ನವದೆಹಲಿ: ಸುಮಾರು 5 ತಿಂಗಳ ನಂತರ ಸೆಪ್ಟೆಂಬರ್ ನಿಂದ ದೆಹಲಿ ಮೆಟ್ರೋ ಸೇವೆ ಆರಂಭವಾಗಲಿದ್ದು, ಮಾಸ್ಕ್ ಮತ್ತು ಸ್ಮಾರ್ಟ್ ಕಾರ್ಡ್ ಗಳು ಕಡ್ಡಾಯ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಹಳೆಯ ಟೋಕನ್ ಸೇವೆಯನ್ನು ನಿರ್ಬಂಧಿಸಲಾಗಿದ್ದು, ಪ್ರತಿ ಕೋಚ್ ನಲ್ಲೂ ಇಂತಿಷ್ಟೆ ಪ್ರಯಾಣಿಕರಿರಬೇಕೆಂಬ ನಿಯಮ ಜಾರಿಗೆ ತರಲಾಗಿದೆ.
ಬೋಗಿಗಳ ಒಳಗೆ ಹವಾನಿಯಂತ್ರಣ ವ್ಯವಸ್ಥೆಯನ್ನು(ಎಸಿ) ನಿಷೇಧಿಸಲಾಗಿದೆ. ಹಾಗೂ ಶುದ್ಧ ಗಾಳಿಯ ಪ್ರಸರಣವನ್ನು ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರ ಪ್ರವೇಶದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು ಕಡ್ಡಾಯವಾಗಿರುತ್ತದೆ ಎಂದು ಕೈಲಾಶ್ ಗಹ್ಲೋಟ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಸ್ಮಾರ್ಟ್ ಕಾರ್ಡ್ ಹೊಂದಿರಬೇಕು. ಮಾಸ್ಕ್ ಧರಿಸದಿದ್ದರೇ ಸ್ಥಳದಲ್ಲೇ ದಂಡ ವಿಧಿಸಲಾಗುವುದು. ಪ್ರತಿಯೊಬ್ಬರು ಕೂಡ ಸರ್ಕಾರ ನಿಯಮ ಪಾಲಿಸಬೇಕೆಂದು ಗೆಹ್ಲೋಟ್ ಮನವಿ ಮಾಡಿದ್ದಾರೆ. ‘
ದೆಹಲಿ ಮಟ್ರೋ ಸೇವೆ ಕೋವಿಡ್ ಕಾರಣದಿಂದ ಮಾರ್ಚ್ 22ರಿಂದ ಸ್ಥಗಿತಗೊಂಡಿದ್ದವು. ಇದೀಗ ಸುಮಾರು 5 ತಿಂಗಳ ನಂತರ ಸೆಪ್ಟೆಂಬರ್ 7ರಿಂದ ಇದರ ಸೇವೆ ಆರಂಭವಾಗಲಿದೆ. ಅದಾಗ್ಯೂ ಕಂಟೈನ್ ಮೆಂಟ್ ಝೋನ್ ಗಳಿಗೆ ಮೆಟ್ರೋ ಪ್ರಯಾಣಿಸವುದಿಲ್ಲ,
ಪ್ರಮುಖ ನಿಯಮಗಳು:
- ಮೆಟ್ರೋ ಪ್ರವೇಶದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಬಳಕೆ. ಸ್ಕ್ರೀನಿಂಗ್ ವೇಳೆ ಪ್ರಯಾಣಿಕರಿಗೆ ಹೆಚ್ಚಿನ ತಾಪಮಾನ(ಟೆಂಪ್ರೇಚರ್) ಕಂಡು ಬಂದವರಿಗೆ ಅಂಥವರಿಗೆ ಪ್ರಯಾಣ ನಿರ್ಬಂಧ.
- ಟೋಕನ್ ಸೇವೆ ಇರುವುದಿಲ್ಲ. ಸ್ಮಾರ್ಟ್ ಕಾರ್ಡ್ ಅಥವಾ ಇತರ ಡಿಜಿಟಲ್ ಮಾದರಿಯ ಪಾವತಿ
- ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಲು ಡಿಜಿಟಲ್ ಮಾಧ್ಯಮ ಬಳಕೆ.
- ಮಾಸ್ಕ್ ಧರಿಸುವುದು ಕಡ್ಡಾಯ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ.