Advertisement

23, 24ರಂದು ಬೃಹತ್‌ ಉದ್ಯೋಗ ಮೇಳ ಆಯೋಜನೆ

11:51 AM Feb 09, 2018 | |

ಮೈಸೂರು: ಫೆ.23 ಮತ್ತು 24ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಪ್ರಾದೇಶಿಕ ಮಟ್ಟದ ಕೌಶಲ ಮತ್ತು ಬೃಹತ್‌ ಉದ್ಯೋಗ ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಬೃಹತ್‌ ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

Advertisement

ನಗರದಲ್ಲಿ ನಡೆಯುವ ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ, ಇನ್ನುಳಿದ ಐದು ಜಿಲ್ಲೆಗಳ ಮೈಸೂರು ವಿಭಾಗಮಟ್ಟದ ಉದ್ಯೋಗ ಮೇಳಕ್ಕೆ 75 ಲಕ್ಷ ರೂ. ಅನುದಾನ ದೊರೆಯಲಿದ್ದು, ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯಕ್ರಮ ರೂಪಿಸಬೇಕಿದೆ. ಉದ್ಯೋಗ ಮೇಳಕ್ಕೆ ವೇದಿಕೆ ನಿರ್ಮಾಣ, ಮೂಲಸೌಕರ್ಯ ಸೇರಿದಂತೆ ಇನ್ನಿತರ ಖರ್ಚುವೆಚ್ಚದ ಬಗ್ಗೆ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೆಬ್‌ಸೈಟ್‌ ಬಿಡುಗಡೆ: ಮೈಸೂರು ವಿಭಾಗದಮಟ್ಟದ ಬೃಹತ್‌ ಉದ್ಯೋಗ ಮೇಳಕ್ಕೆ ಸಹಕಾರ ನೀಡುವಂತೆ ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಿದ್ದು, ಮೇಳಕ್ಕೆ 10 ಸಾವಿರಕ್ಕೂ ಹೆಚ್ಚಿನ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಅಲ್ಲದೆ ಉದ್ಯೋಗ ಮೇಳಕ್ಕಾಗಿ ನೋಂದಣಿ ಮಾಡಿಕೊಳ್ಳಲು ಉದ್ಯೋಗಾಂಕ್ಷಿಗಳಿಗಾಗಿ ವೆಬ್‌ಸೈಟ್‌ ರೂಪಿಸಿದ್ದು, ಅಭ್ಯರ್ಥಿಗಳು www.skillandjobfair.com ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ.

ನೋಂದಣಿಗೆ ಅಭ್ಯರ್ಥಿಗಳ ಪೂರ್ಣ ಮಾಹಿತಿ ಜತೆಗೆ ಇ-ಮೇಲ್‌ ಕಡ್ಡಾಯಗೊಳಿಸಿದ್ದು, ಇ-ಮೇಲ್‌ ವಿಳಾಸ ಹೊಂದಿರದ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

300 ಕಂಪನಿಗಳು ಭಾಗಿ: ಎರಡು ದಿನಗಳ ಕೌಶಲ ಹಾಗೂ ಉದ್ಯೋಗ ಮೇಳದಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗಹಿಸಲಿದ್ದು, ಇವರುಗಳ ಅನುಕೂಲಕ್ಕಾಗಿ ಮಹಾರಾಜ ಕಾಲೇಜು ಮೈದಾನ ಮಾತ್ರವಲ್ಲದೆ ಯುವರಾಜ ಮತ್ತು ಮಹಾರಾಜ ಕಾಲೇಜುಗಳ ಕೊಠಡಿಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಸಂಘಟಿಸಲು ಎಂಎಸ್‌ಡಬ್ಲೂ, ಬಿಇಡಿ ವ್ಯಾಸಂಗ ಮಾಡುತ್ತಿರುವ 250 ರಿಂದ 300 ಸ್ವಯಂಸೇವಕರ ಅಗತ್ಯವಿದೆ ಎಂದು ಟ್ಯಾಲ್ನಟ್ರಿ ಸಂಸ್ಥೆಯ ಶರ್ಯಾನ್‌ ಜೈನ್‌ ತಿಳಿಸಿದರು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಮೈಸೂರು ಜಿಲ್ಲಾ ಉದ್ಯೋಗಾಧಿಕಾರಿ ವಿಶ್ವನಾಥ್‌ ಭರಣಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next