ಮಂಡ್ಯ: ಯಾವ ದೇಶದಲ್ಲಿ ಗೃಹಸ್ಥಾಶ್ರಮ ಗಟ್ಟಿ ನೆಲೆಯನ್ನು ಕಂಡಿರುತ್ತದೋ ಆ ನೆಲದಲ್ಲಿ ಮಾತ್ರ ಸಂಸ್ಕೃತಿ ಸುಭದ್ರವಾಗಿರಲು ಸಾಧ್ಯ ಎಂದು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಕ್ಕಿ, ಅರಿಶಿನ-ಕುಂಕುಮ ಒಂದಾಗಿ ಮಂತ್ರಾ ಕ್ಷತೆಯಾಗಿರುವಂತೆ ಎಲ್ಲಿದ್ದವರೋ ಇಂದು ಒಂದಾಗಿ ಸಂಗಾತಿಗಳಾಗಿದ್ದೀರಿ. ಜೀವನದಲ್ಲಿ ಸೋಲಿಗೆ ಹೆದರದೆ ಏನೇ ಸಮಸ್ಯೆಗಳು ಬಂದರೂ ಸಹಿಸಿ ಕೊಂಡು ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಸಂಘಟಿಸಿ ಕೊಂಡು ಜೀವನವನ್ನು ಸಂತೃಪ್ತಿಯಾಗಿ ಕಳೆಯಿರಿ ಎಂದು ನವ ವಧುವರರಿಗೆ ಶುಭ ಹಾರೈಸಿದರು.
ಮನದೊಳಗಿನ ಶಕ್ತಿ ಜಾಗೃತಗೊಳಿಸಿ: ಮದುವೆಗಳು ಯಾವ ಹಂತದಲ್ಲಿ ನಡೆದರೆ ಭದ್ರವಾಗಿರಲು ಸಾಧ್ಯ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ವ್ಯಕ್ತಿ ವ್ಯಕ್ತಿಯನ್ನಾಗಿ ನೋಡಿದ ಸಂದರ್ಭದಲ್ಲಿ ನಮಗೆ ಕಾಣುವುದು ದೇಹ ಮತ್ತು ಹೆಸರು ಮಾತ್ರ. ಮದುವೆ ನಿಜವಾಗಿಯೂ ಸಾರ್ಥಕತೆ ಕಾಣಬೇಕೆಂದಾದರೆ ಒಳಗಿರುವ ಶಕ್ತಿಯನ್ನು ಜಾಗೃತ ಗೊಳಿಸಲು ನಮ್ಮೊಳಗಿರುವ ವಿವಿಧ ಕೋಶಗಳಾಚೆಗೆ ನಾವುಬದುಕಲು ಪ್ರಾರಂಭಿಸಬೇಕು. ಆಗ ಮಾತ್ರ ಗಂಡು ಹೆಣ್ಣಿನ ಪ್ರೀತಿ ಅಥವಾ ಪ್ರೇಮ ಶಿವ ಶಿವೆಯರ ಪ್ರೀತಿ ರೀತಿಯಲ್ಲಿ ಅಂತಿಮ ಕ್ಷಣದ ವರೆಗೂ ಇರಲು ಸಾಧ್ಯವಾಗುತ್ತದೆ. ಆದ್ದರಿಂದ ಗಂಡು ಮತ್ತು ಹೆಣ್ಣು ಈ ಇಬ್ಬರೂ ಬದುಕನ್ನು ಆಧ್ಯಾತ್ಮಿಕರಣಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಭೈರವೈಕ್ಯ ಶ್ರೀಗಳ ಸಂಕಲ್ಪ: ಭೈರವೈಕ್ಯ ಶ್ರೀಗಳು ತಮ್ಮ ಬದುಕಿನಲ್ಲಿ ಏನೆಲ್ಲಾ ಸಂಕಲ್ಪ ಮಾಡಿ ಹೋಗಿದ್ದಾರೆಯೋ ಭೌತಿಕವಾಗಿ ಅವರ ಅನುಪಸ್ಥಿತಿಯಲ್ಲಿಯೂ ಅವರು ಕೈಗೊಂಡ ಎಲ್ಲ ಸಂಕಲ್ಪಗಳು ಸಹಕಾರ ಕೊಡುತ್ತಿರುವುದು ನಮ್ಮ ಪರಿಶ್ರಮ ದಿಂದಲ್ಲ. ದಿವ್ಯಾತ್ಮ ವ್ಯಕ್ತಿಗಳು ಈ ಜಗತ್ತಿಗೆ ಆಗೊಮ್ಮೆ ಹೀಗೊಮ್ಮೆ ದೇಹ ಧರಿಸಿ ಬರುತ್ತಾರೆ. ಆದರೆ ಅವರಿಗೆ ದೇಹ ನೆಪಮಾತ್ರ. ದೇಹದ ಹೊರತಾಗಿಯೂ ಇನ್ನೂ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂತಹ ಮಹಾತ್ಮರು ತಾವು ಭೌತಿಕವಾಗಿ ಬದುಕಿದ್ದ ವೇಳೆ ನಾಲ್ಕಾರು ಜಾಡ್ಯಗಳಿಂದ ನರಳುತ್ತಿರುವ ವ್ಯಕ್ತಿಗಳಿಗೆ ಒಂದಿಷ್ಟು ಚೈತನ್ಯ ಶಕ್ತಿ ಕೊಟ್ಟು ಹೋದದ್ದೇ ಆದರೆ, ಅಂತವ ರೆಲ್ಲರ ಮೂಲಕ ಅವರ ದಿವ್ಯ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಅದಕ್ಕೆ ತಕ್ಕಂತೆ ಶ್ರೀಮಠದಲ್ಲಿ ಇಷ್ಟು ಸೇವೆಗಳು ಭಕ್ತರಿಗೆ ಸಿಗುತ್ತಿವೆ ಎಂದು ಹೇಳಿದರು.
ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಮರಳೆ ಗವಿಮಠದ ಶ್ರೀ ಶಿವರುದ್ರಸ್ವಾಮೀಜಿ, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ವಧುವರರ ಸಂಬಂಧಿಕರು ಸೇರಿದಂತೆ ಸಹಸ್ರಾರು ಭಕ್ತರು ಉಚಿತ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದರು.