ಧರ್ಮ ಕೀರ್ತಿರಾಜ್ ಅಭಿನಯದ “ಚಾಣಕ್ಯ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನು ನಾಯಕನ ಇಂಟ್ರೋ ಹಾಡು ತೆಗೆದುಬಿಟ್ಟರೆ, ಚಿತ್ರಕ್ಕೆ ಕುಂಬಳಕಾಯಿ. ಅದಕ್ಕೂ ಮುನ್ನ ಒಮ್ಮೆ ಚಿತ್ರದ ಮುಗಿಯುತ್ತಿರುವ ಖುಷಿಯ ಬಗ್ಗೆ ಮಾತಾಡಿ ಬಿಡೋಣ ಎಂದು ಚಿತ್ರತಂಡದವರೆಲ್ಲಾ ಬಂದಿದ್ದರು. ಇದೇ ಸಂದರ್ಭದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಯಿತು. “ಚಾಣಕ್ಯ ಚಿತ್ರವನ್ನು ವೆಂಕಟೇಶಮೂರ್ತಿ ನಿರ್ಮಿಸುತ್ತಿದ್ದು, ಮಹೇಶ್ ಚಿನ್ಮಯಿ ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನು ಅವರೇ ರಚಿಸಿದ್ದಾರೆ. ಇನ್ನು ಧರ್ಮಗೆ ನಾಯಕಿಯರಾಗಿ ಅರ್ಚನಾ ಮತ್ತು ಸುಷ್ಮಿತಾ ಗೌಡ ನಟಿಸಿದ್ದಾರೆ. ಅದಲ್ಲದೆ ವಿನೋದ್ ಆಳ್ವಾ, ಶೋಭರಾಜ್, ಕುರಿ ಸುನೀಲ್ ಮುಂತಾದವರು ನಟಿಸಿದ್ದಾರೆ.ಇದುವರೆಗೂ ಹಲವು ಚಿತ್ರಗಳಲ್ಲಿ ಲವ್ವರ್ ಬಾಯ್ ಆಗಿ ನಟಿಸಿದ್ದ ಧರ್ಮ, ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರಂತೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಸಾಕಷ್ಟು ಮಾಸ್ ಅಂಶಗಳು ಇವೆ ಎನ್ನುತ್ತಾರೆ ಅವರು.
“ಸಿಟಿಯಿಂದ ತಾತನ ಊರಿಗೆ ಹೋಗುವ ಯುವಕನ ಪಾತ್ರ ನನ್ನದು. ಚಿತ್ರದಲ್ಲಿ ಬ್ಲಾಕ್ ಮನಿ, ರೈತರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಅದೆಲ್ಲವನ್ನೂ ಅವನು ಹೇಗೆ ತನ್ನ ಬುದ್ಧಿವಂತಿಕೆಯಿಂದ ಎದುರಿಸುತ್ತಾನೆ ಎನ್ನುವುದು ಕಥೆ’ ಎನ್ನುತ್ತಾರೆ ಧರ್ಮ. ಚಿತ್ರದಲ್ಲಿ ಮೂರು ದೊಡ್ಡ ಫೈಟ್‌ಗಳಿವೆಯಂತೆ. ಆ ಪೈಕಿ ಒಂದು ಚೇಸ್ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ಸಂಯೋಜಿಸಿದ್ದಾರೆ.
“ಲಾಕಪ್ ಡೆತ್’ ಚಿತ್ರದ ನಂತರ ಥ್ರಿಲ್ಲರ್ ಮಂಜು ಸಂಯೋಜಿಸಿರುವ ಅತೀ ದೊಡ್ಡ ಚೇಸ್ ಇದು ಎನ್ನುತ್ತಾರೆ ಧರ್ಮ. “ಬಹುಶಃ “ಲಾಕಪ್ ಡೆತ್’ ನಂತರ ಮಂಜು ಮಾಸ್ಟರ್ ಯಾವ ಚಿತ್ರಕ್ಕೂ ಇಷ್ಟು ದೊಡ್ಡ ಚೇಸ್ ಮಾಡಿರಲಿಲ್ಲ. ಈ ಚಿತ್ರಕ್ಕೆ ಸುಮಾರು 10 ನಿಮಿಷದ ಚೇಸ್ ಮಾಡಿದ್ದಾರೆ. ಅದಕ್ಕಾಗಿ ತುಂಬಾ ಪ್ಲಾನ್ ಮಾಡಿ, ಸ್ಟೋರಿ ಬೋರ್ಡ್ ಮಾಡಿಕೊಂಡು, ಏಳೆಂಟು ದಿನಗಳ ಕಾಲ ಚೇಸ್ ಚಿತ್ರೀಕರಣ ಮಾಡಿದ್ದಾರೆ.
ಇನ್ನೆರೆಡು ಫೈಟ್‌ಗಳನ್ನು ಡಿಫರೆಂಟ್ ಡ್ಯಾನಿ ಮತ್ತು ವಿನೋದ್ ಮಾಸ್ಟರ್ ಕಂಪೋಸ್ ಮಾಡಿದ್ದಾರೆ’ ಎಂದು ವಿವರ ಕೊಡುತ್ತಾರೆ ಧರ್ಮ. ಕಳೆದ ವರ್ಷವೇ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈಗ ಬಹುತೇಕ ಮುಗಿದಿದೆ. ಮುಂದಿನ ತಿಂಗಳು ಹಾಡುಗಳು ಬಿಡುಗಡೆಯಾಗಲಿದೆ, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. “ಚಾಣಕ್ಯ’ಕ್ಕಾಗಿ ಶಿವಮೊಗ್ಗ, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ರಮೇಶ್ ಛಾಯಾಗ್ರಹಣ, ಅಭಿಮಾನ್ ರಾಯ್ ಸಂಗೀತ ಈ ಚಿತ್ರಕ್ಕಿದೆ.