ಸೇಡಂ: 12 ಅಡಿ ಆಳದ ಲಿಂಗದ ಉದರದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ಧ್ಯಾನ ಮುದ್ರೆ ಯಲ್ಲಿ ಸಮಾ ಧಿಸ್ಥರಾಗುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ಅಜರಾಮರರಾದರು. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅಮ್ಮನವರ ಪಾರ್ಥಿವ ಶರೀರವನ್ನು ಯಾನಾಗುಂದಿಯ ಆಶ್ರಮದ ಹೊರಗಡೆ ಇಡಲಾಗಿತ್ತು. ನಂತರ ಅಮ್ಮನವರು ಧ್ಯಾನ ಮಾಡುತ್ತಿದ್ದ ಒಳ ಮಂದಿರದಲ್ಲಿ ಸಮಾಧಿ ಮಾಡಲಾಯಿತು.
ಬೆಳಗ್ಗೆಯಿಂದಲೇ ಕಿಕ್ಕಿರಿದು ಆಗಮಿಸುತ್ತಿದ್ದ ಜನ ಅಮ್ಮನವರ ಅಂತಿಮ ದರ್ಶನ ಪಡೆದರು. ರಾಜ್ಯ ಸೇರಿ ಹೊರ ರಾಜ್ಯಗಳಿಂದ ಸುಮಾರು 3 ಲಕ್ಷ ಭಕ್ತರು ಆಗಮಿಸಿ ಅಮ್ಮನವರನ್ನು ಕಣ್ತುಂಬಿಕೊಂಡರು. ಸರ್ಕಾರದ ವತಿಯಿಂದ ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರಿಗೆ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ದೈವ ಗೌರವ ಸಲ್ಲಿಸಿದರು.
ನಂತರ ಮಧ್ಯಾಹ್ನ 2:30ಕ್ಕೆ ಮಹಾಮಂಗಳಾರತಿ, ಗರುಡ ಪುರಾಣ, ಮಂತ್ರ ಪಠಣದ ನಂತರ ಮಾತೆಯವರ ಪಾರ್ಥಿವ ಶರೀರವನ್ನು ಸಮಾಧಿ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಮಂಗಳಾರತಿ ನೆರವೇರಿಸಿ ಲಿಂಗದ ಉದರದಲ್ಲಿ ಧ್ಯಾನಸ್ಥ ರೂಪದಲ್ಲಿ ಕೂರಿಸಿ, ವಿಭೂತಿ ಹಾಗೂ ಬಿಲ್ವಪತ್ರಿ ಹಾಕಲಾಯಿತು.
ಅದ್ವೈತ ಸಿದ್ಧಾಂತದಡಿ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತ್ಯಸಂಸ್ಕಾರ ಸಕಲ ವಿಧಿ-ವಿಧಾನಗಳ ಮೂಲಕ ಆಶ್ರಮದ 108 ಶಾಖೆಗಳ ಮುಖ್ಯ ಆಚಾರ್ಯರ ನೇತೃತ್ವದಲ್ಲಿ ಮಂತ್ರಘೋಷಗಳ ನಡುವೆ ಸಮಾಧಿ ಮಾಡಲಾಯಿತು. ಹುಣ್ಣಿಮೆ ಜತೆಗೆ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತ್ಯಸಂಸ್ಕಾರ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಆಗಮಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು 2000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಅಮ್ಮನ ಧ್ಯಾನಸ್ಥ ಲಿಂಗ ಹೇಗಿದೆ?: ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಅವರು ಪೂರ್ವದಲ್ಲಿ ಧ್ಯಾನ ಮಾಡುತ್ತಿದ್ದ ಗುಹೆಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. 12 ಅಡಿ ಭೂಮಿಯ ಆಳದಲ್ಲಿರುವ ಶಿವಲಿಂಗದ ಗರ್ಭದಲ್ಲಿ ದ್ವಾರವಿದ್ದು, ಅದರ ಮೂಲಕ ಅಮ್ಮನವರನ್ನು ಒಳಗಿರುವ 3 ಅಡಿಯ ಸ್ಥಳದಲ್ಲಿ ಧ್ಯಾನಾವಸ್ಥೆಯಲ್ಲಿ ಸ್ಥಾಪಿಸಲಾಗಿದೆ. ಲಿಂಗ ಗರ್ಭದ್ವಾರಕ್ಕೆ ತಲುಪಲು ಮೆಟ್ಟಿಲುಗಳಿದ್ದು, ಅದರ ಮೂಲಕ ಅಮ್ಮನವರನ್ನು ಸಮಾ ಧಿ ಮಾಡಲಾಗಿದೆ.
ಕಂಬನಿ ಮಿಡಿದ ಎತ್ತು!
ಚಿಂಚೋಳಿ: ಯಾನಾಗುಂದಿ ಮಾತೆ ಮಾಣಿಕೇಶ್ವರಿ ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದಲ್ಲಿ ಭಕ್ತರು ಏರ್ಪಡಿಸಿದ್ದ ಶ್ರದ್ಧಾಂಜಲಿ ಸ್ಥಳಕ್ಕೆ ಎತ್ತು ಬಂದು ಕಂಬನಿ ಮಿಡಿದಿದೆ! ಪಟ್ಟಣದ ಅನೇಕ ಭಕ್ತರು ಸೇರಿಕೊಂಡು ರಾಜಾಧರ್ಮ ಪಾಲ ದೇವಡಿ ಹತ್ತಿರ (ಜೋಶಿ ಗಲ್ಲಿ) ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಅದೇ ಸಮಯದಲ್ಲಿ ಓಣಿಯಲ್ಲಿದ್ದ ಎತ್ತು ಬಂದು ಮಾತೆ ಮಾಣಿಕೇಶ್ವರ ಭಾವಚಿತ್ರದ ಮುಂದೆ ನಿಂತು ಕಣ್ಣೀರು ಸುರಿಸಿತು.