Advertisement
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಇಲಾಖೆಯ ಸಹಯೋಗದಲ್ಲಿ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಆಯೋಜಿಸಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ಶ್ವಾಸಗುರು ವಚನಾನಂದ ಅವರ ಮಾರ್ಗದರ್ಶನದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಿದರು.
Related Articles
Advertisement
ಯೋಗ ಹಬ್ಬ: ಸ್ಯಾಂಕಿ ಕೆರೆ ಬಳಿಯ ಯೋಗ ಮಂದಿರದಲ್ಲಿ 500 ಮಂದಿ ವಿವಿಧ ಆಸನಗಳನ್ನು ಅಭ್ಯಾಸಿಸಿ ಯೋಗ ಹಬ್ಬ ಆಚರಿಸಿದರು. ಬಸವೇಶ್ವರನಗರದ ಮೈದಾನದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್ ಹಾಗೂ ಪಾಲಿಕೆ ಸದಸ್ಯೆ ದೀಪಾ ನಾಗೇಶ್ ಸಮ್ಮುಖದಲ್ಲಿ ಯೋಗಾಸನ ಪ್ರದರ್ಶನ ಗೊಂಡಿತು. ಮಹಿಳೆಯರು ಯೋಗಾಸನಗಳನ್ನು ಪ್ರದರ್ಶಿಸಿದರು.
ಚಂದನವನದಲ್ಲಿ ಯೋಗ: ಅಕ್ಷರ ಪವರ್ ಅಕಾಡೆಮಿಯಲ್ಲಿ ಚಂದನವನದ ಕಲಾವಿದರು ಯೋಗ ಮಾಡಿ ಗಮನ ಸೆಳೆದರು. ನಟಿ ಸಂಜನಾ ಗಲಾÅನಿ ಸೂರ್ಯನಮಸ್ಕಾರ, ನೌಕಾಸನ, ವೃಕ್ಷಾಸನ, ಚಕ್ರಾಸನ, ಅರ್ಧಭುಜಂಗಾಸನಗಳನ್ನು ಮಾಡಿದರು. ನಟರಾದ “ನೆನಪಿರಲಿ’ ಪ್ರೇಮ್, ಅನಿರುದ್ಧ್ ಹಾಗೂ ಪ್ರಥಮ್ ಸಾಥ್ ನೀಡಿದರು.
ಯೋಗ ಜ್ಞಾನಭಾರತಿ: ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ದಿನದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ ಕೆ.ಆರ್.ವೇಣುಗೋಪಾಲ್, ವಿವಿಯ ವಿತ್ತಾಧಿಕಾರಿ ಡಾ.ಎ.ಲೋಕೇಶ್, ಕುಲಸಚಿವ ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜು ಇತರರು ವಿದ್ಯಾರ್ಥಿ, ಪ್ರಾಧ್ಯಪಕರೊಂದಿಗೆ ಯೋಗ ಮಾಡಿದರು.
ನಂತರ ಮಾತನಾಡಿದ ಪ್ರೊ.ಕೆ.ಆರ್.ವೇಣುಗೋಪಾಲ್, ಯೋಗ ಹುಟ್ಟಿದ ದೇಶದಲ್ಲಿ ಯೋಗಕ್ಕೆ ಮಾನ್ಯತೆ ಇಲ್ಲ. ಭಾರತದ ಯುವ ಪೀಳಿಗೆ ಯೋಗದ ಕಡೆ ಹೆಚ್ಚು ಆಸಕ್ತಿ ವಹಿಸಬೇಕು. ಆದರೆ ವೃದ್ಧರು ಈ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಬಾಲ್ಯದಲ್ಲಿಯೇ ಯೋಗಾಭ್ಯಾಸ ಮಾಡಿದರೆ ಮುಪ್ಪಿನಲ್ಲಿ ಬರುವ ಖಾಯಿಲೆಗಳಿಂದ ದೂರವಿರಬಹುದು ಎಂದರು.
ಯೋಗಾಸನಗಳ ಮೂಲಕ ಗಣೇಶನಿಗೆ ನಮನ: ವಿಜಯನಗರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ವಿಶ್ವಚೇತನ ಯೋಗ ಶಾಲೆಯ 9 ಶಿಕ್ಷಕರು ವಕ್ರತುಂಡ ಮಹಾಕಾಯ ಹಾಡಿಗೆ ನೃತ್ಯ ಮಾಡುವ ಮೂಲಕ ಗಣೇಶನಿಗೆ ನಮಿಸಿದರು. ಮಕ್ಕಳು ಯೋಗಾಸನಗಳನ್ನು ಪ್ರದರ್ಶಿಸಿದರು.
ಹಸ್ತಮುದ್ರಿಕೆಯಲ್ಲಿ ಯೋಗ: ಮಲ್ಲೇಶ್ವರದ ಗ್ರೀನ್‌ಪಾಥ್ ಸಂಸ್ಥೆಯಲ್ಲಿ ನಾಟ್ಯ ಸರಸ್ವತಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಯೋಗ ನೃತ್ಯ ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ.ಪದ್ಮಜಾ ಸುರೇಶ್, ಡಾ.ಶೇಷಾದ್ರಿ ಅಯ್ಯರ್ ಭರತನಾಟ್ಯದಲ್ಲಿರುವ ಯೋಗದ ಬಗ್ಗೆ ಮಾಹಿತಿ ನೀಡಿದರು. ನೃತ್ಯಗುರು ಡಾ.ಚೇತನಾ ರಾಧಾಕೃಷ್ಣ ಹಾಗೂ ಕಲಾವಿದೆ ಶಿಲ್ಪಾ ಅವರು ಹಸ್ತಮುದ್ರಿಕೆಯಲ್ಲಿರುವ ಯೋಗಾಸನಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಯೋಗ ದಿನದ ಸಂಭ್ರಮ: ಇಂದಿರಾನಗರ ನ್ಯೂ ಹೊರೈಜಾನ್ ಶಾಲೆಯಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಯೋಗಾಭ್ಯಾಸ ಪ್ರದರ್ಶಿಸಿ ಪ್ರಾಣಾಯಮ ಮಾಡಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಜತೆಗೆ ಗಣ್ಯರು ಯೋಗದಲ್ಲಿ ಪಾಲ್ಗೊಂಡಿದ್ದರು.
ಯೋಗ ಸಾಧಕರ ಸಮಾಗಮ: ದೇಶ, ವಿದೇಶದ ಯೋಗ ಸಾಧಕರ ಸಮಾಗಮ ಕಂಠೀರವ ಕ್ರೀಡಾಂಗಣದ ಯೋಗ ದಿನಾಚರಣೆಯ ವಿಶೇಷವಾಗಿತ್ತು. ಫ್ರಾನ್ಸ್‌ನ ಯೋಗಿ ಲೀ ಯೋಗಿ ಕುಡೋ, ರಷ್ಯಾದ ಮಹಾಯೋಗಿ ವಿಕ್ಟರ್ ಟ್ರಾವೀಯಾನೋ, ನೆದರ್‌ಲ್ಯಾಂಡ್ಸ್‌ನ ಯೋಗಿನಿ ನಟಾಶ್c ಜತೆಗೆ ಹಿರೇಮಠದ ಸಚ್ಚಿದಾನಂದ ಮಹಾಸ್ವಾಮಿ, ವಾರಣಾಸಿಯ ಅಘೋರಿ ಕಣ್ಣನ್ ಬಾಬಾ, ಡಾ.ಪ್ರಕಾಶ್ ಆಮ್ಟೆ, ಪದ್ಮಶ್ರೀ ಸಿಂಧೂತಾಯಿ ಸಫಾRಳ್ ಒಂದೇ ವೇದಿಕೆಯಲ್ಲಿ ಯೋಗ ಮಾಡಿದರು.
ಆರೋಗ್ಯ ತಪಾಸಣಾ ಶಿಬಿರ: ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಬಿಬಿಎಂಪಿ ನೌಕರರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ನಂತರ ಕೇಂದ್ರ ಕಚೇರಿಯ ಗಾಜಿನ ಮನೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮೇಯರ್ ಸಂಪತ್‌ರಾಜ್ ಅವರು ವಿದ್ಯಾರ್ಥಿಗಳೊಂದಿಗೆ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎರಡು ಸಾವಿರಕ್ಕೂ ಅಧಿಕ ಸಾರ್ವಜನಿಕರು ಶಿಬಿರ ಪ್ರಯೋಜನ ಪಡೆದರು.
ಯೋಗಕ್ಕೆ ಸಾವಿರಾರು ವರ್ಷದ ಪರಂಪರೆ ಇದೆ. ನಿತ್ಯದ ನಡವಳಿಕೆಯಲ್ಲಿ ಇದನ್ನು ರೂಢಿಸಿ ಮಾಡಿಕೊಳ್ಳುವುದರಿಂದ ಉತ್ತರ ಆರೋಗ್ಯ ಕಾಪಾಡಿಕೊಳ್ಳಬಹುದು.-ಬಂಡೆಪ್ಪ ಕಾಶೆಂಪುರ, ಸಹಕಾರ ಸಚಿವ ವರ್ಷದಿಂದ ವರ್ಷಕ್ಕೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹೊಸ ಹುಮ್ಮಸ್ಸು ಪಡೆಯುತ್ತಿದೆ. ಕರ್ನಾಟಕವನ್ನು ಯೋಗಯುಕ್ತ ರೋಗಮುಕ್ತ ಮಾಡುವುದೇ ನಮ್ಮ ಉದ್ದೇಶ. ಪ್ರತಿಯೊಬ್ಬರು ಯೋಗಿಗಳಾಗಬೇಕು. ಯೋಗದಿಂದ ಆರೋಗ್ಯ ಮತ್ತು ನೆಮ್ಮದಿ ದೊರೆಯುತ್ತದೆ.
-ಶ್ವಾಸಗುರು ವಚನಾನಂದಸ್ವಾಮೀಜಿ ಯೋಗ ಒಂದೇ ದಿನಕ್ಕೆ ಸೀಮಿತವಾಗಬಾರದು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯಕ್ರಮದಲ್ಲಿ ಯೋಗ ಅಳವಡಿಸಬೇಕು. ಆಯುಷ್ ಇಲಾಖೆಯಿಂದ ಪಠ್ಯಕ್ರಮ ಮಾಡುವ ಯೋಜನೆ ಇದೆ. ಯೋಗಕ್ಕೆ ಕರ್ನಾಟಕ ವಿಶೇಷ ಕೊಡುಗೆ ನೀಡಿದೆ.
-ಶಿವಾನಂದ ಪಾಟೀಲ, ಆರೋಗ್ಯ ಸಚಿವ ವಿಶ್ವಕ್ಕೆ ಯೋಗದ ಮಾರ್ಗದರ್ಶಕರು ಭಾರತೀಯರು. ಯೋಗಕ್ಕೆ ತನ್ನದೇ ಆದ ಪರಂಪರೆ ಇದೆ. ಋಷಿ ಮುನಿಗಳು ಆಚರಣೆ ಮಾಡುತ್ತಿದ್ದರು. ಈಗ ಯೋಗ ಜನರ ದಿನ ನಿತ್ಯದ ಅಗತ್ಯಗಳಲ್ಲಿ ಒಂದಾಗಿದೆ. ಯೋಗದಲ್ಲಿ ಭಾರತ ವಿಶ್ವ ಮಾನ್ಯತೆ ಗಳಿಸಿದೆ.
-ಡಿ.ಎಚ್.ಶಂಕರಮೂರ್ತಿ, ಸಭಾಪತಿ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ಯೋಗ ಕೇಂದ್ರಗಳನ್ನು ತೆರೆಯಲು ಸರ್ಕಾರ ಬಜೆಟ್‌ನಲ್ಲಿ ಅನುಮೋದನೆ ನೀಡಿದೆ. ವಾರ್ಡ್‌ಗಳಲ್ಲಿ ಯೋಗ ಕೇಂದ್ರಗಳ ಸ್ಥಾಪನೆಗೆ ಸಾರ್ವಜನಿಕರಿಂದ ಮತ್ತು ಜನ ಪ್ರತಿನಿಧಿಗಳಿಂದ ಹಲವು ಪ್ರಸ್ತಾವ ಬಂದಿವೆ. ನಗರದ ಉದ್ಯಾನಗಳಲ್ಲಿ ಯೋಗಕ್ಕೆ ಅನುಕೂಲವಾದ ವೇದಿಕೆ ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.
-ಆರ್.ಸಂಪತ್ ರಾಜ್, ಮೇಯರ್