ಚಿಕ್ಕಬಳ್ಳಾಪುರ: ಸಮತಾ ಸೈನಿಕ ದಳ ಹಾಗೂ ತೆಲುಗು ನಟ ನಂದಮೂರಿ ಬಾಲಕೃಷ್ಣ ಹೆಲ್ಪಿಂಗ್ ಹ್ಯಾಂಡ್ಸ್‌ನಿಂದ ನಗರ ಹೊರ ವಲಯದ ಸಿವಿ ಕ್ಯಾಂಪಸ್ ಸಮೀಪ ಜೂ.30 ರಂದು ಭೌದ್ಧ ಧರ್ಮದ ಅನುಸಾರ ಉಚಿತ ಸಾಮೂಹಿಕ ಸರಳ ವಿವಾಹ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಜಿ.ಸಿ. ವೆಂಕಟರವಣಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂತರ್ಜಾತಿ ವಿವಾಹಕ್ಕೂ ಒತ್ತು ಕೊಡಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗಳಿಗೆ ಮಣಿದು ಮದುವೆ ಗಳಿಗೆ ದುಂದು ವೆಚ್ಚ ಮಾಡುತ್ತಿರುವ ಬಡ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿದ್ದು, ಇದರಿಂದ ಉಂಟಾಗುವ ಕುಟುಂಬದ ಆರ್ಥಿಕ ಹೊರೆಯನ್ನು ತಪ್ಪಿಸಲು ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 22 ಜೋಡಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಇಬ್ಬರು ಅಂತರ್ಜಾತಿಯವರಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಸಂಘಟನೆಯಿಂದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸು ವುದಾಗಿ ತಿಳಿಸಿದರು. ಈಗಾಗಲೇ ನೋಂದಾಯಿಸಿಕೊಂಡ ಜೋಡಿಗಳಿಗೆ ಮಂಗಳಸೂತ್ರ, ಕಾಲುಂಗರ, ಬಟ್ಟೆ, ಸೀರೆ, ಪಂಚೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಸಮತಾ ಸೈನಿಕ ದಳದ ಗೌರವಾಧ್ಯಕ್ಷ ನರಸಿಂಹಪ್ಪ, ಜಿಲ್ಲಾ ಕಾರ್ಯದರ್ಶಿ ಪಿಳ್ಳ ಅಂಜಿನಪ್ಪ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್, ಮಹಿಳಾ ಕಾರ್ಯದರ್ಶಿ ಸರಸ್ವತಮ್ಮ, ಪದಾಧಿಕಾರಿಗಳಾದ ಶ್ರೀರಾಮ್, ಮಂಜು, ಮೂರ್ತಿ, ಶಿವು, ನಾರಾಯಣಸ್ವಾಮಿ ಇದ್ದರು.