ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢಸ್ವಾಮಿ ಮಠ ರಾಷ್ಟ್ರಮಟ್ಟದಲ್ಲಿ ಪ್ರಮುಖ ಆಧ್ಯಾತ್ಮ ಹಾಗೂ ಧಾರ್ಮಿಕ ಕೇಂದ್ರವಾಗಿದೆ. ಬರುವ ಭಕ್ತರಿಗೆ ಉತ್ತಮ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಮಾಸ್ಟರ್ ಪ್ಲ್ಯಾನ್ ಗೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಸಿದ್ಧರೂಢಸ್ವಾಮಿ ಮಠಕ್ಕೆ ಭೇಟಿ ನೀಡಿ ಸದ್ಗುರು ಸಿದ್ಧಾರೂಢಸ್ವಾಮಿ, ಸದ್ಗುರು ಗುರುನಾಥರೂಢಸ್ವಾಮಿ ಗದ್ದುಗೆ ದರ್ಶನ ಪಡೆದು, ಶ್ರೀ ಮಠ ಟ್ರಸ್ಟ್ ಗೆ ಸರಕಾರದಿಂದ ಬಿಡುಗಡೆಯಾದ 50 ಲಕ್ಷ ರೂ.ಗಳ ಚೆಕ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ಅವರ ಸಿಎಂ ಆಗಿದ್ದಾಗ 2 ಕೋಟಿ ರೂ.ಗಳನ್ನು ನೀಡಿದ್ದರು. ನಾನು 1 ಕೋಟಿ ಮಂಜೂರು ಮಾಡಿದ್ದು ಅದರಲ್ಲಿ 50 ಕೋಟಿ ರೂ.ಬಿಡುಗಡೆಗೊಂಡಿದ್ದು, ನಿನ್ನೆ ಹಣ ಜಮಾ ಆಗಿದೆ ಎಂದರು.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ: ಎರಡನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ ಭಾರತ
ಇದೊಂದು ಆಧ್ಯಾತ್ಮಿಕ-ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ದೇಶದ ವಿವಿಧ ಕಡೆಯಿಂದ ಭಕ್ತರು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ತಕ್ಕರೀತಿಯ ಸೌಲಭ್ಯಗಳ ಕೊರತೆ ಇದೆ ಎಂದರು.
ಸರಕಾರದಿಂದ ದೊರೆತ ಹಣ ವ್ಯವಸ್ಥಿತ ರೀತಿಯಲ್ಲಿ ಬಳಕೆ ಆಗಬೇಕು. ಉತ್ತಮ ಸೌಲಭ್ಯಗಳು ದೊರೆಯಬೇಕಾದರೆ ವ್ಯವಸ್ಥಿತ ಅಭಿವೃದ್ಧಿ ಗೆ ಮಾಸ್ಟರ್ ಪ್ಲ್ಯಾನ್ ಅವಶ್ಯವಾಗಿದೆ. ಶಿರಡಿ ಮಾದರಿಯಲ್ಲಿ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ ನೀಡಲು ಸರಕಾರ ಸಿದ್ಧವಿದೆ ಎಂದರು.