Advertisement

ತಣ್ಣೀರುಬಾವಿಯಲ್ಲಿ ಕನ್ನಡ ಡಿಂಡಿಮ

12:31 AM Oct 29, 2021 | Team Udayavani |

ಮಂಗಳೂರು: ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಕನ್ನಡ ಭಾಷೆಯ ಮಹತ್ವ ಸಾರುವ ಲಕ್ಷ ಕಂಠಗಳ ಸಮೂಹ ಗೀತ ಗಾಯನ ನಡೆಯಿತು.

Advertisement

ಡೊಂಗರಕೇರಿಯ ಕೆನರಾ ಪ್ರೌಢ ಶಾಲೆ, ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯ, ಸುರತ್ಕಲ್‌ನ ಗೋವಿಂದದಾಸ್‌ ಪಿಯು ಕಾಲೇಜು, ರಥಬೀದಿಯ ಸ.ಪ್ರ.ದ. ಕಾಲೇಜು, ಬೆಸೆಂಟ್‌ ಹಾಗೂ ಬಲ್ಮಠ ಮಹಿಳಾ ಕಾಲೇಜಿನ ಸುಮಾರು 700 ವಿದ್ಯಾರ್ಥಿ ಗಳು ರಾಷ್ಟ್ರಕವಿ ಕುವೆಂಪು ವಿರಚಿತ “ಬಾರಿಸು ಕನ್ನಡ ಡಿಂಡಿಮವ’, ನಿಸಾರ್‌ ಅಹಮದ್‌ ಅವರ “ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಿದರು.

ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವ ಕುರಿತು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪ್ರತಿಜ್ಞಾವಿಧಿ ಬೋಧಿಸಿದರು.

ಕನ್ನಡ ಅಭಿಮಾನದ ಜಾಗೃತಿ: ನಳಿನ್‌:

ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು, ರಾಜ್ಯದ ಉದ್ದಗಲಕ್ಕೂ ಲಕ್ಷಾಂತರ ಜನರು ಕನ್ನಡ ಭಾಷೆಯ ಮಹತ್ವ ಸಾರುವ ಗೀತೆಗಳನ್ನು ಹಾಡುವ ನೂತನ ಪರಿಕಲ್ಪನೆಯನ್ನು ಮುಖ್ಯಮಂತ್ರಿ ಹಾಗೂ ಸಚಿವ ಸುನಿಲ್‌ ಕುಮಾರ್‌ ಸಾಕಾರಗೊಳಿಸಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನವನ್ನು ಜಾಗೃತಿ ಗೊಳಿಸಲಾಗುತ್ತಿದೆ. “ಎಕ್ಕಡ, ಎನ್ನಡ’ಗಳ ಮಧ್ಯೆ ಕನ್ನಡವನ್ನು ಉಳಿಸಬೇಕಿದೆ ಎಂದರು.

Advertisement

ಮಹತ್ವ ಸಾರುವ ಕಾರ್ಯಕ್ರಮ:

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಮಾತನಾಡಿ, ಸರಕಾರದ ನಿರ್ದೇಶನ ದಂತೆ ವಿವಿಧ ಇಲಾಖೆಗಳ ಸಹ ಯೋಗದಲ್ಲಿ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಮಕ್ಕಳು ಹೆಮ್ಮೆಯಿಂದ ತಾಯ್ನಾಡಿನ ಮಹತ್ವ ಸಾರುವ ಹಾಡುಗಳನ್ನು ಹಾಡಿದ್ದಾರೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ| ಕುಮಾರ್‌, ಮಂಗಳೂರು ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌ ಜಿ., ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ್‌ ಕಲ್ಕೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ| ದಿನಕರ ಪಚ್ಚನಾಡಿ, ಡಾ| ಮೀನಾಕ್ಷಿ ರಾಮಚಂದ್ರ, ರತ್ನಾವತಿ ಬೈಕಾಡಿ, ನಾಗರಾಜ ಶೆಟ್ಟಿ, ಪುರುಷೋತ್ತಮ ಭಂಡಾರಿ, ವಿವಿಧ ಶಾಲಾ

ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು. ಶಿಕ್ಷಕಿ ಡಾ| ಮಂಜುಳಾ ಶೆಟ್ಟಿ ನಿರೂಪಿಸಿದರು.

ಸಾರ್ವಜನಿಕರಿಂದ ಗೀತಗಾಯನ:

ಜಿಲ್ಲೆಯ ಎಲ್ಲ ಸರಕಾರಿ ಸಂಸ್ಥೆ ಗಳಲ್ಲದೆ ಸಾರ್ವಜನಿಕರು ಕೂಡ ಸಮೂಹ ಗಾನದಲ್ಲಿ ಭಾಗವಹಿಸಿ ವೀಡಿಯೋಗಳನ್ನು ಸರಕಾರ ಸೂಚಿಸಿದ ಲಿಂಕ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ದ.ಕ.: 1.80 ಲಕ್ಷ ಜನರಿಂದ ಗೀತಗಾಯನ:

ಮಂಗಳೂರು: ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ  ಗುರುವಾರ ಬೆಳಗ್ಗೆ 11 ಗಂಟೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 1.80 ಲಕ್ಷ ಜನರು ಗೀತಗಾಯನ ನಡೆಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ತಿಳಿಸಿವೆ.

ದ.ಕ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು, ಶಾಲೆ, ಕಾಲೇಜು, ರೈಲು, ಬಸ್‌, ಆಟೋ ನಿಲ್ದಾಣಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎನ್‌ಎಂಪಿಟಿ, ಎಂಆರ್‌ಪಿಎಲ್‌ ಸೇರಿದಂತೆ ಹಲವು ಸರಕಾರಿ ಕಚೇರಿಗಳು, ಮಾಲ್‌ಗ‌ಳು, ಕೈಗಾರಿಕೆಗಳು, ಸಂಸ್ಥೆಗಳಲ್ಲಿ ಗೀತ ಗಾಯನ ನಡೆದಿದೆ.

ಆಳ್ವಾಸ್‌ನಲ್ಲಿ 5 ಸಾವಿರ ಕಂಠಗಳಿಂದ ಹಾಡು:

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಪುತ್ತಿಗೆ, ಮಿಜಾರು, ವಿದ್ಯಾಗಿರಿ ಹಾಗೂ ನುಡಿಸಿರಿ ವೇದಿಕೆ ಹೀಗೆ ನಾಲ್ಕು ತಾಣಗಳಲ್ಲಿ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಗೀತಗಾಯನದಲ್ಲಿ ತಮ್ಮ ಕಂಠ ಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next