Advertisement

ಸಾಮೂಹಿಕ ವಲಸೆ ಅಪಾಯಕಾರಿ

12:36 AM Sep 13, 2019 | Team Udayavani |

ಮಹಾರಾಷ್ಟ್ರದಲ್ಲಿ ಈಗಾಗಲೇ ಚುನಾವಣೆ ತಯಾರಿ ಪ್ರಾರಂಭವಾಗಿದೆ. ಬಿಜೆಪಿ ಈ ನಿಟ್ಟಿನಲ್ಲಿ ಉಳಿದ ಪಕ್ಷಗಳಿಗಿಂತ ಮಾತ್ರವಲ್ಲದೆ ಮಿತ್ರ ಪಕ್ಷ ಶಿವಸೇನೆಗಿಂತಲೂ ಒಂದು ಹೆಜ್ಜೆ ಮುಂದಿದೆ. ವಿಪಕ್ಷವಾಗಿ ಕಾಂಗ್ರೆಸ್‌-ಎನ್‌ಸಿಪಿ ಕೂಟವೂ ಸೀಟು ಹಂಚಿಕೆ ಇತ್ಯಾದಿ ಮಾತುಕತೆಗಳನ್ನು ಪೂರೈಸಿದೆ. ಆದರೆ ಅಲ್ಲಿ ಸದ್ಯ ನಡೆಯುತ್ತಿರುವ ಪಕ್ಷಾಂತರವನ್ನು ಗಮನಿಸಿದರೆ ವಿಪಕ್ಷ ಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಢಾಳಾಗಿಯೇ ಗೋಚರಿಸುತ್ತಿದೆ.

Advertisement

ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಘಟಾನುಘಟಿ ನಾಯಕರೇ ಬಿಜೆಪಿ ಮತ್ತು ಶಿವಸೇನೆಯಲ್ಲಿ ಆಶ್ರಯಪಡೆಯಲು ಹಾತೊರೆಯುತ್ತಿದ್ದಾರೆ. ನವಿಮುಂಬಯಿಯಲ್ಲಿ ಎನ್‌ಸಿಪಿಯ ಪ್ರಭಾವಿ ನಾಯಕರಾಗಿದ್ದ ಗಣೇಶ್‌ ನಾಯಕ್‌ ಮತ್ತು ಪುಣೆಯ ಬಲಾಡ್ಯ ಕಾಂಗ್ರೆಸ್‌ ನಾಯಕ್‌ ಹರ್ಷವರ್ಧನ ಪಾಟೀಲ್ ಇತ್ತೀಚೆಗೆ ಕೇಸರಿ ಪಾಳಯಕ್ಕೆ ಜಿಗಿದಿರುವ ಪ್ರಮುಖ ನಾಯಕರು. ಇದಕ್ಕೂ ಮೊದಲು ವೈಭವ್‌ ಪಿಛಡ್‌, ಶಿವೇಂದ್ರ ಭೋಸಲೆ ಸೇರಿದಂತೆ ಅನೇಕರು ಪಕ್ಷಾಂತರ ಮಾಡಿದ್ದಾರೆ. ಇವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಲಾಡ್ಯರು. ಇವರ ಪಕ್ಷಾಂತರ ವಿಪಕ್ಷ ಕೂಟಕ್ಕೆ ಖಂಡಿತ ಹಾನಿ ಮಾಡಲಿದೆ. ಕೆಲ ಸಮಯದ ಹಿಂದೆಯಷ್ಟೇ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು, ‘ವಿಪಕ್ಷದ ಕನಿಷ್ಠ 50 ಶಾಸಕರು ಬಿಜೆಪಿ ಸೇರುವ ಉತ್ಸುಕತೆಯಲ್ಲಿದ್ದಾರೆ’ ಎಂದಿದ್ದರು. ಕೇಸರಿ ಕೂಟಕ್ಕೆ ಸೇರುತ್ತಿರುವ ವಿಪಕ್ಷ ನಾಯಕರ ದಂಡನ್ನು ನೋಡಿದರೆ ಅವರ ಹೇಳಿಕೆ ಉತ್ಪ್ರೇಕ್ಷಿತ ಅಲ್ಲ ಎಂದೆನಿಸುತ್ತಿದೆ.

ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಮುಂಬಯಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೇಟಿನಲ್ಲಿ ಸ್ಪರ್ಧಿಸಿದ್ದ ಚಿತ್ರನಟಿ ಊರ್ಮಿಳಾ ಮಾತೊಂಡ್ಕರ್‌ ಆರೇ ತಿಂಗಳಲ್ಲಿ ಪಕ್ಷ ಬಿಟ್ಟಿದ್ದಾರೆ. ಊರ್ಮಿಳಾ ಕಾಂಗ್ರೆಸ್‌ಗೆ ಬಂದದ್ದೇ ಚುನಾವಣೆ ನಿಕಟವಾದಾಗ. ಅವರೇನೋ ಕಾಂಗ್ರೆಸಿನ ತಳಮಟ್ಟದ ಕಾರ್ಯಕರ್ತರೂ ಅಲ್ಲ. ಅವರ ಸೇರ್ಪಡೆಯಿಂದ ಕಾಂಗ್ರೆಸಿನ ತಾರಾ ವರ್ಚಸ್ಸು ಒಂದಿಷ್ಟು ಹೆಚ್ಚಾಗಿತ್ತಷ್ಟೆ. ಆದರೆ ಅವರು ಪಕ್ಷ ತೊರೆಯಲು ನೀಡಿರುವ ಕಾರಣ ಮಾತ್ರ ಮಹಾರಾಷ್ಟ್ರ ಎಂದಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್‌ ನಾಯಕತ್ವ ಎಷ್ಟು ದುರ್ಬಲವಾಗಿದೆ ಎನ್ನುವು ದನ್ನು ಬಯಲಾಗಿಸಿದೆ. ಮುಂಬಯಿ ಕಾಂಗ್ರೆಸ್‌ನ ಒಳಜಗಳದಿಂದ ಬೇಸತ್ತು ಪಕ್ಷ ತ್ಯಜಿಸಿರುವುದಾಗಿ ಊರ್ಮಿಳಾ ಹೇಳಿದ್ದಾರೆ. ಈ ಒಳ ಜಗಳ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಕಾಂಗ್ರೆಸ್‌ ಅಷ್ಟಿಷ್ಟು ಅಸ್ತಿತ್ವ ಉಳಿಸಿಕೊಂಡಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಇದೆ. ಸತತ 2 ಲೋಕಸಭಾ ಚುನಾವಣೆಗಳನ್ನು ಹೀನಾಯವಾಗಿ ಸೋತು ಕೂಡ ಕಾಂಗ್ರೆಸ್‌ ಪಾಠ ಕಲಿಯುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ ಎನ್‌ಸಿಪಿ 4 ಮತ್ತು ಕಾಂಗ್ರೆಸ್‌ 1ರಲ್ಲಿ ಮಾತ್ರ ಗೆದ್ದಿದೆ. ಬಿಜೆಪಿ 23 ಮತ್ತು ಶಿವಸೇನೆ 18 ಸ್ಥಾನಗಳನ್ನು ಗಳಿಸಿವೆ. ಎನ್‌ಡಿಎ ಅಭ್ಯರ್ಥಿಗಳು ಗೆದ್ದಿರುವ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಅಭ್ಯರ್ಥಿಗಳು 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ ಎನ್ನುವುದು ಚುನಾವಣೆಗೆ ವಿಪಕ್ಷ ಎಷ್ಟು ಕಳಪೆ ತಯಾರಿ ಮಾಡಿಕೊಂಡಿತ್ತು ಎನ್ನುವುದನ್ನು ತಿಳಿಸುತ್ತಿದೆ. ಪ್ರಚಲಿತ ರಾಜಕೀಯದಲ್ಲಿ ಪಕ್ಷ ನಿಷ್ಠೆ, ಸಿದ್ಧಾಂತ, ನೈತಿಕತೆ ಇವೆಲ್ಲ ಬೆಲೆ ಕಳೆದುಕೊಂಡಿರುವ ಶಬ್ದಗಳು. ಅದೇ ರೀತಿ ಚುನಾವಣೆ ಸನ್ನಿಹಿತವಾಗುವಾಗ ನಾಯಕರು ಪಕ್ಷ ಬದಲಾಯಿಸುವುದು ಭಾರತದ ರಾಜಕಾರಣದಲ್ಲಿ ಹೊಸ ಸಂಪ್ರದಾಯವೂ ಅಲ್ಲ. ಆದರೆ ಮಹಾರಾಷ್ಟ್ರದಲ್ಲಾಗಿರುವಂತೆ ನಾಯಕರೆಲ್ಲ ಸಾಮೂಹಿಕ ವಲಸೆ ಹೋಗುವುದು ಪ್ರಜಾತಂತ್ರದ ಹಿತದೃಷ್ಟಿಯಿಂದ ಸರಿಯಲ್ಲ. ಇಂಥ ಬೆಳವಣಿಗೆ ಜನರ ಮನಸ್ಸಲ್ಲಿ ರಾಜಕೀಯದ ಬಗ್ಗೆ ಭಿನ್ನವಾದ ಒಂದು ಚಿತ್ರಣ ಮೂಡಿಸುತ್ತದೆ ಮತ್ತು ಈ ಚಿತ್ರಣ ಫ‌ಲಿತಾಂಶದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next