Advertisement

ಮಸ್ಕಿಯಲ್ಲಿ ಜೆಡಿಎಸ್‌ ಬಲ ಯಾರಿಗೆ? ­

09:24 PM Mar 31, 2021 | Team Udayavani |

ರಾಯಚೂರು: ಮಸ್ಕಿ ಉಪಚುನಾವಣೆ ಕಣದಲ್ಲಿ ನಿರೀಕ್ಷೆಯಂತೆ ಕೈ-ಕಮಲದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ, ಸೂಕ್ತ ಅಭ್ಯರ್ಥಿ ಕೊರತೆ ಎದುರಿಸಿದ ಜೆಡಿಎಸ್‌ ತಟಸ್ಥವಾಗಿದ್ದು, ಯಾವ ಪಕ್ಷಕ್ಕೆ ಬೆಂಬಲ ನೀಡಲಿದೆ ಎನ್ನುವ ಕೌತುಕ ಮೂಡಿದೆ.

Advertisement

ಆರಂಭದಲ್ಲಿ ಪಕ್ಷದ ವರಿಷ್ಠರು ಭಿನ್ನ ಹೇಳಿಕೆ ನೀಡುವ ಮೂಲಕ ಸಾಕಷ್ಟು ಗೊಂದಲ ಮೂಡಿಸಿದ್ದರು. ಜಿಲ್ಲೆಗೆ ಭೇಟಿ ನೀಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ಉಪಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಅದಾದ ಕೆಲವೇ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಾಲ ಮಾಡಿಯಾದರೂ ಉಪಚುನಾವಣೆಗೆ ಸ್ಪ ರ್ಧಿಸುವುದಾಗಿ ತಿಳಿಸಿದ್ದರು. ಇದರಿಂದ ಸ್ಥಳೀಯ ಮಟ್ಟದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿತಾದರೂ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮೂಡಿತು.

ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಸೂಕ್ತ ಅಭ್ಯರ್ಥಿ ಸಿಗದೆ ಕಾರ್ಯಕರ್ತರ ಉತ್ಸಾಹ ಮಂಜಿನಂತೆ ಕರಗಿ ಹೋಗಿದೆ. ಕಾರಣ ಉಪಚುನಾವಣೆ ಕಣದಿಂದ ಜೆಡಿಎಸ್‌ ಹಿಂದಡಿ ಇಟ್ಟಿದೆ. ಆದರೆ, ಯಾರಿಗೆ ಬೆಂಬಲ ನೀಡಲಿದೆ ಎಂಬ ಪ್ರಶ್ನೆ ಮಾತ್ರ ಮುಂದುವರಿದಿದೆ. ಮಸ್ಕಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲ ಹೊಂದಿವೆ ಎನ್ನುವುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಾವುದಾದರೂ ಪಕ್ಷಕ್ಕೆ ತುಸು ಹಿನ್ನಡೆಯಾಗಿದ್ದರೆ ಜೆಡಿಎಸ್‌ ಬೆಂಬಲ ಕೈ ಹಿಡಿಯಬಹುದು ಎನ್ನುವ ಲೆಕ್ಕಾಚಾರವಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ಉತ್ತಮ ಮತಗಳನ್ನು ಪಡೆದಿದ್ದರು. ಆ ಮತಗಳೆಲ್ಲ ಪಕ್ಷದ ಸಿದ್ಧಾಂತದಡಿಯೇ ಬಂದಿದ್ದಾದರೆ ಜೆಡಿಎಸ್‌ ಈ ಬಾರಿಯೂ ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next