ನಟ ಮಾಸ್ಟರ್ ಆನಂದ್ ಹೀರೋ ಆಗಿ ನಟಿಸಿರುವ ಸಿನಿಮಾವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಅದು “ನಾ ಕೋಳಿಕೆ ರಂಗ’. ಈ ಚಿತ್ರ ನ.10ರಂದು ತೆರೆಕಾಣಲಿದೆ.
ಈ ಚಿತ್ರದ ಬಗ್ಗೆ ಮಾತನಾಡುವ ಆನಂದ್, “ಕೊರೊನಾ ಮೊದಲು ಈ ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ಚಿತ್ರದಲ್ಲೊಂದು ಹಾಡಿದೆ. “ಮರೆಯೋದುಂಟೆ ಮೈಸೂರ ದೊರೆಯ’ ಈ ಹಾಡು ಹೈಲೈಟ್. ಮೈಸೂರು ದಸರಾ ಮತ್ತು ಮಹಾರಾಜರ ಬಗ್ಗೆ ವಿಷಯವಿದೆ. ಅಪ್ಪು ಅವರು ನನ್ನ ಸಿನಿಮಾದ ಇಂಟ್ರೊಡಕ್ಷನ್ ಸಾಂಗ್ ಹಾಡಿದ್ದಾರೆ. ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ ಮೈಸೂರು ಸೊಗಡಿನ ಭಾಷೆ ಇದೆ’ ಎಂದರು.
ಅಂದಗಾಗೆ, ಇದೊಂದು ರೀತಿ ಟ್ರಯಾಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಅನ್ನೋದು ಸಸ್ಪೆನ್ಸ್ ಎಂಬುದು ತಂಡದ ಮಾತು.
ಚಿತ್ರವನ್ನು ಸೋಮೇಖರ್ ನಿರ್ಮಿಸಿದ್ದು, ಗೊರವಾಲೆ ಮಹೇಶ್ ನಿರ್ದೇಶಿಸಿದ್ದಾರೆ. “ಇದು ನನ್ನ ಮೊದಲ ಚಿತ್ರ. ಮೌಡ್ಯಗಳ ಕುರಿತು ಕಥೆ ಸಾಗಲಿದೆ. ಹರಕೆ ಬಲಿ ಬಗ್ಗೆಯ ಹಳ್ಳಿ ಕಥೆ ಇದೆ. ಒಂದೊಳ್ಳೆಯ ವಿಷಯ ಈ ಮೂಲಕ ಹೇಳ ಹೊರಟಿದ್ದೇನೆ’ ಎಂದರು ಗೊರವಾಲೆ ಮಹೇಶ್.
ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ತಾಯಿ ಪಾತ್ರ ಮಾಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಮಾತನಾಡಿ, ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ. ಮಗಳು ರಾಜೇಶ್ವರಿ ನಾಯಕಿಯಾಗಿದ್ದಾರೆ. ಹೊಸ ಬಗೆಯ ಕಥೆ ಇಲ್ಲಿದೆ. ಮನರಂಜನಾ ಅಂಶಗಳು ಹೆಚ್ಚಾಗಿವೆ’ ಎಂದರು.
ನಾಯಕಿ ರಾಜೇಶ್ವರಿ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ನಟಿಸಿದ್ದಾರೆ.