ಯಾದಗಿರಿ: ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಸೆ. 24ರಂದು ನಗರದಲ್ಲಿ ಬೃಹತ್ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಎಲ್ಲ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ನಂದಕುಮಾರ ಬಿ. ಸೂಚಿಸಿದರು.
ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮೆಘಾ ಕಾನೂನು ಅರಿವು ಕಾರ್ಯಕ್ರಮ ಕುರಿತು ಪೂರ್ವಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು.
ಇದೇ ಪ್ರಥಮ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ಕರ್ನಾಟಕ ಉತ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಇತರೆ ಒಟ್ಟು ಐವರು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಈ ಬೃಹತ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಲೋಪವಿಲ್ಲದೆ ನಿಭಾಯಿಸುವಂತೆ ಅವರು ಸಲಹೆ ನೀಡಿದರು.
ಈ ಕಾನೂನು ಅರಿವು ಕಾರ್ಯಕ್ರಮದ ಅಂಗವಾಗಿ ಮುಖ್ಯ ಸಮಾರಂಭದ ಸ್ಥಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವ್ಯಾಪ್ತಿಗೆ ಬರುವ ವಿವಿಧ ಯೋಜನೆಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಬೇಕು. ಆಯಾ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಕರಪತ್ರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಟ್ಟುಕೊಳ್ಳಬೇಕು. ಅದರಂತೆ ಸ್ಥಳದಲ್ಲಿಯೇ ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಜಿಗಳಿಗೆ ಸ್ಪಂದನೆ, ಜಿಲ್ಲಾ ಪಂಚಾಯತ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಮಕ್ಕಳ ಹಕ್ಕುಗಳ ಕಾಯ್ದೆ, ಬಾಲ್ಯ ವಿವಾಹ ನಿಯಂತ್ರಣ ಕಾಯ್ದೆ ಕಡುಬಡವ, ಹೆಣ್ಣು ಮಕ್ಕಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ನಿರ್ಗತಿಕರಿಗಾಗಿ ಇರುವ ವಿವಿಧ ಯೋಜನೆ ಮತ್ತು ವಿಷಯಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ತಕ್ಷಣ ಸ್ಥಳದಲ್ಲಿಯೇ ಮಾಹಿತಿ ಒದಗಿಸಿ ಅರ್ಹತೆ ಆಧಾರದ ಮೇಲೆ ಸೌಲಭ್ಯ ಕಲ್ಪಿಸಲು ಸ್ಪಂದಿಸುವಂತೆ ತಿಳಿಸಿದರು.
ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಸಾಹೀಲ್ ಅಹ್ಮದ್ ಕುನ್ನಿಭಾವಿ ಅವರು ಕಾರ್ಯಕ್ರಮ ಕುರಿತು ವಿವರ ನೀಡಿದರು.
ಜಿಪಂ ಸಿಇಒ ಅಮರೇಶ ಆರ್. ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಹೊನ್ನಳ್ಳಿ, ಎಸ್.ಪಿ ಲೋಕಾಯುಕ್ತ ಡಿ.ವೈ ಎಸ್.ಪಿ ಮೊಹಮ್ಮದ ಇಸ್ಮಾಯಿಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.