ಕೊಪ್ಪಳ/ಗಂಗಾವತಿ: ವಿಶ್ವಪ್ರಸಿದ್ಧ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸಮಗ್ರ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ಇದಕ್ಕೆ ನೂರಾರು ಕೋಟಿ ರೂ. ಅನುದಾನ ಬೇಕಿದ್ದು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂಜನಾದ್ರಿ ಪ್ರಸಿದ್ಧ ತಾಣವಾಗಿದೆ. ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದನ್ನು ವಿಶ್ವಮಟ್ಟದಲ್ಲಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಮಾಡುವ ಅಗತ್ಯವಿದ್ದು, ಜಿಲ್ಲೆಯ ಶಾಸಕರು ಅಭಿವೃದ್ಧಿಗೆ ಹಲವು ಬಾರಿ ನನ್ನನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಹಿಂದೆಯೇ ಸಚಿವ ಈಶ್ವರಪ್ಪ ಸೇರಿ ನಾವು ಸ್ಥಳಕ್ಕೆ ಆಗಮಿಸುವ ಯೋಜನೆ ಮಾಡಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಅಭಿವೃದ್ಧಿ ಕುರಿತಂತೆ ಸಭೆ ನಡೆಸಿದ್ದೇವೆ. ಇಲ್ಲಿನ ಸ್ಥಳ ಪರಿಶೀಲನೆಗೆ ಕೊಪ್ಪಳ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದರು.
ಬೇಕು ನೂರಾರು ಕೋಟಿ: ಅಂಜನಾದ್ರಿ ಬೆಟ್ಟ ಕೇವಲ ಪ್ರವಾಸೋದ್ಯಮ ಇಲಾಖೆಯಿಂದ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾಲ್ಕೈದು ಇಲಾಖೆಗಳ ಸಹಯೋಗದಲ್ಲಿ ಇದನ್ನು ಅಭಿವೃದ್ಧಿ ಮಾಡುವ ಅಗತ್ಯವಿದೆ. ಅಂಜನಾದ್ರಿಗೆ ಕೋಟ್ಯಂತರ ರೂ. ಆದಾಯ ಬರುತ್ತಿದೆ. ಹಾಗಾಗಿ ಇದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದು, ನೂರಾರು ಕೋಟಿ ರೂ. ಅನುದಾನ ಬೇಕಾಗುತ್ತದೆ. ಈ ದೃಷ್ಟಿಯಿಂದ ಹಲವು ಸಚಿವರು ಈ ಬಗ್ಗೆ ಚರ್ಚಿಸಿದ್ದೇವೆ ಎಂದರು.
4 ತ್ರೀಸ್ಟಾರ್ ಹೋಟೆಲ್: ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ತ್ರೀಸ್ಟಾರ್ ಹೋಟೆಲ್ ಆರಂಭಿಸಲು ಉದ್ಯಮಿಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ನಾಲ್ಕು ಸ್ಥಳಗಳಲ್ಲಿ ತ್ರೀಸ್ಟಾರ್ ಹೋಟೆಲ್ ಆರಂಭಿಸಲು ನಿರ್ಧರಿಸಿದ್ದೇವೆ. ಕಲಬುರಗಿಯಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇಲ್ಲಿಯೂ ಹೋಟೆಲ್ ಆರಂಭಿಸುವ ಕುರಿತಂತೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇಲ್ಲಿ ಕೆಲವೊಂದು ಭೂಮಿ ವಿವಾದವಿದೆ. ಅವೆಲ್ಲವು ಬಗೆಹರಿಯಬೇಕೆಂದರೆ ನಾಲ್ಕೈದು ಸಚಿವರು ಒಟ್ಟಾಗಿ ಸೇರಬೇಕಿದೆ ಎಂದರು.
ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ: ಆಂಜನೇಯ ಅಂಜನಾದ್ರಿಯಲ್ಲಿಯೇ ಜನಿಸಿದ್ದು ಎನ್ನುವುದಕ್ಕೆ ನಮ್ಮಲ್ಲಿ ಹಲವು ಸಾಕ್ಷ್ಯಗಳಿವೆ. ಇತಿಹಾಸ ಪುರಾವೆ ಇವೆ. ಇಲ್ಲಿ ಪೌರಾಣಿಕ ಹಿನ್ನೆಲೆಯೂ ಇದೆ. ಯಾರೋ ನಾಲ್ಕು ಜನರು ಅಂಜನಾದ್ರಿಯಲ್ಲಿ ಹನುಮಂತ ಜನಿಸಿಲ್ಲ ಎಂದರೆ ನಾವು ಒಪ್ಪಲ್ಲ. ಅಂಜನಾದ್ರಿಯಲ್ಲೇ ಹನುಮಂತನು ಜನಿಸಿದ್ದು ಎನ್ನುವುದನ್ನು ನಾವು ಸಾರಿ ಸಾರಿ ಹೇಳುತ್ತೇವೆ. ಸರ್ಕಾರದ ನಿಲವು ಇದೇ ಆಗಿದೆ. ಮುಂದಿನ ದಿನದಲ್ಲಿ ಅದನ್ನು ಘೋಷಣೆ ಮಾಡಲಿದ್ದೇವೆ ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಸೇರಿದಂತೆ ಗಣ್ಯರು ಸಚಿವರು ಹಾಗೂ ಶ್ರುತಿ ಅವರನ್ನು ಸನ್ಮಾನಿಸಿ ಆಂಜನೇಯನ ಭಾವಚಿತ್ರ ಅರ್ಪಿಸಿದರು.