Advertisement

ಬೆಣ್ಣೆಹಳ್ಳ ಹಾವಳಿ ತಡೆಗೆ ಮೇಷ್ಟ್ರ ಪ್ಲ್ಯಾನ್; ಪ್ರಧಾನಿ ಕಚೇರಿಯಿಂದಲೂ ಜಾರಿ ಭರವಸೆ

01:23 PM Oct 25, 2022 | Team Udayavani |

ಧಾರವಾಡ: ಇವರು ಮಾಡಿದ ಐಡಿಯಾಕ್ಕೆ ಸಚಿವರೇ ತಲೆದೂಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದರೂ ನೀರಿನ ಸದುಪಯೋಗದ ಬಗ್ಗೆ ಇವರು ತಲೆಕೆಡಿಸಿಕೊಂಡಿದ್ದಾರೆ. ರೈತರ ಸಂಕಷ್ಟಕ್ಕೆ ಶಿಕ್ಷಕರೊಬ್ಬರು ಪರಿಹಾರಕ್ಕೆ ಯತ್ನಿಸಿದ್ದಾರೆ. ಇವರು ಅಂದುಕೊಂಡಂತೆ ನಡೆದರೆ ನದಿಗಳೇ ಇಲ್ಲದ ಜಿಲ್ಲೆಯ ನೀರೆಲ್ಲವೂ ಸದ್ಭಳಕೆಯಾಗಲಿದೆ.

Advertisement

ಹೌದು, ದೈತ್ಯ ಮಳೆಯಾದರೆ ಸಾಕು ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಹಾವಳಿ ಹನುಮನಂತಾಗಿ ಬಿಡುತ್ತದೆ. ಪ್ರತಿವರ್ಷ ಸುಮ್ಮನೆ ಹರಿದು ಹೋಗುವ ಬರೋಬ್ಬರಿ 22 ಟಿಎಂಸಿ ಅಡಿ ಬೆಣ್ಣೆಹಳ್ಳದ ನೀರು ಸದ್ಭಳಕೆಗೆ ಡಾ| ಪರಮಶಿವಯ್ಯ ಅವರು ನೀಡಿದ ವರದಿ ಜಾರಿಯಾಗಬೇಕು. ಅದು ಆಗುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ.

ಆದರೆ ಸರ್ಕಾರಿ ಶಾಲಾ ಶಿಕ್ಷಕ ಜೆ.ಡಿ. ಬಡಿಗೇರ ಸ್ವಂತ ಹಣ ಹಾಕಿ ನುರಿತ ಎಂಜಿನಿಯರ್‌ ಗಳು ಮತ್ತು ಜಲತಜ್ಞರನ್ನು ಸಂಪರ್ಕಿಸಿ ಇಡೀ ಬೆಣ್ಣೆಹಳ್ಳವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಅದರ ನೀರನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಅಧ್ಯಯನ ನಡೆಸಿದ್ದಾರೆ. ಅಷ್ಟೇಯಲ್ಲ, ಎಲ್ಲೆಲ್ಲಿ ಬೆಣ್ಣೆಹಳ್ಳ ಪ್ರವಾಹ ಸೃಷ್ಟಿಸಿ ರೈತರಿಗೆ, ಜಮೀನುಗಳಿಗೆ ಹಾನಿ ಮಾಡುತ್ತದೆಯೋ ಅಂತಹ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪ್ರವಾಹ ಉಂಟಾಗದಂತೆ ಮಾಡಲು ಮಿನಿ ಡ್ಯಾಂಗಳನ್ನು ನಿರ್ಮಿಸಿ ನೀರಿನ ಸದ್ಬಳಕೆ ಮಾಡಿಕೊಳ್ಳುವ ಕುರಿತು ವಿಸ್ತ್ರತ ವರದಿ ಸಜ್ಜುಗೊಳಿಸಿದ್ದಾರೆ.

ಶಿಕ್ಷಕ ಜೆ.ಡಿ. ಬಡಿಗೇರ ಅವರು ತಮ್ಮ ಸ್ವ ಆಸಕ್ತಿಯಿಂದ ಬೆಣ್ಣೆಹಳ್ಳದ ನೀರು ಸದುಪಯೋಗ ಕುರಿತು ಯೋಜನಾ ವರದಿ ಸಿದ್ಧಪಡಿಸಿದ್ದಾರೆ. ಅಷ್ಟೇಯಲ್ಲ, ಇದನ್ನು ಸ್ವತಃ ಪ್ರಧಾನ ನರೇಂದ್ರ ಮೋದಿ ಅವರಿಗೂ ಕಳುಹಿಸಿಕೊಟ್ಟಿದ್ದಾರೆ.

ಪ್ರಧಾನಿ ಕಚೇರಿಯಿಂದ ಅವರಿಗೆ ಇದರ ಅನುಷ್ಠಾನದ ಬಗ್ಗೆ ಭರವಸೆಯೂ ಸಿಕ್ಕಿದೆ. ಬ್ಯಾಹಟ್ಟಿ ನೀರಾವರಿ ಕಚೇರಿಗೆ ಪ್ರಧಾನಿ ಕಚೇರಿ ಸಂಪರ್ಕಿಸಿ ಅಧಿಕಾರಿಗಳಿಗೆ ಈ ಯೋಜನೆ ಕುರಿತು ಮಾಹಿತಿ ನೀಡುವಂತೆ ಸೂಚನೆ ಬಂದಿತ್ತು. ಇದರ ಅನ್ವಯ ಬ್ಯಾಹಟ್ಟಿ ನೀರಾವರಿ ಕಚೇರಿ ಅಧಿಕಾರಿಗಳು ಈಗಾಗಲೇ ಬಂದು ಶಿಕ್ಷಕ ಬಡಿಗೇರ ಅವರನ್ನು ಕರೆದುಕೊಂಡು ಬೆಣ್ಣೆಹಳ್ಳವನ್ನು ಸಮಗ್ರವಾಗಿ ಸುತ್ತಿ, ಎಲ್ಲೆಲ್ಲಿ ಚೆಕ್‌ಡ್ಯಾಂಗಳು, ಬಾಂದಾರಗಳು ಮತ್ತು ಸಣ್ಣ ಡ್ಯಾಂಗಳನ್ನು ನಿರ್ಮಿಸಬಹುದು ಎಂಬ ಬಗ್ಗೆ ಸಮಗ್ರ ವಿವರಣೆಯನ್ನು ಪಡೆದು ಪ್ರಧಾನಿ ಕಚೇರಿಗೆ ಕಳುಹಿಸಿದ್ದಾರೆ.

Advertisement

ಏನಿದು ಯೋಜನೆ?
ಬೆಣ್ಣೆಹಳ್ಳ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಧುಂಡಸಿ ಬಳಿ ಹುಟ್ಟಿ ಅಲ್ಲಿಂದ ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ನರಗುಂದ ತಾಲೂಕಿನ ಮೂಲಕ ಹರಿದು ಮಲಪ್ರಭಾ ನದಿ ಸೇರುತ್ತದೆ. ಒಟ್ಟು ಇಲ್ಲಿ 16 ಹಳ್ಳಗಳು ಸೇರಿಕೊಳ್ಳುತ್ತವೆ. ಹಳ್ಳದ ಪ್ರಾರಂಭದಿಂದ ಕೊನೆಯ ವರೆಗೂ ನೆರೆಹಾವಳಿ ಪ್ರದೇಶಗಳನ್ನು ಗುರುತಿಸಿ ಹಳ್ಳದ ಮಧ್ಯದಿಂದ ಎಡ ಮತ್ತು ಬಲ ಭಾಗದಲ್ಲಿ ಸುಮಾರು 100 ಅಡಿ ಅಗಲ ಬರುವ ರೀತಿ ಅಂದರೆ ಎರಡು ದಂಡೆಗಳ ನಡುವಿನ ಅಂತರ 200 ಅಡಿಯಷ್ಟು ಹಾಗೂ 5-10 ಅಡಿ ಆಳ ಹೆಚ್ಚಿಸಬೇಕು. ಇದರಿಂದ ನೀರು ನಿಲ್ಲುವ ವಿಸ್ತಾರ ಹೆಚ್ಚುತ್ತದೆ. ನೀರಿನ ರಭಸವೂ ಕಡಿಮೆಯಾಗುತ್ತದೆ.

ಬೇರೆ ಹಳ್ಳಗಳು ಬಂದು ಸೇರುವ ಸ್ಥಳಗಳಲ್ಲಿ ಕೂಡ 200-300 ಅಡಿಗಳಷ್ಟು ಹಾಗೂ ಇದ್ದ ಆಳವನ್ನು ಆಯಾ ಆಯಕಟ್ಟು ಪ್ರದೇಶಕ್ಕಿಂತ ತೆಗ್ಗು ಮಾಡಬೇಕು. ಇದಕ್ಕೆ ತಡೆಗೋಡೆ ಮತ್ತು ದಂಡೆಗಳನ್ನು ನಿರ್ಮಿಸಿ ಮೇಲೆ ರಸ್ತೆಗಳನ್ನು ನಿರ್ಮಿಸಬಹುದಾಗಿದೆ. ಹಳ್ಳದುದ್ದಕ್ಕೂ ಸುಮಾರು 2 ಕಿಮೀ ದೂರದ ವರೆಗೆ ಅಡ್ಡಗೋಡೆ (ಬಂಡಿಂಗ್‌)ಕಟ್ಟಬೇಕು. ಇದರ ಜೊತೆಗೆ ತಡೆಗೋಡೆ ಮೇಲೆ ಜಾಲರಿಗಳನ್ನು ನಿರ್ಮಿಸಿ ಕಸಕಡ್ಡಿ ಹಳ್ಳ ಸೇರದಂತೆ ನೋಡಿಕೊಳ್ಳಬೇಕು. ಇದರಿಂದ ಬೆಣ್ಣೆಹಳ್ಳದ ಹಾವಳಿ ತಪ್ಪಿಸಬಹುದಾಗಿದೆ.

1,536 ಕೋಟಿ ರೂ. ಪ್ರಸ್ತಾವನೆ
ಯೋಜನೆ ಅನುಷ್ಠಾನ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಅಗತ್ಯ ಅನುದಾನಕ್ಕೂ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಜಗದೀಶ ಶೆಟ್ಟರ ಅವರು ಬಡಿಗೇರ ಅವರ ಬೆಣ್ಣೆಹಳ್ಳ ಅಭಿವೃದ್ಧಿ ಯೋಜನೆ ಮನವಿಗೆ ಸ್ಪಂದಿಸಿ ಯೋಜನಾ ವರದಿ ಆಧರಿಸಿ 1536 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು 5 ಚಿಕ್ಕ ಡ್ಯಾಮ್‌ಗಳನ್ನು ನಿರ್ಮಿಸಬಹುದಾಗಿದೆ.ಇಂತಹ ಡ್ಯಾಂ ನಿರ್ಮಿಸಿದ ಸ್ಥಳದಲ್ಲಿ ಹಳ್ಳದುದ್ದಕ್ಕೂ ಸರಾಸರಿ 1-2 ಕಿಮೀ ವರೆಗೂ ನೀರು ಆತು ನಿಲ್ಲುತ್ತದೆ.

ಇನ್ನು ಬೆಣ್ಣೆಹಳ್ಳದ ಪ್ರತಿ 5 ಕಿಮೀಗೆ ಒಂದಂತೆ ಬ್ಯಾರೇಜ್‌ ನಿರ್ಮಿಸಬಹುದು. ನವಲಗುಂದ ಗುಡ್ಡದ ಬಳಿ, ಅರೆ ಕುರಹಟ್ಟಿ, ಇಂಗಳಹಳ್ಳಿ, ಶಿರೂರು ಮತ್ತು ಮತ್ತಿಕಟ್ಟಿ ಬಳಿ ಮಾಡಬಹುದಾಗಿದೆ. ಮತ್ತಿಕಟ್ಟಿ ಎರಡು ಗುಡ್ಡಗಳ ಮಧ್ಯೆ ಇರುವ ಮಾಸ್ತಿ ಹಳ್ಳ ಸೇರಿಸಿಕೊಂಡು ಅಲ್ಲಿನ ನೀರನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಹುಬ್ಬಳ್ಳಿ ತಾಲೂಕು ಪುಣೆ-ಬೆಂಗಳೂರು ರಸ್ತೆಯ ಮಸಾರಿ ಜಮೀನು ಪ್ರದೇಶವನ್ನೇ ಬಳಸಿಕೊಂಡು ಇಲ್ಲಿಯೇ ಮಿನಿ ಡ್ಯಾಂ ಕಟ್ಟಲು ಅವಕಾಶವಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಪ್ರಸ್ತಾವದಲ್ಲಿರುವುದೇನು?
ಬೆಣ್ಣೆಹಳ್ಳವನ್ನು ಮೊದಲು ನದಿ ಎಂದು ಪರಿವರ್ತಿಸಬೇಕಾಗಿದೆ. ಇದರಿಂದಲೇ ಅಭಿವೃದ್ಧಿಗೆ ಪೂರಕವಾದ ಹಣ ಹರಿದು ಬರಲು ಸಾಧ್ಯ. ಬೆಣ್ಣೆಹಳ್ಳ ಅಭಿವೃದ್ಧಿ ಪಡಿಸಿ ಅದರ ನೀರನ್ನು ಸದ್ಭಳಕೆ ಮಾಡಿಕೊಂಡಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಗತ್ಯವಾದ ನೀರನ್ನು ಇಲ್ಲಿಂದಲೇ ಪಡೆದುಕೊಳ್ಳಬಹುದಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ನರ್ಸರಿ, ಶೌಚಾಲಯ, ಜಾನುವಾರುಗಳಿಗೆ ಮತ್ತು ಸಣ್ಣ ಪುಟ್ಟ ಕಾರ್ಖಾನೆಗಳಿಗೆ ಬಳಸಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಪ್ಪು ಮತ್ತು ಮಸಾರಿ ಮಣ್ಣು ಹಳ್ಳದಲ್ಲಿ ಕೊಚ್ಚಿಕೊಂಡು ಬರುವುದರಿಂದ ಇದನ್ನು ಕುಂಬಾರಿಕೆಗೆ ಬಳಸಲು ಕೂಡ ಯೋಗ್ಯವಾಗಿದೆ.

ಮೋದಿ ಕಚೇರಿಯಿಂದ ಸಂಪರ್ಕ
ಬೆಣ್ಣೆಹಳ್ಳ ಅಭಿವೃದ್ಧಿ ಬಗ್ಗೆ ನಾನು ನೀಡಿದ ವರದಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ಅವರ ಆಪ್ತ ಸಹಾಯಕರಾದ ಪ್ರದೀಪ ರೈ ಅವರು ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದ್ದರು. ಇದು ಉತ್ತಮ ಯೋಜನೆಯಾಗಿದ್ದು, ಇದನ್ನು ಜಾರಿಗೊಳಿಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.
*ಜೆ.ಡಿ. ಬಡಿಗೇರ,
ಬೆಣ್ಣೆಹಳ್ಳ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿದ ಶಿಕ್ಷಕ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next