ಹುಬ್ಬಳ್ಳಿ: ಖಾಸಗಿ ಬೀಜ ಕಂಪೆನಿಗಳಿಗೆ, ಸರಕಾರಿ ಏಜೆನ್ಸಿಗಳಿಗೆ ರೈತರು ಬೀಜೋತ್ಪಾದನೆ ಮಾಡುತ್ತಾರೆ. ಆದರೆ, ರೈತ ಉತ್ಪಾದಕ ಕಂಪೆನಿಯೊಂದು ರೈತರಿಗಾಗಿಯೇ ಬೀಜಗಳ ಉತ್ಪಾದನೆಗೆ ಮುಂದಾಗಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಹೆಸರು ಬೀಜ ಉತ್ಪಾದನೆಗೆ ಶ್ರೀಕಾರ ಹಾಕಲಾಗಿದೆ. ರೈತ ಉತ್ಪಾದಕ ಕಂಪೆನಿಯೊಂದು ದೊಡ್ಡ ಪ್ರಮಾಣದಲ್ಲಿ ಬೀಜೋತ್ಪಾದನೆಗೆ ಮುಂದಾಗಿರುವುದು ರಾಜ್ಯದಲ್ಲಿಯೇ ಮೊದಲ ಯತ್ನವಾಗಿದೆ.
ಕೆಲ ದಶಕಗಳ ಹಿಂದೆ ಬೀಜೋತ್ಪಾದನೆಯಲ್ಲಿ ರೈತರು ಸ್ವಯಂ ಸ್ವಾವಲಂಬನೆ ಹೊಂದಿದ್ದರು. ಜತೆಗೆ ಪರಸ್ಪರ ಕೊಡುಕೊಳ್ಳುವಿಕೆ ಪರಂಪರೆ ಪಾಲಿಸುತ್ತಿದ್ದರು. ಬದಲಾದ ಸ್ಥಿತಿಯಲ್ಲಿ ರೈತರು ಬೀಜ ಸ್ವಾವಲಂಬನೆ ಕಳೆದುಕೊಂಡು, ಇದೀಗ ಬಹುತೇಕವಾಗಿ ಪರಾವಲಂಬಿ ಸ್ಥಿತಿಯಲ್ಲಿದ್ದಾರೆ. ಬೀಜಗಳಿಗಾಗಿ ಬಹುತೇಕ ರೈತರು ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ. ಮತ್ತೆ ರೈತರನ್ನು ಬೀಜ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ.
ದೇಶಪಾಂಡೆ ಪ್ರತಿಷ್ಠಾನದ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಧಾರವಾಡ ಜಿಲ್ಲೆ ನವಲಗುಂದದ ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ ಧಾರವಾಡ ಕೃಷಿ ವಿವಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕೃತ ಸಂಸ್ಥೆ, ನಬಾರ್ಡ್ ಬ್ಯಾಂಕ್ ಸಹಕಾರದೊಂದಿಗೆ ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ ಷೇರುದಾರ ರೈತರು ರಾಜ್ಯದಲ್ಲಿಯೇ ಮೊದಲ ಪ್ರಯೋಗಕ್ಕೆ ಮುಂದಾಗಿದ್ದಾರೆ.
50 ಎಕರೆಯಲ್ಲಿ ಪ್ರಯೋಗ: ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ ಬೀಜ ಸ್ವಾವಲಂಬನೆ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯದಲ್ಲಿ ತೊಡಗಿಕೊಂಡಿದೆ. ಮೊದಲ ಯತ್ನವಾಗಿ ಸುಮಾರು 50 ಎಕರೆ ಪ್ರದೇಶದಲ್ಲಿ ಹೆಸರು ಬೀಜ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ದೇಶಪಾಂಡೆ ಪ್ರತಿಷ್ಠಾನ ಧಾರವಾಡ ಕೃಷಿ ವಿವಿಯಿಂದ ಡಿಜಿಜಿವಿ-4 ಎಂಬ ತಳಿಯ ಪ್ರಮಾಣೀಕೃತ ಹೆಸರು ಬೀಜವನ್ನು ಖರೀದಿಸಿದ್ದು, ಅದನ್ನು ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿಯ ಷೇರುದಾರರಿಗೆ ಉಚಿತವಾಗಿ ನೀಡಿದೆ.
ಪ್ರತಿ ರೈತರಿಗೆ 3-4 ಎಕರೆಗೆ ಸಾಕಾಗುವಷ್ಟು ಹೆಸರು ಬೀಜ ನೀಡಲಾಗಿದ್ದು, ಜೂನ್ 20ರೊಳಗಾಗಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮೊದಲ ಯತ್ನದಲ್ಲಿ ಸುಮಾರು 200 ಕ್ವಿಂಟಲ್‌ನಷ್ಟು ಹೆಸರು ಬೀಜ ಉತ್ಪಾದನೆ ಗುರಿ ಹೊಂದಲಾಗಿದೆ. ಧಾರವಾಡ ಕೃಷಿ ವಿವಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕೃತ ಸಂಸ್ಥೆಯವರು ಸೂಕ್ತ ಮಾರ್ಗದರ್ಶನ, ಬೆಳೆ ಬೆಳೆಯುವ ವಿಧಾನ ಕುರಿತಾಗಿ ಕಾಲ ಕಾಲಕ್ಕೆ ಮಾಹಿತಿ ನೀಡಲಿದ್ದಾರೆ. ಸೂಚಿಸಿದ ಪದ್ಧತಿಯಲ್ಲಿಯೇ ಬೆಳೆ ಬೆಳೆಯುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿವಿ ವಿಜ್ಞಾನಿಗಳು, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕೃತ ಸಂಸ್ಥೆ ಅಧಿಕಾರಿಗಳು ತಲಾ ಮೂರು ಬಾರಿ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮಾಡಲಿದ್ದು, ರೈತರ ಹೊಲಗಳಲ್ಲಿ ಬ್ಲಾಕ್ ಮಟ್ಟದಲ್ಲಿ ಗುಣಮಟ್ಟ ಹಾಗೂ ನಿರ್ವಹಣೆ ಕುರಿತಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೆಸರು ಬೆಳೆ 90 ದಿನಗಳ ನಂತರದಲ್ಲಿ ಕೊಯ್ಲಿಗೆ ಬರಲಿದೆ.
ಗುಣಮಟ್ಟದ ಪರೀಕ್ಷೆ : ರೈತರು ಬೀಜೋತ್ಪಾದನೆ ಮಾಡಿದ ನಂತರದಲ್ಲಿ ಬಂದ ಫಸಲನ್ನು ವೇರ್‌ಹೌಸ್ ಗೆ ಕಳುಹಿಸಲಾಗುತ್ತದೆ. ಪ್ರತಿ ರೈತರ ಫಸಲಿಗೂ ಲಾಟ್ ಸಂಖ್ಯೆ ನೀಡಲಾಗುತ್ತದೆ. ಪ್ರತಿ ಲಾಟ್‌ನಿಂದಲೂ ಸ್ಯಾಂಪಲ್ ಪಡೆದು ಮೊಳಕೆ ಒಡೆಯುವಿಕೆ ಪ್ರಮಾಣ ಹಾಗೂ ಬೀಜದ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶೇ.90 ಮೊಳಕೆ ಒಡೆಯುವಿಕೆ ಸಾಮರ್ಥ್ಯ ಹೊಂದಿದ ಬೀಜಗಳನ್ನು ಗುಣಮಟ್ಟದ ಪರೀಕ್ಷೆ ಹಾಗೂ ಬೀಜೋಪಚಾರ ಮಾಡುವ ಮೂಲಕ ಬೀಜದ ರೂಪದಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಬೀಜಗಳ ಮಾರಾಟಕ್ಕೆ ಕಂಪೆನಿಯಲ್ಲಿನ ಸುಮಾರು 1034 ಷೇರುದಾರ ರೈತರಿಗೆ ಮಾರಾಟ ಮಾಡಲಾಗುತ್ತದೆ. ನಿಗದಿತ ಪ್ರಮಾಣದ ಮೊಳಕೆ ಒಡೆಯುವಿಕೆ ಸಾಧ್ಯವಾಗದ ಫಸಲನ್ನು ಎಪಿಎಂಸಿಗೆ ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತದೆ. ರೈತರು ಬೆಳೆಯುವ ಫಸಲನ್ನು ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿಯಿಂದಲೇ ಖರೀದಿ ಮಾಡಿ, ನಂತರ ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಬಂದ ಲಾಭವನ್ನು ಷೇರುದಾರರಿಗೆ ಹಂಚಿಕೆ ಮಾಡಲಾಗುತ್ತದೆ.
ದೇಶಪಾಂಡೆ ಪ್ರತಿಷ್ಠಾನ ಅಡಿಯಲ್ಲಿನ ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ ರಾಜ್ಯದಲ್ಲೇ ಅತ್ಯುತ್ತಮ ಬೀಜೋತ್ಪಾದಕ ಕಂಪೆನಿ ಆಗಬೇಕೆಂಬುದು ನಮ್ಮ ಗುರಿ. ಮೊದಲ ಪ್ರಯೋಗವಾಗಿ ಹೆಸರು ಬೀಜೋತ್ಪಾದನೆಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಶೇಂಗಾ, ಉಳ್ಳಾಗಡ್ಡಿ, ಕಡಲೆ, ಸಿರಿಧಾನ್ಯ ಹಾಗೂ ತರಕಾರಿಗಳ ಬೀಜೋತ್ಪಾದನೆಗೂ ಗಮನ ನೀಡಲಾಗುವುದು.
-ಚಂದ್ರಶೇಖರಸ್ವಾಮಿ, ಯೋಜನಾ ವ್ಯವಸ್ಥಾಪಕ, ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ
-ಅಮರೇಗೌಡ ಗೋನವಾರ