Advertisement

ಹೈಕ ಸರ್ಟಿಫಿಕೇಟ್ಗಾಗಿ ಸಾಮೂಹಿಕ ಅರ್ಜಿ

08:03 AM Jan 15, 2019 | Team Udayavani |

ಹರಪನಹಳ್ಳಿ: ಹೈದ್ರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯ ಪ್ರಮಾಣ ಪತ್ರ ವಿತರಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸೋಮವಾರ ಬೀದಿಗಿಳಿದಿದ್ದರು. ಸ್ವಾಮೀಜಿಗಳು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಗಳು, ಪ್ರಗತಿಪರ ಸಂಘಟನೆ ಮುಖಂಡರು ಪಾದಯಾತ್ರೆಯಲ್ಲಿ ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು. ನಂತರ ಸ್ಥಳೀಯ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ ತೆರೆದು ಹೈಕ ಪ್ರಮಾಣ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಸಂಘಟನೆ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಪ್ರಗತಿಪರ ಸಂಘಟನೆಗಳ ಸಾರಥ್ಯದಲ್ಲಿ ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ ಹರಪನಹಳ್ಳಿ ತಾಲೂಕಿಗೆ 371ಜೆ ಕಲಂ ಸೌಲಭ್ಯ ಸಿಕ್ಕಿದೆ. ಹರಪನಹಳ್ಳಿ ತಾಲೂಕಿನ ಇತಿಹಾಸದಲ್ಲಿಯೇ ಇಡೀ ತಾಲೂಕು ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸುವ ಮೂಲಕ ಐತಿಹಾಸಿಕ ಹೋರಾಟ ನಡೆಸಲಾಯಿತು. ಇದಕ್ಕೆ ಸ್ವಾಮೀಜಿಗಳು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳು, ಯುವಕರು, ವಿದ್ಯಾರ್ಥಿಗಳು ಕೈ ಜೋಡಿಸಿದ ಫಲವಾಗಿ ಸರ್ಕಾರ ಎಚ್ಚೆತ್ತುಕೊಂಡು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವ ಮೂಲಕ ಹೈಕ ಸೌಲಭ್ಯ ಕಲ್ಪಿಸಿದೆ. ಸರ್ಕಾರ ಕೂಡಲೇ ಹೈಕ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ತಾಲೂಕಿನ ಜನರಿಗೆ ಸೌಲಭ್ಯ ಕಲ್ಪಿಸಲು ಮಠಾಧೀಶರು ಬೀದಿಗಿಳಿದು ಚಳವಳಿ ನಡೆಸಿದ್ದೇವೆ. ನಾನು ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಾಸ ಧರಣಿ ಸತ್ಯಾಗ್ರಹ ಕೂಡ ಮಾಡಿದ್ದೇನೆ. ಒಟ್ಟಾರೆ ಎಲ್ಲರ ಹೋರಾಟದ ಪ್ರತಿಫಲವಾಗಿ ತಾಲೂಕಿಗೆ ಹೈಕ ಸೌಲಭ್ಯ ಸಿಕ್ಕಿದೆ. ವಿದ್ಯಾರ್ಥಿ ಮತ್ತು ಯುವ ಜನರಿಗೆ ಶೈಕ್ಷಣಿಕವಾಗಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರೆಯುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೇ, ಪ್ರಮಾಣ ಪತ್ರ ವಿತರಿಸಿ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಸಂಘಟನೆ ಮುಖಂಡ ಅಲಗಿಲವಾಡ ಎ.ಎಂ. ವಿಶ್ವನಾಥ್‌ ಮಾತನಾಡಿ, ಹೈಕ ಸೌಲಭ್ಯಕ್ಕಾಗಿ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಲಾಗಿದೆ. ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಯುವಜನತೆಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

Advertisement

ಹಿರೇಹಡಗಲಿ ಅಭಿನವ ಹಾಲಸ್ವಾಮೀಜಿ, ಹಾವನೂರು ಚಂದ್ರಶೇಖರ ಸ್ವಾಮೀಜಿ, ವಿವಿಧ ಸಂಘಟನೆಗಳ ಮುಖಂಡರಾದ ಇದ್ಲಿ ರಾಮಪ್ಪ, ಎಚ್.ಎಂ. ಮಹೇಶ್ವರಸ್ವಾಮಿ, ಗುಡಿಹಳ್ಳಿ ಹಾಲೇಶ್‌, ಬಿ.ವೈ. ವೆಂಕಟೇಶನಾಯ್ಕ, ಎಂ.ಜೆ. ಸರಖವಾಸ್‌, ಈಶ್ವರನಾಯ್ಕ, ಸಂದೇರ ಪರಶುರಾಮ, ಡಿ.ರಾಮನಮಲಿ, ಡಾ| ಬಾಷಾ ಮುಜಾವರ್‌, ಶ್ರೀಕಾಂತ್‌, ಬಿ.ಪರಶುರಾಮ, ಗುಂಡಗತ್ತಿ ಕೊಟ್ರಪ್ಪ, ಲೀಲಾ ಲಿಂಗರಾಜ್‌, ಬಾಗಳಿ ಶಿವಕುಮಾರ್‌, ಕಬ್ಬಳ್ಳಿ ಬಸವರಾಜ್‌, ದ್ವಾರಕೀಶ್‌ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಂತ್ರಾಂಶದಲ್ಲಿ ಬಳ್ಳಾರಿ ಜಿಲ್ಲೆ ಹೆಸರು ಬದಲಾಗಿಲ್ಲ

ಕಂದಾಯ ಇಲಾಖೆಯ ತಂತ್ರಾಂಶದಲ್ಲಿ ದಾವಣಗೆರೆ ಜಿಲ್ಲೆ ಬದಲಾಗಿ ಬಳ್ಳಾರಿ ಜಿಲ್ಲೆ ಎಂದು ಇನ್ನೂ ಬದಲಾಗಿಲ್ಲ. ಹಾಗಾಗಿ ತಕ್ಷಣವೇ ಹೈದ್ರಾಬಾದ್‌ ಕರ್ನಾಟಕ ಪ್ರಮಾಣ ಪತ್ರ ವಿತರಿಸಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಬಳ್ಳಾರಿ ಜಿಲ್ಲೆ ಎಂದು ಹೆಸರು ಬದಲಾಯಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಕಳಿಸಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಪ್ರಮಾಣ ಪತ್ರ ಪಡೆಯುವವರು ಮುಂದಿನ ದಿನಗಳಲ್ಲಿ ಆಯಾ ನಾಡ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಕುರಿತು ನಾಮಫಲಕದಲ್ಲಿ ಪ್ರಕಟಿಸಲಾಗುವುದು. ಅಲ್ಲದೇ ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.
ಡಾ| ನಾಗವೇಣಿ, ತಹಶೀಲ್ದಾರ್‌

Udayavani is now on Telegram. Click here to join our channel and stay updated with the latest news.

Next