Advertisement

“ಮನೆ ವಿಷ್ಯಾ ಟಾಂ ಟಾಂ ಮಾಡ್ತಿಯಾ?’- ಮಾಸ್ತಿ ಗರಂ

03:14 AM Jun 06, 2021 | Team Udayavani |

ಜೂನ್‌ 6 , ಕನ್ನಡ ಭಾಷೆ, ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಧೀಮಂತ ಸಾಹಿತಿ, “ಸಣ್ಣ ಕಥೆಗಳ ಬ್ರಹ್ಮ’ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಜಯಂತಿ ಮತ್ತು ಪುಣ್ಯಸ್ಮರಣೆಯ ದಿನ. ಮನೆ ವಿಷ್ಯಾ ಟಾಂ ಟಾಂ ಮಾಡ್ತಿಯಾ? ಎಂಬ ಮಾಸ್ತಿ ಅವರ ಮಾತು ಇಂದಿಗೂ ಅನ್ವಯ.

Advertisement

ಕೋಲಾರ ಜಿಲ್ಲೆಯ ಹುಂಗೇನಹಳ್ಳಿಯಲ್ಲಿ ತಮಿಳು ಮಾತೃಭಾಷೆಯ ಮನೆತನದಲ್ಲಿ ಜನಿಸಿದ (1891)ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಜೀವಿತದ ಕೊನೆಯ ವರೆಗೂ (1986) ಕನ್ನಡಕ್ಕಾಗಿ ಶ್ರಮಿಸಿ “ಕನ್ನಡದ ಆಸ್ತಿ’ ಎಂದು ಪರಿಗಣಿಸಲ್ಪಟ್ಟರು. ಸರಕಾರದ ಉನ್ನತ ಅಧಿಕಾರಿಯಾಗಿದ್ದಾಗಲೂ ಅನಂತರವೂ ಸಣ್ಣಕಥೆ, ಕಾದಂಬರಿ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ವಿರಮಿಸದೆ ಸೇವೆ ಸಲ್ಲಿಸಿದರು.

1972ರಲ್ಲಿ ಬೆಂಗಳೂರಿನ ಪುರಭವನದಲ್ಲಿ ಮಾಸ್ತಿಯ ವರಿಗೆ ಅವರ ಕಾವ್ಯನಾಮ “ಶ್ರೀನಿವಾಸ’ ಹೆಸರಿನಲ್ಲಿ ಸಂಭಾವನ ಗ್ರಂಥವನ್ನು ಸಮರ್ಪಿಸಲಾಯಿತು. ಮಾಸ್ತಿಯವರ ಮೇಲಿನ ವಿಶೇಷ ಮಮತೆಯಿಂದ ಆರೋಗ್ಯ ಸರಿ ಇಲ್ಲದಿದ್ದರೂ ಡಿ.ವಿ. ಗುಂಡಪ್ಪ ಅವರು (ಡಿವಿಜಿ) ಗ್ರಂಥವನ್ನು ಲೋಕಾರ್ಪಣೆ ಮಾಡಿದ್ದರು. ಸುಮಾರು 80 ಗೌರವಾನ್ವಿತರು ಲೇಖನ ಒದಗಿಸಿ ಗ್ರಂಥಕ್ಕೆ ನಮನ ಸಲ್ಲಿಸಿ ದ್ದರು. ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ತಿ. ತಾ. ಶರ್ಮರ ಸಲಹೆಯಂತೆ ಗ್ರಂಥ ಹೊರತರುವಲ್ಲಿ ಯಶಸ್ವಿಯಾದವರು ಚಲನಚಿತ್ರ ನಿರ್ಮಾಪಕ, ಲೇಖಕ ಮಾವಿನಕೆರೆ ರಂಗನಾಥನ್‌.

ಕಾರ್ಯಕ್ರಮದಲ್ಲಿ 400 ಜನರು ಸರತಿಸಾಲಿನಲ್ಲಿ ನಿಂತು ಖರೀದಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಇತಿಹಾಸ. ಪುಸ್ತಕದ ಮಾರಾಟದಿಂದ ಬಂದ ಹಣದಲ್ಲಿ 10,000 ರೂ. ನಿಧಿಯನ್ನು ಬೆಂಗಳೂರು ವಿ.ವಿ.ಯಲ್ಲಿರಿಸಿ ಅದರ ಬಡ್ಡಿದರ ದಿಂದ ಪ್ರಸಾರಾಂಗದಿಂದ ಮುದ್ರಿಸಲು ಮತ್ತು ಲೇಖಕರಿಗೆ ಸಂಭಾವನೆ ಕೊಡಲು ಆಗಿನ ಕುಲಪತಿ ಡಾ| ಎಚ್‌. ನರಸಿಂಹಯ್ಯನವರ ಜತೆ ಒಪ್ಪಂದಕ್ಕೆ ಬರಲಾಯಿತು.

ಕಾರ್ಯಕ್ರಮ ನಡೆದು ವಾರದ ಬಳಿಕ ಮಾವಿನಕೆರೆ ಅವರು ಗವಿಪುರಂ ಗುಟ್ಟಳ್ಳಿಯಲ್ಲಿರುವ ಮಾಸ್ತಿಯವರ ಮನೆಗೆ ಹೋದರು. “ಏನಯ್ಯ, ಎಷ್ಟೊಂದು ಖರ್ಚು ಮಾಡಿದೆ? ಬೆಳ್ಳಿತಟ್ಟೆ, ಶಾಲು ಹೀಗೆ ಸಿಕ್ಕಾಪಟ್ಟೆ ಖರ್ಚು ಮಾಡಿದೆಯಲ್ವಾ? ಗ್ರಂಥವನ್ನೇನೋ ಜನರು ಓದ್ತಾರೆ. ಕೊಟ್ಟ ಹಣ್ಣುಗಳನ್ನು ಮಕ್ಳು ತಿಂತಾರೆ. ಉಳಿದದ್ದೇನು? ಈ ಶಾಲು, ಬೆಳ್ಳಿ ತಟ್ಟೆ. ನನಗೆ ವಯಸ್ಸಾಗಿದೆ.

Advertisement

ನೀನಿನ್ನೂ ಯುವಕ, ಶಾಲು ಹೊದ್ಕೊಳ್ಳು, ತಟ್ಟೆಯಲ್ಲಿ ಊಟ ಮಾಡು’ ಎಂದು ಮಾಸ್ತಿ ಹೇಳಿದರು. ಮಾವಿನಕೆರೆಗೆ ಅಳು ಬಂತು, ಹೊರಡಲು ಅನುವಾದರು. ಮಾಸ್ತಿಯವರು “ಏನಯ್ಯ ಹೊರಟೆ’ ಎಂದರು. “ನಾನೇನು ತಪ್ಪು ಮಾಡಿದೆ?’ ಎಂದು ಮಾವಿನಕೆರೆ ಕೇಳಿದರು. “ನೀನೊಳ್ಳೆ ಗಟ್ಟಿಗ ಎಂದ್ಕೊಡಿದ್ದೆ. ಈಗ ನೋಡಿದರೆ ಅಳು ಬುರುಕ ನಾಗಿದೆಯಲ್ಲಪ್ಪೊ?’. “ನಾನು ಒಂದು ವರ್ಷ ಕಷ್ಟ ಪಟ್ಟು 850 ಪುಟಗಳ ಗ್ರಂಥವನ್ನು ಹೊರತಂದೆ. ಎಲ್ಲ ಆದ ಬಳಿಕ ಅದಕ್ಕೆಷ್ಟು ಖರ್ಚು? ಇದಕ್ಕೆಷ್ಟು ಖರ್ಚು? ಎಂದು ಕೇಳಿದರೆ ಹೇಗಾಗುತ್ತೆ ಸಾರ್‌?’ ಎಂದರು ಮಾವಿನಕೆರೆ. “ಹಾಗಲ್ಲ ಕಣೋ, ಈ ತಟ್ಟೆ, ಶಾಲಿನ ದುಡ್ಡನ್ನು ಕೊಡುತ್ತೇನೆ. ನನ್ನಲ್ಲಿ ಪಿಂಚಣಿಯ ಬೇರೆ ಹಣವೂ ಇದೆ. ಎಲ್ಲ ಒಟ್ಟುಗೂಡಿಸಿ ಒಂದು ನಿಧಿ ಮಾಡೋಣ. ಬರುವ ಬಡ್ಡಿಯಲ್ಲಿ ಯಾರಾದರೂ ಲೇಖಕರು ಕಷ್ಟದಲ್ಲಿದ್ದರೆ ಅವರಿಗೆ ವರ್ಷಕ್ಕೊಮ್ಮೆ ಹೋಗಿ ಕೊಟ್ಟು ಬರೋಣ’ ಎಂದರು. ನಿಧಿಗೆ ಸರಸ್ವತಿ ಲಾಡ್ಜ್ನ ರಾಮಕೃಷ್ಣ ಐತಾಳ್‌ (ಡಾ| ಶಿವರಾಮ ಕಾರಂತರು ಪುತ್ತೂರು ಬಿಟ್ಟು ಸಾಲಿಗ್ರಾಮಕ್ಕೆ ಬರುವಾಗ ಅವರ ಜೀವಿತವಿಡೀ ಇರಲು ಮನೆ ನಿರ್ಮಿಸಿಕೊಟ್ಟವರು), ಇಂಡಿಯಾ ಬುಕ್‌ ಹೌಸ್‌ನ ಅನಂತರಾಮ್‌ ಹೀಗೆ ಇಬ್ಬರು ಮೂವರು ಸದಸ್ಯರು ಸೇರಿಕೊಂಡರು.

ಕೆಂಡಾಮಂಡಲದ ಕಿವಿಮಾತು
ಶೇ. 10-11 ಬಡ್ಡಿ ಬರುತ್ತಿದ್ದ ಸಮೃದ್ಧ ಕಾಲ. ವರ್ಷಕ್ಕೆ ಮೂರ್‍ನಾಲ್ಕು ಸಾವಿರ ರೂ. ಬಡ್ಡಿ ಬರುತ್ತಿತ್ತು. ಲೇಖಕರೂ ಈಗಿನಂತೆ ಕೈತುಂಬ ವೇತನ ಬರುವವರಾಗಿರಲಿಲ್ಲ. ಮೊದಲು ಮೂರ್‍ನಾಲ್ಕು ವರ್ಷ ಮಾಸ್ತಿಯವರೇ ಕಷ್ಟದಲ್ಲಿದ್ದ ಕನ್ನಡದ ಲೇಖಕರನ್ನು ಹುಡುಕಿ ಸಂಭಾವನೆ, ಹಣ್ಣುಗಳನ್ನು ಕೊಟ್ಟು ಬರುತ್ತಿದ್ದರು. ಅನಂತರ ಮಾವಿನಕೆರೆ ಮುಂದುವರಿಸಿದರು. ಒಮ್ಮೆ ಮಾವಿನಕೆರೆ “ಇಷ್ಟು ಜನರಿಗೆ ಸಹಾಯ ಮಾಡ್ತಿದ್ದೇವೆ. ಇದನ್ನು ಒಂದು ಸುದ್ದಿ ಮಾಡಿ ಪತ್ರಿಕೆಗಳಿಗೆ ಕೊಡ್ಲಾ?’ ಎಂದು ಕೇಳಿದರು. ಮಾಸ್ತಿಯವರು ಕೆಂಡಾಮಂಡಲವಾಗಿ “ಏನ್‌ ಹೇಳ್ತಿಯಾ ರಂಗನಾಥ? ಇದು ಮನೆ ವಿಷ್ಯ. ಕನ್ನಡ ಲೇಖಕರ ವಿಷ್ಯವೆಂದರೆ ಮನೆ ವಿಷ್ಯ. ಮನೆ ವಿಷ್ಯವನ್ನು ಊರಲ್ಲಿ ಟಾಂ ಟಾಂ ಮಾಡ್ತೀಯಾ? ಹೀಗೆಲ್ಲ ಮಾಡ್ಬೇಡ’ ಎಂದರು.

1992ರಲ್ಲಿ ಪ್ರೊ| ಎಲ್‌.ಎಸ್‌.ಶೇಷಗಿರಿ ರಾವ್‌, ಡಾ| ಹಾಮಾನಾ, ಡಾ| ಜಿ.ಎಸ್‌.ಶಿವರುದ್ರಪ್ಪ ಮೊದಲಾದವರ ಸಮ್ಮುಖ ಮಾಸ್ತಿ ಜನ್ಮಶತಮಾನೋತ್ಸವ ಆಚರಿಸಲಾಯಿತು. ಉಳಿದ ಹಣದಿಂದ ಪ್ರತೀ ವರ್ಷ ಲೇಖಕರಿಗೆ ಮಾಸ್ತಿ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಆರಂಭವಾಯಿತು. 1996ರಲ್ಲಿ ಸರಕಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಪ್ರತಿಷ್ಠಾನ ರಚಿಸಿತು. ಮೊದಲು ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದರು. 1998ರ ಬಳಿಕ ಮಾವಿನಕೆರೆ ರಂಗನಾಥನ್‌ ಅವರನ್ನು ಅಧ್ಯಕ್ಷರಾಗಿ ಸರಕಾರ ನೇಮಿಸಿತು. ಕಾಲಾಂತರದಲ್ಲಿ 1972ರಲ್ಲಿ ಮಾಸ್ತಿ ಯವರೇ ಹುಟ್ಟುಹಾಕಿದ ನಿಧಿಯನ್ನು ಟ್ರಸ್ಟ್‌ ಖಾತೆಗೆ ವಿಲೀನಗೊಳಿಸಲಾಯಿತು. ಈಗಲೂ ಮಾವಿನಕೆರೆ ಟ್ರಸ್ಟ್‌ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ, ವರ್ಷವೂ ಮಾಸ್ತಿ ನೆನಪಿನ ವಿವಿಧ ಕಾರ್ಯಕ್ರಮ ನಡೆಯುತ್ತಿದೆ.

ಮಾಸ್ತಿ ಸಂಭಾವನ ಗ್ರಂಥಕ್ಕೆ ಮಣಿಪಾಲದ ಅಳಿಲುಸೇವೆ
1972ರಲ್ಲಿ ಮಣಿಪಾಲ ಪ್ರಸ್‌ಗೆ “ಶ್ರೀನಿವಾಸ’ ಅಭಿ ನಂದನ ಗ್ರಂಥದ ಮುಖಪುಟ ಮುದ್ರಿಸುವ ಅವಕಾಶ ಸಿಕ್ಕಿತ್ತು. ಆಗ ಪ್ರಸ್‌ನ ಮೆನೇಜರ್‌ ಆಗಿ ಬೈಕಾಡಿ ಕೃಷ್ಣಯ್ಯನವರಿದ್ದರು. “ನೋಡಿ ಕೃಷ್ಣಯ್ಯನೋರೆ, ಒಳ್ಳೆಯ ಗುಣಮಟ್ಟದ ರ್ಯಾಪರ್‌ ಹಾಕಿ ಕವರ್‌ ಮಾಡಿ ಕೊಡಬೇಕು’ ಎಂದು ಗ್ರಂಥದ ಪ್ರಕಾಶಕರೂ, ಸಂಪಾ ದಕರೂ ಆದ ಮಾವಿನಕೆರೆ ರಂಗನಾಥನ್‌ ಹೇಳಿದಾಗ ಕಾಳಜಿಯಿಂದ ಮಾಡಿಕೊಟ್ಟವರು ಕೃಷ್ಣಯ್ಯ. ಆಗ “ಉದಯವಾಣಿ’ ಜನಿಸಿ 2 ವರ್ಷಗಳಾಗಿತ್ತಷ್ಟೇ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next