ಮಸ್ಕಿ: ಉಪಚುನಾವಣೆ ಕಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಿದೆ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಸಂಖ್ಯೆಗಿಂತ ಹೊರಗಿನವರ ಉಸ್ತುವಾರಿ, ಉಸಾಬರಿಯೇ ಹೆಚ್ಚಾಗಿದ್ದು, ಇದು ಹಲವು ರೀತಿ ಕಿರಿಕಿರಿಗೆ ದಾರಿಯಾಗಿದೆ.
ಬಿಜೆಪಿಯಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಗಿನ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಡೆಯವರು ಎಂದು ಹೇಳಿಕೊಂಡು ಮಸ್ಕಿ ಕ್ಷೇತ್ರಾದ್ಯಂತ ಹಲವು ಗುಂಪುಗಳಲ್ಲಿ ಪ್ರಚಾರ ನಡೆಸುತ್ತಿರುವುದೇ ಈಗ ಎಲ್ಲೆಡೆ ವಿಶೇಷ ಚರ್ಚೆಗೆ ಕಾರಣವಾಗಿದೆ. ಈ ಗುಂಪುಗಳು ಮಸ್ಕಿ ಮತಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಬಹಿರಂಗ ಹಣ ಹಂಚಿಕೆ ಮಾಡುತ್ತಿರುವುದು ಕಾಂಗ್ರೆಸ್‌ನವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡರು ಇದನ್ನು ಖಂಡಿಸಿ ಬೀದಿಗೆ ಇಳಿದಿದ್ದಾರೆ. ಬಿಜೆಪಿ ಮುಖಂಡರು ನಾವು ಯಾವುದೇ ರೀತಿ ಹಣ ಹಂಚಿಕೆ ಮಾಡಿಲ್ಲ ಎನ್ನುವ ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದು, ಈ ಘಟನೆಗಳು ಎರಡು ಪಕ್ಷದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ.
ಸೂಕ್ಷ್ಮ ಸ್ಥಿತಿ: ಮಸ್ಕಿ ಮತಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಸ್ಥಳೀಯರ ಬಲಕ್ಕಿಂತ ಹೊರಗಿನವರ ಬಲವೇ ದೊಡ್ಡ ಆಸರೆಯಾಗಿದೆ. ವಿಶೇಷವಾಗಿ ಬಿಜೆಪಿಯಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ವಿಜಯೇಂದ್ರ ತಂಡದವರೆಂದು ಹೇಳಿಕೊಂಡು ಸುಮಾರು 900ಕ್ಕೂ ಹೆಚ್ಚು ಜನ ಮಸ್ಕಿ ಚುನಾವಣೆಗಾಗಿಯೇ ಆಗಮಿಸಿದ್ದಾರೆ. ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು, ಬಳ್ಳಾರಿ, ಮಂಡ್ಯ ಸೇರಿ ಹಲವು ಜಿಲ್ಲೆಗಳಿಂದ ಯುವಕ-ಯುವತಿಯರ ತಂಡ ಆಗಮಿಸಿದೆ. ಮಸ್ಕಿ, ಮುದಗಲ್, ಸಿಂಧನೂರು, ತಾವರಗೇರಾ, ಲಿಂಗಸುಗೂರು, ಕಾರಟಗಿ, ಗಂಗಾವತಿವರೆಗೂ ಇವರು ವಾಸ್ತವ್ಯ ಹೂಡಿದ್ದಾರೆ. ನಿತ್ಯ ಕಾರು ಹತ್ತಿ ಪ್ರತಿ ಹಳ್ಳಿಗಳನ್ನು ಸುತ್ತಿ ಪ್ರಚಾರ ನಡೆಸುವುದು, ಬಿಜೆಪಿ ಪರ ಘೋಷಣೆ ಕೂಗಿ ಸರಕಾರದ ಸಾಧನೆಗಳನ್ನು ಜನರ ಮುಂದಿಡುವುದು ಕ್ಷೇತ್ರದೆಲ್ಲೆಡೆ ಕಂಡು ಬರುತ್ತಿವೆ.
ಈ ರೀತಿಯ ವಿಡಿಯೋಗಳು ಕೂಡ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಸದ್ದು ಮಾಡುತ್ತಿವೆ. ಈ ಘಟನೆಗಳೇ ಈಗ ಮಸ್ಕಿ ಅಖಾಡದ ಚಿತ್ರಣವನ್ನು ಏರು-ಪೇರು ಮಾಡಲಾರಂಭಿಸಿವೆ. ಸ್ಟಾರ್ ಕ್ಯಾಂಪೇನರ್‌ಗಳ ಅಬ್ಬರಕ್ಕಿಂತ ಹಣ ಹಂಚಿಕೆ ಮಾಡಿದ ವಿಡಿಯೋಗಳು, ಹಣ ಹಂಚಿಕೆ ಮಾಡಿದವರಿಗೆ ಹೊಡೆಯುತ್ತಿರುವುದು, ಅವರನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕುವುದು ಸೇರಿ ಹಲವು ರೀತಿಯ ಘಟನೆಗಳು ಹೆಚ್ಚು ಸುದ್ದಿಯಾಗುತ್ತಿವೆ.