲ್ಲಿ ಜಗಳ, ಕೋಪಗಳಿಂದಲೂ ಆಗಾಗ ಸುದ್ದಿಯಾಗುತ್ತಿದ್ದರು. ಐಪಿಎಲ್ ನಲ್ಲಿ ಹರ್ಭಜನ್ ಸಿಂಗ್ ಕೈಯಲ್ಲಿ ಪೆಟ್ಟು ತಿಂದು ಗಳಗಳನೆ ಅತ್ತು ದೊಡ್ಡ ಸುದ್ದಿಯಾಗಿದ್ದ ಶ್ರೀಶಾಂತ್ ನಂತರ ಲೈಮ್ ಲೈಟ್ ಗೆ ಬಂದಿದ್ದು ಸ್ಪಾಟ್ ಫಿಕ್ಸಿಂಗ್ ನಿಂದ.

ಕಲರ್ ಪುಲ್ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೀಶಾಂತ್, ನೋಬಾಲ್ ಎಸೆಯಲು ಬುಕ್ಕಿಗಳಿಂದ 40 ಲಕ್ಷ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾದರು. ಈ ಫಿಕ್ಸಿಂಗ್ ಹಗರಣ ವಿಶ್ವಕ್ರಿಕೆಟ್ ನಲ್ಲಿ ಬಹುದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಶ್ರೀಶಾಂತ್ ಗೆ ಜೀವಾವಧೀ ನಿಷೇಧ ಹೇರಿತ್ತು. ಮುಂದೆ ಶ್ರೀಶಾಂತ್ ಕೇಸ್ ಖುಲಾಸೆಯಾದರೂ ಬಿಸಿಸಿಐ ತನ್ನ ನಿಷೇಧವನ್ನು ಸಡಿಲಿಸಲಿಲ್ಲ.

ಮೋಸದಾಟದ ಆಮಿಷಕ್ಕೆ ಒಳಗಾಗದೇ ಇರುತ್ತಿದ್ದರೆ ಶ್ರೀಶಾಂತ್ ಇಂದು ಭಾರತದ ವೇಗದ ಚುಕ್ಕಾಣಿ ಹಿಡಿಯುವಷ್ಟು ಬೆಳೆಯುತ್ತಿದ್ದರು. ಸದ್ಯ ಕೇರಳದ ಆಟಗಾರ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ರಿಕೆಟ್ ಆಟವನ್ನು ಧರ್ಮದಂತೆಯೇ ಪಾಲಿಸುವ ಭಾರತದಲ್ಲಿರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದೇ ಒಂದು ಸವಾಲಿನ ಕೆಲಸ. ಹಾಗಾಗಿಯೂ ಕೂಡಾ ದೇಶವನ್ನು ಪ್ರತಿನಿಧಿಸುವ ಸಂದರ್ಭದಲ್ಲೂ ಕಳ್ಳಾಟವಾಡಿದರೆ ಅದು ಆಟಕ್ಕೆ, ಆಟಗಾರನಿಗೆ ಎಂದಿಗೂ ಶೋಭೆ ತರುವುದಿಲ್ಲ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next