Advertisement
96 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ನಾಟಕ, ಸಿನೆಮಾ, ಪರಿಸರ, ಯಕ್ಷಗಾನ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಡವರು. ಡಾ| ಕಾರಂತರನ್ನು, ಡಾ| ಹಾ.ಮಾ. ನಾಯಕರು “ಯಾವ ಮಾನದಂಡದಿಂದ ಅಳೆದರೂ ಕಾರಂತರು ವಿಶ್ವ ಲೇಖಕರ ಪಟ್ಟಿಯಲ್ಲಿ ಸೇರಬಲ್ಲ ಮಹಾನ್ ಲೇಖಕ’ ಎಂದು ಬಣ್ಣಿಸಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಲಡ್ಡಿ ಇಲ್ಲ.
Related Articles
Advertisement
1930ರ ದಶಕದಲ್ಲಿ ಕೆಲವು ವರ್ಷಗಳ ಕಾಲ ಮುದ್ರಣ ತಂತ್ರದಲ್ಲಿ ತೊಡಗಿಸಿಕೊಂಡು, ತಮ್ಮ ಹಲವು ಕಾದಂಬರಿಗಳನ್ನು ಮುಖಪುಟ ಚಿತ್ರ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಕಾರಂತರದ್ದು. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತರವರು ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು, ಮೂಕಿ ಚಿತ್ರ ನಿರ್ಮಾಣ ಮಾಡುವ ಮೂಲಕ ಹರಿಜನರ ಬದುಕನ್ನು ಆಧರಿಸಿದ “ಡೊಮಿಂಗೋ’ ಚಿತ್ರವನ್ನೂ ಚಿತ್ರೀಕರಿಸಿ ಅಭಿನಯಿಸಿ ನಿರ್ದೇಶಿಸಿದರು.
ಕಾರಂತರ ಕಾದಂಬರಿಗಳಲ್ಲಿ ಪರಿಸರ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲಿ ಪರಿಸರದ ಜೀವಿಗಳಿಗೆ ಹೋರಾಡಿದ ಕಾರಂತರು, ಕೈಗಾ ಅಣು ವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಅಸಂಖ್ಯ ಗೋಷ್ಠಿಗಳು, ಸಮ್ಮೇಳನಗಳು, ಅಧ್ಯಕ್ಷ ಪಟ್ಟಗಳು, ಸಮ್ಮಾನಗಳು ಕಾರಂತರನ್ನು ಅರಸಿಕೊಂಡು ಬಂದವು. ಜ್ಞಾನಪೀಠ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ವಿವಿಧ ವಿಶ್ವವಿದ್ಯಾನಿಲಯಗಳ ಡಾಕ್ಟರೆಟ್ ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವುಗಳು.
ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ ಕಾರಂತಜ್ಜರನ್ನು, ಕವಿ ಗೋಪಾಲಕೃಷ್ಣ ಅಡಿಗರು “ಕಾರಂತರ ಪರಿಚಯ ಮಾಡಿ ಕೊಡುವುದೂ ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದೂ ಒಂದೇ’ ಎಂದು ಹೇಳಿದ್ದು ಅರ್ಥಪೂರ್ಣವಾಗಿದೆ. ಪುತ್ತೂರಿನಲ್ಲಿ ನೆಲೆಸಿದ ಕಾರಂತರ ಆಗಿನ ಮನೆ, ಪ್ರಸ್ತುತ ಈಗ ವಸ್ತು ಸಂಗ್ರಹಾಲಯ, ಉದ್ಯಾನವನ ಮತ್ತು ಮನೋರಂಜನ ಕೇಂದ್ರವಾಗಿದೆ. ಇದೊಂದು ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಟ್ರಸ್ಟಿನ ಜಿಲ್ಲಾಡಳಿತದ ಸುಪರ್ದಿಯಲ್ಲಿ ನಿರ್ವಹಿಸಲ್ಪಡುತ್ತಿದೆ.
ಮಕ್ಕಳಿಂದ ವಯೋವೃದ್ಧರ ವರೆಗೆ ಸಾಹಿತ್ಯ ಕೃಷಿ ಮಾಡಿ ಚಿಂತಿಸಿದ ಕಾರಂತರು ದೇಶಕ್ಕೆ ದೊಡ್ಡ ನಿಧಿಯಗಿದ್ದು, ಅವರ ಜನ್ಮ ಸ್ಥಳ ಉಡುಪಿಯ ಕೋಟದಲ್ಲಿ “ಶಿವರಾಮ ಕಾರಂತ ಥೀಮ್ ಪಾರ್ಕ್’ ಅನ್ನು ಕಾರಂತರ ಸವಿನೆನಪಿಗಾಗಿ 2011ರಲ್ಲಿ ಕೋಟದ ಕೋಳ್ಕೆರೆಯಲ್ಲಿ “ಕಾರಂತರ ಅಭಿಮಾನಿ ಸಮಾನ ಮನಸ್ಕರ ತಂಡ’ ನಿರ್ಮಾಣ ಮಾಡಿದ್ದು, ಅಲ್ಲಿ ಕಾರಂತರ ಇಡೀ ಜೀವನಕ್ಕೆ ಸಂಬಂಧಿಸಿದ ವಿಷಯ ಸಂಗ್ರಹವಿದೆ.
ಪ್ರತೀ ವರ್ಷ ಕೋಟದಲ್ಲಿ ಒಂದು ವಾರ ಶಿವರಾಮ ಕಾರಂತರ ಜನ್ಮ ದಿನವನ್ನು ಆರ್ಥಪೂರ್ಣವಾಗಿ ಆಚರಿಸಿ, ಆವರ ಜನ್ಮದಿನವಾದ ಅಕ್ಟೋಬರ್ 10ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಓರ್ವ ಶ್ರೇಷ್ಠ ವ್ಯಕ್ತಿಗೆ “ಶಿವರಾಮ ಕಾರಂತ ಪ್ರಶಸ್ತಿ’ಯನ್ನು ನೀಡುವ ಮೂಲಕ, ಕಾರಂತರ ನೆನಪನ್ನು ಸದಾ ಹಸುರಾಗಿಸುವ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ “ಕಾರಂತ ಥೀಮ್ ಪಾರ್ಕ್’ ತಂಡದ ಕಾರ್ಯ ಸ್ತುತ್ಯರ್ಹವಾಗಿದೆ.
– ಕನ್ನಾರು ಕಮಲಾಕ್ಷ ಹೆಬ್ಬಾರ್