ನವದೆಹಲಿ: ಮಹತ್ವದ ಬೆಳವಣಿಗೆ ಎಂಬಂತೆ 1989-90ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ನಡೆದ 700 ಕಾಶ್ಮೀರಿ ಪಂಡಿತರ ಮಾರಣಹೋಮ ಪ್ರಕರಣದ ಮರು ತನಿಖೆ ನಡೆಸಿ, ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ಸೇರಿದಂತೆ ಹಲವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪಿಟಿಐ ವರದಿ ಪ್ರಕಾರ, ಕಣಿವೆ ರಾಜ್ಯದಲ್ಲಿ ಈ ಮಾರಣಹೋಮ ಘಟನೆ ನಡೆದು ಸುಮಾರು 27 ವರ್ಷಗಳು ಕಳೆದಿದೆ. ಆ ನಿಟ್ಟಿನಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ಲೂಟಿ, ಬೆಂಕಿ ಹಚ್ಚಿದ ಪ್ರಕರಣದ ಕುರಿತು ಸಾಕ್ಷ್ಯಾಧಾರವನ್ನು ಸಂಗ್ರಹಿಸುವುದು ತುಂಬಾ ಕಷ್ಟದ ಕೆಲಸ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಹಾಗೂ ಜಸ್ಟೀಸ್ ಡಿವೈ ಚಂದ್ರಾಚೂಡ್ ನೇತೃತ್ವದ ಪೀಠ ಆದೇಶವನ್ನು ನೀಡಿದೆ.
ನೀವು 27 ವರ್ಷಗಳ (ಅರ್ಜಿದಾರರು) ಕಳೆದ ಮೇಲೆ ಅರ್ಜಿ ಸಲ್ಲಿಸಿದ್ದೀರಿ, ಈಗ ಸಾಕ್ಷ್ಯ ಎಲ್ಲಿಂದ ಬರಲು ಸಾಧ್ಯ ಹೇಳಿ ಎಂದು ಪೀಠ ಪ್ರಶ್ನಿಸಿದೆ.
ರೂಟ್ಸ್ ಆಫ್ ಕಾಶ್ಮೀರ ಹೆಸರಿನ ಸಂಸ್ಥೆಯ ಪರಿವಾಗಿ ವಕೀಲರಾದ ವಿಕಾಸ್ ಪಾಡೋರಾ ಕಾಶ್ಮೀರಿ ಪಂಡಿತರ ಹತ್ಯೆಯ ತನಿಖೆ ನಡೆಸುವ ಕುರಿತು ಅರ್ಜಿ ಸಲ್ಲಿಸಿ, ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೊರ ಹಾಕಲಾಗಿದೆ. ಅಲ್ಲದೇ ಅವರು ತನಿಖೆಗೂ ನಡೆಸಲು ಕೈಜೋಡಿಸಿಲ್ಲ. ಇದರಿಮದಾಗಿ ಮುಂದಿನ ಕ್ರಮದ ಬಗ್ಗೆ ವರದಿ ನೀಡಲು ವಿಳಂಬವಾಗಿತ್ತು. ಹಾಗಾಗಿ ಈ ತನಿಖೆಯ ವಿಚಾರದಲ್ಲಿ ಕೇಂದ್ರವಾಗಲಿ, ರಾಜ್ಯ ಸರ್ಕಾರ ಅಥವಾ ನ್ಯಾಯಾಂಗ ಸೂಕ್ತ ನಿರ್ದೇಶನ ನೀಡಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದ್ದರು.
700 ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 250 ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ಪ್ರಕರಣದ ಮರು ತನಿಖೆಗೆ ಸೂಚನೆ ನೀಡಬೇಕೆಂದು ಕೋರಿ ಸಂಸ್ಥೆ ಸುಪ್ರೀಂಗೆ ಮನವಿ ಮಾಡಿತ್ತು.