Advertisement
ಈ ಭಾಗದಲ್ಲು ಸುಮಾರು 500 ಮೀ. ಉದ್ದ ಹಾಗೂ 400 ಮೀ. ಅಗಲಕ್ಕೆ ಭೂಕುಸಿತವಾಗಿದೆ. ಗುಡ್ಡ ಪ್ರದೇಶ ಸಂಪೂರ್ಣ ಜಾರಿ ಕೆಳಗೆ ಬಂದಿದೆ. ಇದರಿಂದ ಕೃಷ್ಣಪ್ಪ ಗೌಡ, ದೇವಪ್ಪ ಗೌಡ, ಮುತ್ತಪ್ಪ ಗೌಡ, ರುಕ್ಮಯ ಗೌಡ ಹಾಗೂ ಬಾಲಕೃಷ್ಣ ಎಂಬವರ ಅಡಿಕೆ ತೋಟ ನಾಶವಾಗಿದ್ದು, ಗುಡ್ಡದಲ್ಲಿದ್ದ ಹಲವು ಮರಗಳೂ ಧರಾಶಾಯಿಯಾಗಿವೆ. ಕೆಳಗೆ ತೋಡೊಂದು ಪೂರ್ಣ ಮುಚ್ಚಿ ಹೋಗಿದ್ದು, ಅಲ್ಲಿನ ನೀರೂ ತೋಟಗಳಿಗೆ ನುಗ್ಗಿ ಹಾನಿ ಮಾಡಿದೆ. ಭೂಮಿ ಇನ್ನಷ್ಟು ಬಿರುಕು ಬಿಟ್ಟಿದ್ದು, ಮತ್ತಷ್ಟು ಕುಸಿತದ ಭೀತಿ ಎದುರಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಸುನೀಲ್ ಕುಮಾರ್ ದಡ್ಡು, ಗ್ರಾಮಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿಯೂ ತೀವ್ರ ಪ್ರಮಾಣದ ಭೂಕುಸಿತವಾಗಿದ್ದು, ಮುರಳೀಧರ ರಾವ್, ಈಶ್ವರ ನಾಯಕ್ ಹಾಗೂ ಶಾಂತಪ್ಪ ಗೌಡ ಸಹಿತ ಹಲವರ ಅಡಿಕೆ, ರಬ್ಬರ್ ತೋಟಗಳಿಗೆ ಅಪಾರ ಪ್ರಮಾಣ ಹಾನಿ ಸಂಭವಿಸಿದೆ. ಗುಡ್ಡ ಕುಸಿತದಿಂದ ಇಲ್ಲಿಯೂ ತೋಡು ಮುಚ್ಚಿ ಹೋಗಿ, ತೋಟಗಳಿಗೆ ನೀರು ಹರಿದು ಹಾನಿ ಮಾಡುತ್ತಿದೆ.