Advertisement

ಮಸ್ಕಿ ಮತದಾರರಿಗೆ ನೇತಾರರ ಮಸ್ಕಾ!

05:38 PM Apr 06, 2018 | |

ರಾಯಚೂರು: ಲಿಂಗಸುಗೂರು, ಸಿಂಧನೂರು, ಮಾನ್ವಿ ತಾಲೂಕುಗಳ ಗ್ರಾಮಗಳನ್ನು ಒಳಗೊಂಡು 2008ರಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಉದಯಿಸಿದ ಕ್ಷೇತ್ರ ಮಸ್ಕಿ. ಕ್ಷೇತ್ರ ಪುನರ್‌ ವಿಂಗಡಣೆ ವೇಳೆ ಪ್ರತಾಪಗೌಡ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2013ರಲ್ಲಿ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಬಾರಿ ಶಾಸಕರಾದರು. ಇದೀಗ ಮತ್ತೂಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಣಿಯಾಗಿದ್ದು, ಹ್ಯಾಟ್ರಿಕ್‌ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

Advertisement

ಐತಿಹಾಸಿಕವಾಗಿ ಹೆಸರಾದ ಮಸ್ಕಿ, ದೊಡ್ಡ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ನಂದವಾಡಗಿ ಏತ ನೀರಾವರಿಗೆ
ಚಾಲನೆ, ನೂತನ ತಾಲೂಕು ಘೋಷಣೆ ಯಂಥ ಮಹತ್ವದ ಬೆಳವಣಿಗೆಗಳು ಶಾಸಕರ ಅವಧಿಯಲ್ಲೇ ಆಗಿರುವುದು ಅವರ ಹಾದಿ ಸುಗಮಗೊಳಿಸಿವೆ. ಆದರೆ, ಜನರಿಂದ ದೂರ ಎಂಬ ಆರೋಪ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿವೆ.

ಸಿಂಧನೂರು- ಮಸ್ಕಿ, ಸಿಂಧನೂರು- ತಾವರಗೇರಾ ಹೆದ್ದಾರಿ ರಸ್ತೆ ಅಭಿವೃದ್ಧಿ, ಬಳಗಾನೂರು, ತುರ್ವಿಹಾಳ ಗ್ರಾಪಂಗಳನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಸ್ಕಿ ಗ್ರಾಮ ಪಂಚಾಯತಿಯನ್ನು ಪುರಸಭೆ ಮಾಡಲಾಯಿತು. ಮಸ್ಕಿ ತಾಲೂಕು ಕೇಂದ್ರವಾಗಿಸುವಲ್ಲಿ ಶಾಸಕರ ಪಾತ್ರ ಗಣನೀಯ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿರುವುದು, ಆರು ಮೊರಾರ್ಜಿ ವಸತಿ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಶಾಸಕರು ಒತ್ತು ನೀಡಿದ್ದಾರೆ.

ಆದರೆ, ಶಾಸಕರು ಕ್ಷೇತ್ರದ ಜನರೊಂದಿಗೆ ಬೆರೆಯದೆ ಇರುವ ಆರೋಪ ಇಲ್ಲಿನ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ
ಕೇಳಿ ಬರುತ್ತಿದೆ. ಕೇವಲ ಹಿಂಬಾಲಕರಿಗಷ್ಟೇ ಪ್ರಾಧಾನ್ಯತೆ ನೀಡುತ್ತಿರುವ ಆರೋಪವಿದೆ. ಅಲ್ಲದೇ, ಮೂಲ ಕಾಂಗ್ರೆಸ್‌
ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರಕ್ಕೆ ಅನುದಾನ ತಂದರೂ ಗುಣಮಟ್ಟದ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎನ್ನುವ ಆರೋಪಗಳಿವೆ. ಅಭಿವೃದ್ಧಿ ಮಾಡಿದರೂ ಈ ಬಾರಿ ಶಾಸಕರ ಗೆಲುವು ಸುಲಭವಾಗಿಲ್ಲ. ಬಿಜೆಪಿ ಟಿಕೆಟ್‌ಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಹಾದೇವಪ್ಪಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ತುರ್ವಿಹಾಳ ನಡುವೆ ಸ್ಪರ್ಧೆ ಇದೆ. ಶೇಖರಪ್ಪ ತಳವಾರ ಕೂಡ ಅಕಾಂಕ್ಷಿಯಾಗಿದ್ದಾರೆ ಇನ್ನು ಜೆಡಿಎಸ್‌ನಿಂದ ರಾಜಾ ಸೋಮನಾಥ ನಾಯಕ ಸ್ಪರ್ಧಿಸುತ್ತಿದ್ದಾರೆ.

ಹಿಂದಿನ ಎರಡು ಚುನಾವಣೆ ಪರಿಸ್ಥಿತಿಗೂ ಈಗಿನ ಚುನಾವಣೆಗೂ ಪರಿಸ್ಥಿತಿ ಭಿನ್ನವಾಗಿದೆ. ಹಿಂದೆ ಶಾಸಕ ಪ್ರತಾಪಗೌಡ ಪಾಟೀಲ ಅನಾಯಾಸವಾಗಿ ಗೆಲುವು ದಾಖಲಿಸಿದ್ದರು. ಆದರೆ, ಈ ಬಾರಿ ಆಡಳಿತ ವಿರೋ ಧಿ ಅಲೆ ಎದುರಿಸಬೇಕಿದೆ. ಅಲ್ಲದೇ ಬಿಜೆಪಿಯಿಂದ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬುದರ ಮೇಲೂ ಪೈಪೋಟಿ ತೀವ್ರಗೊಳ್ಳಲಿದೆ. ಜೆಡಿಎಸ್‌ನ್ನು ಉಪೇಕ್ಷೆ ಮಾಡಿದವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕುಮಾರ ಪರ್ವ ಯಾತ್ರೆ ಅದ್ಧೂರಿಯಾಗಿ ನಡೆಸುವ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Advertisement

ಶಾಸಕ ಪ್ರತಾಪಗೌಡರು ಮುಖಂಡರೊಂದಿಗೆ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಸಂದೇಶ ಸಾರುವ
“ಜನ ಮನಕೆ ಕಾಂಗ್ರೆಸ್‌’ ಕಾರ್ಯಕ್ರಮ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳೂ ಟಿಕೆಟ್‌ ಖಚಿತವಿಲ್ಲದಿದ್ದರೂ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ಬಾರಿ ಚುನಾವಣೆ ಕಣ ರಂಗೇರುತ್ತಿದೆ. ಶಾಸಕರ ಹ್ಯಾಟ್ರಿಕ್‌ ಗೆಲುವಿಗೆ ಬ್ರೇಕ್‌ ಹಾಕಲು ಕಸರತ್ತು ನಡೆದಿ¨

ಕ್ಷೇತ್ರದ ದೊಡ್ಡ ಸಮಸ್ಯೆ
ಈ ಭಾಗದ ರೈತರು ಅನೇಕ ವರ್ಷಗಳಿಂದ ನಾರಾಯಣಪುರ ಬಲದಂಡೆ 5ಎ ನಾಲಾ ಯೋಜನೆ ಅನುಷ್ಠಾನ ಜಾರಿಗಾಗಿ ಹೋರಾಟ ನಡೆಸಿದ್ದು, ಅದು ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಶಾಸಕರು ಈ ಬಗ್ಗೆ ರೈತ ಮುಖಂಡರೊಂದಿಗೆ ನಿಯೋಗ ಕೊಂಡೊಯ್ದು ನೀರಾವರಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸದನದಲ್ಲೂ ಈ ಕುರಿತು ಪ್ರಶ್ನಿಸಿದ್ದರು. ಆದರೂ ಈ ಯೋಜನೆ ಜಾರಿಗೊಂಡಿಲ್ಲ. ಈ ಯೋಜನೆ ಜಾರಿಯಾದಲ್ಲಿ ಕ್ಷೇತ್ರದ ಬಹುತೇಕ ಕ್ಷೇತ್ರ ನೀರಾವರಿ ಪ್ರದೇಶಕ್ಕೆ ಒಳಪಡಲಿದೆ.

ಕ್ಷೇತ್ರದ ಬೆಸ್ಟ್‌ ಏನು?
ಈ ಭಾಗದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ರೈತರ ಬಹುದಿನಗಳ ಬೇಡಿಕೆ ಈಡೇರಿತು. ಕ್ಷೇತ್ರದ ಸಾಕಷ್ಟು ಭೂಮಿ ಈ ಯೋಜನೆಯಿಂದ ನೀರಾವರಿಗೆ ಒಳಪಟ್ಟಿತು. ಮಸ್ಕಿ ಮೂರು ತಾಲೂಕುಗಳ ಗ್ರಾಮಗಳನ್ನು ಒಳಗೊಂಡಿದ್ದರಿಂದ ನಂದವಾಡಗಿ ಏತ ನೀರಾವರಿ ಯೋಜನೆ ಸಿಂಧನೂರು, ಮಾನ್ವಿ ಮತ್ತು ಲಿಂಗಸುಗೂರು ತಾಲೂಕಿಗೂ ವ್ಯಾಪಿಸಿತ್ತು. ಸುಮಾರು 1530 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ 2017ರ ಜುಲೈನಲ್ಲಿ ಚಾಲನೆ ನೀಡಿದ್ದಾರೆ. ಸುಮಾರು 89205 ಎಕರೆ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿದೆ.

ಶಾಸಕರು ಏನಂತಾರೆ?
ಎರಡು ಬಾರಿ ಶಾಸಕನಾಗಿದ್ದು, ಈ ಬಾರಿ ನಿರೀಕ್ಷೆ ಮೀರಿ ಕೆಲಸ, ಕಾರ್ಯಗಳು ನಡೆದಿವೆ. 1200 ಕೋಟಿಗೂ ಅ ಧಿಕ
ಅನುದಾನ ತಂದಿದ್ದೇನೆ. ನಂದವಾಡಗಿ ಏತ ನೀರಾವರಿ ಚಾಲನೆ, ತಾಲೂಕು ರಚನೆ ಇದೇ ಅವಧಿಯಲ್ಲಾಗಿದೆ. ಬಹುತೇಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಶಿಕ್ಷಣಕ್ಕೂ ಸಾಕಷ್ಟು ಆದ್ಯತೆ ನೀಡಲಾಗಿದೆ. ನಾನು ಜನರಿಂದ ದೂರ ಉಳಿದಿದ್ದೇನೆ ಎಂಬುದು ಸುಳ್ಳು. ಬಹುತೇಕ ಸಮಯ ಜನರೊಂದಿಗೆ ಕಳೆಯುತ್ತೇನೆ. 
 ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ ಶಾಸಕ

ಕ್ಷೇತ್ರ ವಿಶೇಷತೆ
ಮಸ್ಕಿಯಲ್ಲಿರುವ ಅಶೋಕನ ಶಿಲಾಶಾಸನ ಐತಿಹಾಸಿಕ ಕುರುಹಾಗಿದ್ದು, ಸಾಕಷ್ಟು ಮಹತ್ವ ಪಡೆದಿದೆ. ಬಿಂದುಸಾರನ ಅವಧಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ. ಬ್ರಾಹ್ಮಿಲಿಪಿಯಲ್ಲಿ ಕೆತ್ತನೆ ಮಾಡಲಾಗಿದ್ದು, ಅಶೋಕನ
ಸಾಮ್ರಾಜ್ಯ ವಿಸ್ತಾರದ ಬಗ್ಗೆ ಉಲ್ಲೇಖೀಸಲಾಗಿದೆ. ಶಿಲಾಶಾಸನಕ್ಕೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಈ ಭಾಗಕ್ಕೆ ಬಂದ ಪ್ರವಾಸಿಗರು ತಪ್ಪದೇ ಆ ಶಾಸನವನ್ನೊಮ್ಮೆ ನೋಡಿ ಹೋಗುವುದು ಸರ್ವೇ ಸಾಮಾನ್ಯ

ಶಾಸಕರು ಮೃದು ಧೋರಣೆ ಅನುಸರಿಸುವುದರಿಂದ ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ. ಹೀಗಾಗಿ ನಿರೀಕ್ಷಿತ
ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. 5ಎ ನಾಲಾ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರದ
ಮಟ್ಟದಲ್ಲಿ ಪ್ರಭಾವ ಬೀರುವಲ್ಲಿ ವಿಫಲ. 
 ಬಸವರಾಜಪ್ಪಗೌಡ ಹರ್ವಾಪುರ, ಹೋರಾಟಗಾರರು

ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ಧಿ ಕೆಲಸಗಳಾಗಿದ್ದರೂ ಇನ್ನೂ ಮೂಲ ಸೌಕರ್ಯಗಳ ಕೊರತೆಯಿದೆ. ತಾಲೂಕು ಕೇಂದ್ರ ಘೋಷಣೆಯಾಗಿದ್ದು ತಾಲೂಕು ಕೇಂದ್ರಕ್ಕೆ ಬೇಕಾದ ಸೌಲಭ್ಯಗಳಿಲ್ಲ. ವಾಲ್ಮೀಕಿ ಭವನದಲ್ಲಿ ತಾಲೂಕು ಪಂಚಾಯಿತಿ ಕಚೇರಿ ನಡೆಸುತ್ತಿರುವುದು ಇದಕ್ಕೊಂದು ನಿದರ್ಶನ.
ಅಬ್ದುಲ್‌ ಗನಿ, ಪ್ರಗತಿಪರ ಚಿಂತಕರು

Advertisement

Udayavani is now on Telegram. Click here to join our channel and stay updated with the latest news.

Next