ಮಲ್ಪೆ: ಕೊಡವೂರಿನಿಂದ ಕಲ್ಯಾಣಪುರ ಸಂತೆಕಟ್ಟೆ ಹೋಗುವ ಮಾರ್ಗದ ಲಕ್ಷ್ಮೀನಗರದಲ್ಲಿ ಪ್ಲಾಸ್ಟಿಕ್ ತಾಜ್ಯಗಳು ರಸ್ತೆಯ ಎರಡೂ ಬದಿಯಲ್ಲಿ ಹರಡಿಕೊಂಡು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.
ಇಲ್ಲಿನ ಶಾಂತಿವನದಿಂದ ಲಕ್ಷ್ಮೀ ನಗರ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಗಳು ತಿಪ್ಪೆಗುಂಡಿಗಳಾಗಿವೆ. ಉಡುಪಿ ನಗರಸಭಾ ವ್ಯಾಪಿಯ ಈ ರಸ್ತೆಯ ಒಂದು ಭಾಗ ಸುಬ್ರಹ್ಮಣ್ಯ ವಾರ್ಡ್, ಇನ್ನೊಂದು ಭಾಗ ಗೋಪಾಲಪುರ ವಾರ್ಡ್‌ಗೆ ಸೇರಿದೆ. ಲಕೀÒ$¾ನಗರದ ಸ್ವಲ್ಪ ಮುಂದೆ ಕೊಡವೂರು ವಾರ್ಡ್‌ಗೆ ಒಳಪಟ್ಟಿದೆ.
ಎರಡೂ ಇಕ್ಕೆಲಗಳಲ್ಲಿ ವರ್ಷಪೂರ್ತಿ ಕಸದ ರಾಶಿ ಹರಡಿಕೊಂಡಿರುವುದರಿಂದ ಇಲ್ಲಿ ನಡೆದಾಡುವುದೇ ಅಸಹ್ಯವಾಗಿದೆ. ದಿನನಿತ್ಯ ಇಲ್ಲಿ ಕಸದ ರಾಶಿ ಗುಡ್ಡೆಯಂತೆ ಶೇಖರಣೆಗೊಳ್ಳುತ್ತಿದ್ದು ಕನಿಷ್ಟ ಎರಡು ಮೂರು ದಿನಗಳಿಗೊಮ್ಮೆ ಸಮರ್ಪಕವಾಗಿ ವಿಲೇವಾರಿ ಆಗದಿರುವುದರಿಂದ ಕಾಗೆ, ನಾಯಿ, ದನಗಳ ಮತ್ತಿತರ ಪ್ರಾಣಿಗಳಿಗೆ ಆಹಾರ ಕೇಂದ್ರವಾಗಿದೆ. ಅಸಮರ್ಪಕ ಕಸ ವಿಲೇವಾರಿಯಿಂದ ನಗರದ ಜನತೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ರಸ್ತೆಯ ಬದಿಯಲ್ಲಿ ಸಂಗ್ರಹವಾಗಿರುವ ಕಸ ವಿಲೇವಾರಿಗೆ ಸಂಬಂಧಪಟ್ಟ ಆಡಳಿತ ಆದ್ಯತೆ ನೀಡುತ್ತಿಲ್ಲ ಎಂದು ಆರೋಪವೂ ವ್ಯಕ್ತವಾಗಿದೆ.
ಸಾಂಕ್ರಮಿಕ ರೋಗ ಭೀತಿ ಮಳೆಗಾಲ ಆರಂಭದ ಈ ದಿನಗಳಲ್ಲಿ ಸಾಂಕ್ರಮಿಕ ರೋಗಗಳ ಹಾವಳಿಯ ಭೀತಿಯಲ್ಲಿ ಬದುಕುತ್ತಿರುವ ಜನರಿಗೆ ಕಸ ವಿಲೇವಾರಿ ಆಗದಿರುವುದು ಮತ್ತಷ್ಟು ಸಹನೆಯನ್ನು ಕಳೆದುಕೊಳ್ಳುವಂತಾಗಿದೆ. ಜನರ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಈ ತ್ಯಾಜ್ಯರಾಶಿಗೆ ಶಾಶ್ವತ ಮುಕ್ತಿ ದೊರಕಿಸಿ ಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ದೊಡ್ಡ ಮೊತ್ತದ ದಂಡ ಹಾಕಬೇಕು
ತ್ಯಾಜ್ಯ ಎಸೆಯುವವರು ಸಾಮಾನ್ಯ ಜನರಲ್ಲ. ಕಾರುಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಾರೆ. ತ್ಯಾಜ್ಯ ಎಸೆಯುವ ವಾಹನವನ್ನು ತಡೆದು ದೊಡ್ಡ ಮೊತ್ತದ ದಂಡ ವಿಧಿಸಿದರೆ ಮತ್ತು ಕಾನೂನು ಕ್ರಮ ತೆಗೆದುಕೊಂಡರೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಬಹುದು.
– ರವಿ, ಲಕ್ಷ್ಮೀ ನಗರ, ಸ್ಥಳೀಯರು