ಮಸ್ಕಿ: ನಾಗಲಾಪುರ ಹಳ್ಳದ ನೀರನ್ನು ಕನಕನಾಲೆಗೆ ತಿರುಗಿಸುವ ಯೋಜನೆ ಕೈಬಿಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಮಸ್ಕಿ ನಾಲಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿಯಿಂದ ದಲಿತ ಸಂಘರ್ಷ ಸಮಿತಿ ಸದಸ್ಯರು, ಮಸ್ಕಿ ನಾಲಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನಾ ರ್ಯಾಲಿ ಆರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಹನುಮಂತ ವೆಂಕಟಾಪುರ ಮಾತನಾಡಿ, ಮಸ್ಕಿ ಜಲಾಶಯ ನೀರಿನಿಂದ ಈ ಭಾಗದ ನೂರಾರು ರೈತರ ಬದುಕು ಹಸನಾಗಿದೆ. ಈ ಜಲಾಶಯದ ನೀರು ಅವಲಂಬಿಸಿ ರೈತರು ವಿವಿಧ ಬೆಳೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಏಕಾಏಕಿ ಈ ಜಲಾಶಯಕ್ಕೆ ನೀರು ತಂದು ಕೊಡುವ ನಾಗಲಾಪುರ ಹಳ್ಳದ ನೀರನ್ನು ಕನಕನಾಲೆ ಕಡೆಗೆ ತಿರುಗಿಸಿದರೆ ಮಸ್ಕಿ ಜಲಾಶಯ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಈ ಭಾಗದ ರೈತರಿಗೆ ತೊಂದರೆ ಆಗಲಿದೆ. ಈ ಕೂಡಲೇ ಫ್ಲಡ್ ಫ್ಲೋ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದರು.
ಮಲ್ಲಪ್ಪ ಅಂಕುಶದೊಡ್ಡಿ ಮಾತನಾಡಿ, ಕೃಷ್ಣ ನದಿಯಿಂದ ಕಸಬಾಲಿಂಗಸುಗೂರು ಹತ್ತಿರ ಹರಿಯುತ್ತಿರುವ ಕಾಲುವೆ ಮೂಲಕ ಮಸ್ಕಿ ಜಲಾಶಯಕ್ಕೆ ಶಾಶ್ವತ ಲಿಂಕ್ ಕಾಲುವೆ ನಿರ್ಮಿಸಬೇಕು. ಮಸ್ಕಿ ಜಲಾಶಯ ಅಭಿವೃದ್ಧಿಗೆ ಹಾಗೂ ಕೆನಾಲ್ ಆಧುನೀಕರಣಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಮುಖಂಡ ಶೇಖರಗೌಡ ಪಾಟೀಲ, ಶರಣಪ್ಪ ಕಾಟಗಲ್ಲ, ಮೌನೇಶ ನಾಯಕ, ವೆಂಕೋಬ ದಿನ್ನೆಭಾವಿ, ಶಿವಪುತ್ರಪ್ಪ ಮಾರಲದಿನ್ನಿ, ದಲಿತ ಸಂಘರ್ಷ ಸಮಿತಿ ಮುಖಂಡ ನಾಗಪ್ಪ ತತ್ತಿ, ಮಹಾದೇವಪ್ಪ ಪರಾಂಪುರ, ಮೌನೇಶ ಸುಲ್ತಾನಪುರ, ನಾಗರಾಜ ಕುಣಿಕೆಲ್ಲೂರ, ಸಂಪತ್‌ರಾಜ ನಂಜಲದಿನ್ನಿ, ನಾಗರಾಜ ಗುಡಗಲದಿನ್ನಿ, ತುರುಮುಂಡೆಪ್ಪ ಕಟ್ಟಿಮನಿ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.