ಚಿಕ್ಕೋಡಿ: ಬೆಳಗಾವಿ ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಡಿಸೆಂಬರ್ 23 ರಿಂದ 26 ರವರೆಗೆ ಯಡೂರ ವೀರಭದ್ರೇಶ್ವರ ದೇವಸ್ಥಾನದಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗುತ್ತದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವೈ.ಹಂಜಿ ಹೇಳಿದರು.
ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರುತ್ತಿದೇವೆ. ಆದರೆ ಇದುವರೆಗೆ ಚಿಕ್ಕೋಡಿ ಜಿಲ್ಲೆ ಆಗದೇ ಇರುವುದು ವಿಪರ್ಯಾಸ ಸಂಗತಿ.
ಸದ್ಯ ಇಡೀ ಸರ್ಕಾರವೇ ಬೆಳಗಾವಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನು ಮಾಡುವಂತೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಡಿಸೆಂಬರ್ 23 ರಂದು ಮುಂಜಾನೆ 11 ಗಂಟೆಗೆ ಯಡೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪಾದಯಾತ್ರೆಗೆ ಚಾಲನೆಯನ್ನು ನೀಡಲಾಗುವುದು. ಈ ಪಾದಯಾತ್ರೆ 4 ದಿನಗಳ ಕಾಲ ನಡೆಯಲಿದೆ. ವಿವಿಧ ಸಂಘಟನೆಗಳ ಸದಸ್ಯರು ಸೇರಿ ಒಟ್ಟು 2-3 ಸಾವಿರ ಜನರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಅದಲ್ಲದೇ ಎಲ್ಲ ರಾಜಕೀಯ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಅಂತಿಮವಾಗಿ ಪಾದಯಾತ್ರೆಯು ಬೆಳಗಾವಿ ಸುವರ್ಣಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನು ಮಾಡುವಂತೆ ಮನವಿಯನ್ನು ಮಾಡಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿ ಕಾರ‍್ಯಾಧ್ಯಕ್ಷ ತುಕಾರಾಮ ಕೋಳಿ, ರವಿ ಹಂಪನ್ನವರ. ರುದ್ರಪ್ಪಾ ಸಂಗಪ್ಪಗೋಳ, ಬಸವರಾಜ ಢಾಕೆ, ಸುರೇಶ ಬ್ಯಾಕೂಡೆ, ಎಂ.ಎ.ಪಾಟೀಲ ಮುಂತಾದವರು ಇದ್ದರು.