ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕರೆದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ:ಮುಂದುವರಿದ ರಾಜೀನಾಮೆ ಪರ್ವ: ರಾಜೀನಾಮೆಗೆ ಸಕಾಲವಲ್ಲ ಎಂದ ಗುನ್ಹಾಳಕರ
ಅಧೀರ್ ರಂಜನ್ ಉದ್ದೇಶಪೂರ್ವಕವಾಗಿ ಈ ಶಬ್ದ ಬಳಕೆ ಮಾಡಿದ್ದು, ಮುರ್ಮು ಮತ್ತು ಅವರ ಕಚೇರಿಯನ್ನು ಅವಹೇಳನ ಮಾಡುವ ಮೂಲಕ ಅವಮಾನ ಮಾಡಿರುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ರಾಷ್ಟ್ರಪತ್ನಿ ಎಂದು ಕರೆದಿರುವುದು ಅವಹೇಳನ, ಈ ಬಗ್ಗೆ ಕಾಂಗ್ರೆಸ್ ಪಕ್ಷದ ರಾಪ್ಟ್ರಪತಿ ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಇರಾನಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಸೋನಿಯಾ ಗಾಂಧಿ, ಆದಿವಾಸಿ ವಿರೋಧಿ, ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಎಂದು ಕಿಡಕಾರಿದ್ದಾರೆ.
ಬಡ ಕುಟುಂಬದ ಬುಡಕಟ್ಟು ಮಹಿಳೆ ದೇಶದ ಅತ್ಯುನ್ನದ ಹುದ್ದೆಯನ್ನು ಏರುವ ಮೂಲಕ ಇತಿಹಾಸ ನಿರ್ಮಿಸಿದ್ದು, ಕಾಂಗ್ರೆಸ್ ನಿರಂತರವಾಗಿ ಅವಹೇಳನ ಮಾಡುತ್ತಿರುವುದಾಗಿ ಇರಾನಿ ದೂರಿದ್ದಾರೆ.
ಕ್ಷಮೆಯಾಚಿಸಿದ ಚೌಧರಿ:
ರಾಷ್ಟ್ರಪತ್ನಿ ಎಂದು ಕರೆದು ವಿವಾದಕ್ಕೀಡಾದ ಕೂಡಲೇ ಅಧೀರ್ ರಂಜನ್ ಚೌಧುರಿ ಮತ್ತು ಕಾಂಗ್ರೆಸ್ ಕ್ಷಮೆಯಾಚಿಸಿದ್ದು, ಆಕಸ್ಮಿಕವಾಗಿ ಶಬ್ದ ಬಳಕೆಯಾಗಿದ್ದು, ದುರುದ್ದೇಶದಿಂದ ಅಲ್ಲ. ಆದರೆ ಬಿಜೆಪಿ ಇದನ್ನು ದೊಡ್ಡ ವಿವಾದ ಮಾಡುತ್ತಿದೆ ಎಂದು ಆರೋಪಿಸಿದೆ.
ಕಲಾಪದಲ್ಲಿ ಬೆಲೆ ಏರಿಕೆ, ಜಿಎಸ್ ಟಿ, ಅಗ್ನಿಪಥ್ ಯೋಜನೆ ಮತ್ತು ನಿರುದ್ಯೋಗದ ಕುರಿತ ಗಂಭೀರ ವಿಷಯಗಳ ಚರ್ಚೆಯಿಂದ ಬಿಜೆಪಿ ವಿಚಲಿತವಾಗಿದ್ದು, ನನ್ನ ಹೇಳಿಕೆಯನ್ನು ವಿವಾದ ಮಾಡುವ ಮೂಲಕ ಚರ್ಚೆಯ ಹಾದಿಯನ್ನು ತಪ್ಪಿಸಲು ಯತ್ನಿಸುತ್ತಿದೆ ಎಂದು ಚೌಧುರಿ ದೂರಿದರು.