Advertisement

ಪ್ರತ್ಯೇಕ ವಿವಿ ಸ್ಥಾಪನೆಗೆ ಬೃಹತ್‌ ಹೋರಾಟ

10:54 AM Jan 18, 2019 | Team Udayavani |

ರಾಯಚೂರು: ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಆಗುತ್ತಿರುವ ವಿಳಂಬ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ರಸ್ತೆಗಿಳಿದು ಹೋರಾಟ ನಡೆಸಿದರು.

Advertisement

ನಗರದ ಅಂಬೇಡ್ಕರ್‌ ವೃತ್ತದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಗುರುವಾರ ಬೆಳಗ್ಗೆ 11 ಗಂಟೆಗೆ ಹೋರಾಟ ಆರಂಭಿಸಿದ ವಿದ್ಯಾರ್ಥಿಗಳು, ಅಲ್ಲಿಂದ ಬಸವೇಶ್ವರ ವೃತ್ತದವರೆಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಕಮಾನು ಎದುರೇ ಧರಣಿ ಕುಳಿತರು. ರಾಜ್ಯ ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ವ್ಯಕ್ಪಪಡಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ವಿವಿ ಆರಂಭವಾಗಲೇಬೇಕು ಎಂದು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಮುಖಂಡ ಡಾ| ರಜಾಕ್‌ ಉಸ್ತಾದ್‌, ಯಾದಗಿರಿ ಜಿಲ್ಲೆ ಒಳಗೊಂಡಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕಾನೂನಾತ್ಮಕ ಪ್ರಕ್ರಿಯೆ ಮುಗಿಸುವ ಮೂಲಕ ರಾಯಚೂರು ವಿಶ್ವವಿದ್ಯಾಲಯ ಆರಂಭಿಸಬೇಕು. ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ 2011ರವರೆಗೂ ಆರು ಜಿಲ್ಲೆಗಳ ನಡುವೆ ಕೇವಲ ಗುಲ್ಬರ್ಗ ವಿಶ್ವವಿದ್ಯಾಲಯ ಮಾತ್ರ ಉನ್ನತ ಶಿಕ್ಷಣ ನೀಡುವ ಸಂಸ್ಥೆಯಾಗಿತ್ತು. ವಿದ್ಯಾರ್ಥಿ ಹಾಗೂ ಕಾಲೇಜುಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ 2011ರಲ್ಲಿ ಗುಲ್ಬರ್ಗ ವಿವಿ ವಿಭಜಿಸಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಕೃಷ್ಣದೇವರಾಯ ವಿವಿ ಸ್ಥಾಪಿಸಲಾಗಿದೆ. ಅದೇ ರೀತಿ 2017-18ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳು ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರು ಎಂದರು.

ಇದರಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ರಾಯಚೂರು ತಾಲೂಕಿನ ಯರಗೇರಾ ಹತ್ತಿರ 250 ಎಕರೆ ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಸ್ನಾತಕೋತ್ತರ ಕೇಂದ್ರ ನಡೆಯುತ್ತಿದೆ. ಅದೇ ಕೇಂದ್ರವನ್ನು ರಾಯಚೂರು ವಿವಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

2018ರ ಫೆಬ್ರವರಿಯಲ್ಲಿ ಅನುಮೋದನೆಗಾಗಿ ಸಲ್ಲಿಸಿದಾಗ ರಾಜ್ಯಪಾಲರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಅಧಿನಿಯಮ 2017ನ್ನು ಅನುಮೋದಿಸದೇ ಹಿಂದಕ್ಕೆ ಕಳುಹಿಸಿದ್ದಾರೆ. ಈಗ ಸರ್ಕಾರವು ಅಧಿನಿಯಮವನ್ನು ರಾಷ್ಟ್ರಪತಿಗಳಿಂದ ಅನುಮೋದನೆಗೆ ಕಳುಹಿಸಲು ನಿರ್ಧಾರ ತೆಗೆದುಕೊಂಡಿರುವುದರಿಂದ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ ಎಂದು ಸಮಸ್ಯೆ ವಿವರಿಸಿದರು.

Advertisement

ರಾಯಚೂರು ವಿವಿ ಸ್ಥಾಪನೆ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸುಗ್ರೀವಾಜ್ಞೆ ಅಥವಾ ರಾಜ್ಯ ವಿವಿ ಅಧಿನಿಯಮ 2000ರ ತಿದ್ದುಪಡಿ ಮೂಲಕ ವಿವಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಉಪನ್ಯಾಸಕರ ಸಂಘದ ಮುಖಂಡ ಡಾ| ಶರಣಬಸವ ಪಾಟೀಲ, ಮಲ್ಲಿಕಾರ್ಜುನ ಶಿಖರಮಠ, ಸಿರಾಜ್‌ ಜಾಫ್ರಿ, ಕರವೇ ಶಿವರಾಮೆಗೌಡ ಬಣ ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ.ಕೆ. ಜೈನ, ಥಾಮಸ್‌, ವೀರೇಶ ಹೀರಾ, ಖಲೀಲ್‌, ಎಂ.ಡಿ. ರಫಿ, ರಾಕೇಶ ರಾಜಲಬಂಡಾ, ಶ್ಯಾಮಸುಂದರ ಸೇರಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಸಂಚಾರ ಸಮಸ್ಯೆ: ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿಗಳು ಹೋರಾಟ ಮಾಡಿದ ಕಾರಣ ವಾಹನ ಸಂಚಾರ ವ್ಯತ್ಯಯವಾಯಿತು. ಆರಂಭದಲ್ಲಿ ವಿದ್ಯಾರ್ಥಿಗಳು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಈ ವೇಳೆ 15 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ಸ್ತಬ್ಧಗೊಂಡಿತ್ತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ವಿದ್ಯಾರ್ಥಿಗಳು ಧರಣಿ ನಡೆಸಿದ ಕಾರಣ ಒನ್‌ ವೇ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದರಿಂದ ಕೆಲ ಕಾಲ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿತು.

ಕೇವಲ ಈ ಭಾಗ ಹಿಂದುಳಿದಿದೆ ಎಂದು ಜರಿಯುವುದೇ ಎಲ್ಲರ ಕಾಯಕವಾಗಿದೆ. ಸರ್ಕಾರ ಮೊದಲು ನಮಗೆ ಸಿಗಬೇಕಾದ ಸೌಲಭ್ಯ ಕೊಡಲಿ. ಆಗ ನಾವೂ ಓದಿ ಮುಂದೆ ಬರುತ್ತೇವೆ. ಇದು ಕೇವಲ ಎಚ್ಚರಿಕೆ ಸಂದೇಶವಾಗಿದೆ. ಕೂಡಲೇ ಸರ್ಕಾರ ವಿವಿ ಸ್ಥಾಪನೆಗೆ ಮುಂದಾಗದಿದ್ದಲ್ಲಿ ಉಗ್ರ ಹೋರಾಟಕ್ಕೂ ನಾವು ಹಿಂಜರಿಯುವುದಿಲ್ಲ.
ಶಿಲ್ಪಾ, ವೀರಶೈವ ಕಾಲೇಜ್‌ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next