ಕುರುಗೋಡು: ಗ್ರಾಮೀಣ ಪ್ರದೇಶಗಳಲ್ಲೂ ಜನರು ಅದ್ಧೂರಿ ವಿವಾಹ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅನಾವಶ್ಯಕ ವೆಚ್ಚ ತಡೆಗೆ ಸಾಮೂಹಿಕ ವಿವಾಹ ಬಡವರಿಗೆ ವರದಾನವಾಗುತ್ತಿವೆ. ಸಮಾಜದಲ್ಲಿ ಸರಳ ವಿವಾಹಗಳು ಹೆಚ್ಚು ನಡೆಯಬೇಕು ಎಂದು ಸೋಮಲಾಪುರ ಗ್ರಾಮದ ಶ್ರೀ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿಯ ಸಂಸ್ಥಾನ ಮಠದ ಪಂಚ ಪಿಠಾಧಿಪತಿ ಶ್ರೀ ಷಡಕ್ಷರ ಮಹಾಸ್ವಾಮಿ ಶ್ರೀಗಳು ಕರೆ ನೀಡಿದರು.
ಪಟ್ಟಣದ ಸಮೀಪದ ಸೋಮಲಾಪುರ ಗ್ರಾಮದ ಶ್ರೀ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 30ನೇ ವರ್ಷದ ಪುಣ್ಯಾ ರಾಧನೆ, ಜಾತ್ರಾ ಮಹೋತ್ಸವ ಹಾಗೂ ಉಚಿತ ಸರ್ವಧರ್ಮಿಯರ 61 ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮೂಹಿಕ ವಿವಾಹದಿಂದ ಜನರು ಭವಿಷ್ಯದಲ್ಲಿ ನೆಮ್ಮದಿ ಜೀವನ ನಡೆಸಬಹುದಾಗಿದೆ. ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿದ್ದು, ಸಮಾಜದಲ್ಲಿಸಮಾನತೆ ಸಹಕಾರ, ಸಹಬಾಳ್ವೆ ಬರಬೇಕಾದರೆ ಇಂತಹ ಮಾದರಿ ಮದುವೆಯನ್ನು ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಇದರ ಜೊತೆಗೆ ದೇವರು ಶ್ರೀಮಂತಿಕೆ ಕೊಟ್ಟಾಗ ಸಮಾಜದಲ್ಲಿ ಹಿಂದುಳಿದ ಮತ್ತು ಬಡಜನರಿಗೆ ನೆರವಾಗುವಂತಹ ಕಲ್ಯಾಣ ಕೆಲಸ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ಎಷ್ಟೋ ಜನ ಸಾಕಷ್ಟು ಸ್ಥಿತಿವಂತರಿದ್ದರೂ ಸೇವೆ ಮಾಡುವ ಗುಣ ಇರುವುದಿಲ್ಲ. ಮಾನವ ಜನ್ಮ ತಾಳಿದ ನಾವೆಲ್ಲಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರು ಹಾಗೂ ಸಮಾಜದ ಋುಣ ತೀರಿಸಿದಾಗ ಬದುಕು ಸಾರ್ಥಕವಾಗೊಳ್ಳುತ್ತದೆ. ಅದರಲ್ಲೂ ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿನಲ್ಲಿ ಬಡವರಿಗೆ ದಾನ, ಧರ್ಮ ಮಾಡುವ ಗುಣ ನಮ್ಮದಾಗಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜೆ ಕಾರ್ಯಕ್ರಮ ಗಳು ಜರುಗಿದವು.
ತದನಂತರ ಹಾಲಿ ಶಾಸಕ ಜೆ. ಎನ್. ಗಣೇಶ್ ಮತ್ತು ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ದೇವಸ್ಥಾನಕ್ಕೆ ಭೇಟಿ ನೀಡಿ ಅಶ್ರಿವಾದ ಪಡೆದು ನೂತನ ವಧು ವರರಿಗೆ ಶ್ರೀ ಗಳ ಜೊತೆಗೆ ಶುಭ ಹಾರೈಸಿದರು.
ಕಾರ್ಯಕ್ರಮ ದಲ್ಲಿ ದೇವರ ದರ್ಶನ ಪಡೆದು ಬಂದಂತಹ ಭಕ್ತಾದಿಗಳಿಗೆ ಜೋರಾಗಿ ಮಾಜಿ ಶಾಸಕ ಸುರೇಶ್ ಬಾಬು ಕಾರ್ಯಕರ್ತರೊಂದಿಗೆ ಅನ್ನ ದಾಸೋಹ ನೀಡಿದರೆ ಹಾಲಿ ಶಾಸಕ ಗಣೇಶ್ ಅವರು ಕಾರ್ಯಕರ್ತರೊಂದಿಗೆ ದೇವರ ದರ್ಶನ ಪಡೆದು ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಕಂಡುಬಂದಿತು.