ತಾಳಿಕೋಟೆ: ತಾಲೂಕಿನ ಹಗರಗುಂಡ ಗ್ರಾಮ ವ್ಯಾಪ್ತಿಯಲ್ಲಿನ ಜಮೀನನ್ನು ಸರಕಾರ 1974ರಲ್ಲಿ ಜಾರಿ ಮಾಡಿದ ಉಳುವವನೆ ಭೂಮಿ ಒಡೆಯ ಕಾಯ್ದೆ ಪ್ರಕಾರವಾಗಿ ಉಳುವವರಿಗೆ ಭೂಮಿ ನೀಡದೇ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ನೈಜ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದು, ನ್ಯಾಯ ದೊರೆಯದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ತಹಶೀಲ್ದಾರ್ ಮೂಲಕ ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ರೈತರಾದ ಶಿವಬಸಮ್ಮ ಭಂಟನೂರ, ಲಕ್ಷ್ಮೀಬಾಯಿ ದೇಸಾಯಿ, ಈರಮ್ಮ ಕೊಣ್ಣೂರ, ಶರಣಗೌಡ ಭಂಟನೂರ, ಸುರೇಶ ಪಾಟೀಲ, ಬಸವರಾಜ ಪಾಟೀಲ ಮತ್ತಿತರರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ಈ ಕುರಿತು ಸಲ್ಲಿಸಿದ ಮನವಿಯಲ್ಲಿ 1973 ರಿಂದ ಇಲ್ಲಿಯವರೆಗೂ ಹಗರಗುಂಡ ಗ್ರಾಮದ ಸ.ನಂ.100/2ರ ಜಮೀನನ್ನು ವಿರೂಪಾಕ್ಷಪ್ಪಗೌಡ ಸಂಗಪ್ಪ ಪಾಟೀಲ ಇವರ ಹೆಸರು ಸಾಗುವಳಿಯಲ್ಲಿ ದಾಖಲಿದ್ದು, ಇವರ
ಕುಟುಂಬಸ್ಥರೇ ವಹಿವಾಟು ಉಪಭೋಗ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಆರು ಕುಟುಂಬಗಳು ಜಮೀನಿನಿಂದ ಉಪ ಜೀವನ ಸಾಗಿಸುತ್ತಿದ್ದಾರೆ. ಆದರೆ ಜಮೀನಿನ ಉತಾರನಲ್ಲಿ ಸರಕಾರ ಎಂದು ದಾಖಲಾಗಿದ್ದು, ಇದನ್ನು ಕಡಿಮೆಗೊಳಿಸುವಂತೆ ಸ್ಥಳೀಯ ತಹಶೀಲ್ದಾರ್ ಅವರಿಗೆ 17-07-2020ರಂದೇ ಅರ್ಜಿ ನೀಡಲಾಗಿದ್ದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಅಲ್ಲದೇ ನಮ್ಮ ಅರ್ಜಿ ಪ್ರಕಾರ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸ್ಥಾನಿಕ ಚವಕಾಸಿ ಮಾಡದೇ ಓರ್ವ ವ್ಯಕ್ತಿಯ ಕುಮ್ಮಕ್ಕಿನಿಂದ ಸುಳ್ಳು ವರದಿಯನ್ನು ತಹಶೀಲ್ದಾರ್ ಅವರಿಗೆ ನೀಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಲೆ ತಲಾಂತರದಿಂದಲೂ ಪೂರ್ವಜರ ಹೆಸರಿನಲ್ಲಿರುವ ಜಮೀನಿನ ಉತಾರೆಯಲ್ಲಿರುವ ಸರಕಾರವನ್ನು ಕಡಿಮೆ ಮಾಡಿ ನಮ್ಮ ಹೆಸರಿಗೆ ಮಾಡದಿದ್ದರೆ 6 ಕುಟುಂಬದ ಸದಸ್ಯರು ಡಿಸಿ ಕಚೇರಿ ಎದುರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಬಸವಂತ್ರಾಯ ಸಿದ್ದನಗೌಡ ಭಂಟನೂರ ಹಾಗೂ ತಾಳಿಕೋಟೆ ತಾಲೂಕಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿಯೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಭೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಭೂ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ವಿಜಯಪುರ ಜಿಲ್ಲಾಧಿಕಾರಿಗಳಿಗೆ 03-03-2021 ರಂದೇ ಮನವಿಯ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಅಧಿ ಕಾರಿಯೂ ಇದರ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ನೊಂದ ರೈತರು ಆರೋಪಿಸಿದ್ದಾರೆ. ಉಪ ತಹಶೀಲ್ದಾರ್ ಎ.ಎನ್.ಶರ್ಮಾ ರೈತರ ಮನವಿ ಸ್ವೀಕರಿಸಿದರು.