Advertisement

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

06:34 PM Jul 04, 2024 | Team Udayavani |

ಮಸ್ಕಿ: ಸಮೀಪದ ಮಾರಲದಿನ್ನಿ, ಅಡವಿಭಾವಿ, ಅಂಕುಶದೊಡ್ಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಚಾಲಕರು, ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ.

Advertisement

ಹದಗೆಟ್ಟ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ರಸ್ತೆಯುದ್ದಕ್ಕೂ ಗುಂಡಿಗಳದ್ದೇ ದರ್ಬಾರು ಇದ್ದು, ಮಾರಲದಿನ್ನಿ ಗ್ರಾಪಂ ವ್ಯಾಪ್ತಿಯ ಮಾರಲದಿನ್ನಿ ತಾಂಡಾ, ಮಾರಲದಿನ್ನಿ, ಉಸ್ಕಿಹಾಳ, ಅಡವಿಭಾವಿ ಗ್ರಾಪಂ ವ್ಯಾಪ್ತಿಯ ಬೆನಕನಾಳ, ಬೆಲ್ಲದಮರಡಿ, ಅಡವಿಭಾವಿ ತಾಂಡಾ, ತೀರ್ಥಭಾವಿ ಹಾಗೂ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಕಾಟಗಲ್ಲ, ಮುದಬಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ.

ಇವೆಲ್ಲ ಗ್ರಾಮೀಣ ರಸ್ತೆಗಳಾದರೂ ವಾಹನಗಳ ಸಂಚಾರ ಸಾಕಷ್ಟು ಇದೆ. ಆಟೋಗಳು, ಖಾಸಗಿ ವಾಹನಗಳು, ವಿವಿಧ ಶಾಲಾ ವಾಹನಗಳು, ಖಾಸಗಿ ಬಸ್‌ಗಳು, ಸರ್ಕಾರಿ ಬಸ್ಸುಗಳು ಈ ರಸ್ತೆಯುದ್ದಕ್ಕೂ ಸಂಚರಿಸುತ್ತವೆ. ಈ ಭಾಗದ ರಸ್ತೆಗಳು ಒಂದು ವರ್ಷದ ಹಿಂದೆ ಚೆನ್ನಾಗಿದ್ದವು. ಮಸ್ಕಿ ನಾಲಾ ಯೋಜನೆ ಕಾಲುವೆ ಆಧುನೀಕರಣ ಕಾಮಗಾರಿ ಮಾಡುವಾಗ ಲಾರಿ, ಟಿಪ್ಪರ್‌ಗಳಂತಂಹ ದೊಡ್ಡ ದೊಡ್ಡ ವಾಹನಗಳು ಮರಳು, ಸಿಮೆಂಟ್, ಕಬ್ಬಿಣದ ಸರಳು ಹಾಗೂ ಇನ್ನಿತರ ವಸ್ತುಗಳನ್ನು ತುಂಬಿಕೊಂಡು ಈ ರಸ್ತೆ ಮುಖೇನ ಸಂಚರಿಸಿರುವುದರಿಂದ ರಸ್ತೆಗಳ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು, ಹಾಗೂ ಬೆಲ್ಲದಮರಡಿ, ಬೆನಕನಾಳ ಗುಡ್ಡದ ಭಾಗಗಳಲ್ಲಿ ಅಕ್ರಮವಾಗಿ ಮರಂ ಸಾಗಾಣಿಕೆ ಮಾಡುವ ಟಿಪ್ಪರ್, ಟ್ರ್ಯಾಕ್ಟರ್ ವೇಗವಾಗಿ ಓಡಾಡುತ್ತಿದ್ದು, ಇದರಿಂದ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿವೆ.

ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಬೈಕ್ ಸವಾರರು ವೇಗವಾಗಿ ಚಲಿಸಿ ಕೆಲವೊಮ್ಮೆ ಗುಂಡಿಗಳಿಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಜನಪ್ರತಿನಿಧಿಗಳು ಈ ಭಾಗದ ರಸ್ತೆಗಳ ಮೂಲಕ ಓಡಾಡಿ ಜನರ ಸಮಸ್ಯೆ ಅರಿತುಕೊಳ್ಳಬೇಕು ಹಾಗೂ ಹದಗೆಟ್ಟಿರುವ ಗ್ರಾಮೀಣ ಭಾಗದ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಮೂಲಕ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಶಾಸಕರಿಗೆ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು ಸುಗಮವಾಗಿ ಓಡಾಡಲು ಕಿರಿಕಿರಿ ಉಂಟಾಗಿದೆ. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಬೈಕ್ ಮೇಲೆ ಬರುವಾಗ ಗುಂಡಿ ಬಿದ್ದಿದ್ದು, ಕೈ ಕಾಲುಗಳಿಗೆ ಗಾಯಗಳಾಗಿವೆ. ಶಾಸಕರು ಇತ್ತ ಗಮನ ಹರಿಸಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next