ಅಮೃತ್ ಸರ: ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ತೈಲ ತುಂಬಿದ್ದ ಟ್ಯಾಂಕರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ನಂತರ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡು ಲಾರಿ ಸುಟ್ಟು ಹೋದ ಘಟನೆ ಪಂಜಾಬ್ ನ ಲೂಧಿಯಾನದ ಖನ್ನಾ ಪ್ರದೇಶ ಸಮೀಪದ ಫ್ಲೈಓವರ್ ನಲ್ಲಿ ಬುಧವಾರ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Yellapura: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಬಸ್. ಚಾಲಕ ಸ್ಥಳದಲ್ಲೇ ಸಾವು
ಡಿಕ್ಕಿ ಹೊಡೆದ ಇಂಧನ ಟ್ಯಾಂಕರ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರೀ ಪ್ರಮಾಣದ ಕಪ್ಪು ಹೊಗೆ ಸುತ್ತ-ಮುತ್ತಲ ಪ್ರದೇಶದವರೆಗೂ ವ್ಯಾಪಿಸಿದ್ದು, ಬೆಂಕಿಯನ್ನು ನಂದಿಸಲು ನಾಲ್ಕು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಭಾರೀ ಬೆಂಕಿ ಮತ್ತು ದಟ್ಟ ಕಪ್ಪು ಹೊಗೆಯಿಂದಾಗಿ ಫ್ಲೈಓವರ್ ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿರುವುದಾಗಿ ವರದಿ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ವರದಿ ವಿವರಿಸಿದೆ.
ಫ್ಲೈಓವರ್ ಡಿವೈಡರ್ ಗೆ ಟ್ಯಾಂಕರ್ ಡಿಕ್ಕಿಹೊಡೆದು ಬೆಂಕಿಹೊತ್ತಿಕೊಂಡಿರುವ ಘಟನೆ ನಡೆದಿರುವುದಾಗಿ ನಮಗೆ ಮಾಹಿತಿ ಬಂದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ತೆರಳಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಮ್ನೀತ್ ಕೊಂಡಾಲ್ ತಿಳಿಸಿದ್ದಾರೆ.