ಮಸ್ಕಿ: ಮಸ್ಕಿ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲೂ ಉಪಚುನಾವಣೆ ದಿನಾಂಕ ಹೊರಬೀಳುವ ಸಾಧ್ಯತೆ ಇರುವುದರಿಂದ ಈಗಾಗಲೇ ರಾಜಕೀಯ ಪಕ್ಷಗಳು ಖಾಡಕ್ಕೆ ಇಳಿದಿವೆ. ಪಟ್ಟಣ, ಹಳ್ಳಿ ಪ್ರದೇಶಗಳಲ್ಲಿ ಪ್ರಚಾರದ ಅಬ್ಬರ ಶುರು ಮಾಡಿಕೊಂಡಿದ್ದು, ಪರಸ್ಪರ ಮಾತಿನ ಸಮರವೂ ನಡೆಯುತ್ತಿದೆ. ಈಗಾಗಲೇ ಉಪಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದ ನಾಯಕರು ಹಲವು ದಿನಗಳಿಂದ ಮಸ್ಕಿ ಕ್ಷೇತ್ರಕ್ಕೆ ಬೈ ಎಲೆಕ್ಷನ್ ಘೋಷಣೆಯಾಗುವುದನ್ನೇ ಕಾದು ನೋಡುತ್ತಿದ್ದಾರೆ. ಆದರೆ ಇತ್ತೀಚೆಗೆ ಪಂಚ ರಾಜ್ಯಗಳ ಚುನಾವಣೆ ಘೋಷಣೆ ಬಳಿಕ ರಾಜಕೀಯ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿವೆ. ಕೇಂದ್ರ ಚುನಾವಣೆ ಆಯೋಗವೂ ಉಪಚುನಾವಣೆಗಳನ್ನು ಶೀಘ್ರದಲ್ಲಿಯೇ ಘೋಷಣೆ ಮಾಲಾಗುವುದು ಎನ್ನುವ ಸುಳಿವು ನೀಡಿದಾಗಿನಿಂದ ಸ್ಥಳೀಯ ರಾಜಕೀಯ ನಾಯಕರು “ಚುನಾವಣೆಗೆ ನಾವು ರೆಡಿ’ ಎನ್ನುವ ರೀತಿ ಹಳ್ಳಿ ಸಂಚಾರ ಶುರು ಮಾಡಿದ್ದಾರೆ.
ಏನಿದೆ ಪರಿಸ್ಥಿತಿ?: ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಅಷ್ಟಾಗಿ ಪ್ರಬಲವಾಗಿಲ್ಲದಿದ್ದರಿಂದ ಈ ಪಕ್ಷಕ್ಕೆ ಅಭ್ಯರ್ಥಿ ಯಾರು? ಎನ್ನುವುದು ಇನ್ನು ಅಂತಿಮವಾಗಿಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಚುನಾವಣೆಗೆ ತಯಾರಿಯಲ್ಲಿವೆ. ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹುರಿಯಾಳಾಗಿದ್ದಾರೆ. ಕಾಂಗ್ರೆಸ್‌ನಿಂದ ಆರ್. ಬಸನಗೌಡ ತುರುವಿಹಾಳ ಅಭ್ಯರ್ಥಿಯಾಗಿದ್ದಾರೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಇಬ್ಬರ ನಡುವೆ ಫೈಟ್ ಬಿರುಸಾಗಿದೆ.
ನಾಯಕರ ಎಂಟ್ರಿ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಕೇವಲ ಅಭ್ಯರ್ಥಿಗಳೆಂದು ಬಿಂಬಿತವಾದವರು ಅವರ ಹಿಂಬಾಲಕರು ಮಾತ್ರವಲ್ಲದೇ ಎರಡು ಪಕ್ಷದ ಮುಂಚೂಣಿ ನಾಯಕರು ಈಗ ಅಭ್ಯರ್ಥಿಗಳ ಪರವಾಗಿ ಶಕ್ತಿ ಪ್ರದರ್ಶನಕ್ಕೆ ಎಂಟ್ರಿಯಾಗಿದ್ದಾರೆ. ಮೆದಕಿನಾಳ, ತೋರಣದಿನ್ನಿ ಸೇರಿ ಹಲವು ಕಡೆ ಪ್ರತ್ಯೇಕ ಬೃಹತ್ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಈಗಾಗಲೇ ಶಕ್ತಿ ಪ್ರದರ್ಶನ ನಡೆಸಿದೆ. ಉಳಿದ ಹೋಬಳಿವಾರು ಕಾರ್ಯಕ್ರಮ ಆಯೋಜಿಸಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿ, ಆರ್.ಬಸನಗೌಡ ಅವರ ಬೆಂಬಲಿಗರ ತಂಡ ಎರಡು ರೀತಿಯಲ್ಲೂ ಪ್ರಚಾರದ ದಾಳ ಉರುಳಿಸುತ್ತಿದೆ. ಆದರೆ ಇತ್ತ ಬಿಜೆಪಿ ಮಾತ್ರ ಇದಕ್ಕೆ ಪ್ರತಿಯಾಗಿ ಮತ್ತೂಂದು ರೀತಿ ರಾಜಕೀಯ ಅಸ್ತ್ರ ಪ್ರಯೋಗ ಮಾಡುತ್ತಿದೆ. ಹಳ್ಳಿವಾರು ಪ್ರಚಾರ ಮಾತ್ರವಲ್ಲದೇ ಉಪಚುನಾವಣೆ ಹೊತ್ತಲ್ಲೇ ವಿವಿಧ ಇಲಾಖೆಯಿಂದ ಅಗತ್ಯ ಅನುದಾನ ತಂದು “ಭೂಮಿ ಪೂಜೆ’ ರಾಜಕೀಯ ಆರಂಭಿಸಿದೆ. ಜಾತಿವಾರು ಭವನಗಳನ್ನು, ಸಿಸಿ ರಸ್ತೆ, ಡಾಂಬರ್ ರಸ್ತೆ, ದೇವಸ್ಥಾನ, ಶಾಲೆ ಕಟ್ಟಡ ಸೇರಿ ಹಲವು ರೀತಿಯ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಜನರನ್ನು ಒಲೈಸುವ ಕಸರತ್ತು ನಡೆಸಿದೆ.
ಮಾತಿನ ಸಮರ: ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಶುರುವಾದಂತೆಲ್ಲ ಕೇವಲ ಪ್ರಚಾರದ ಅಬ್ಬರ ಮಾತ್ರವಲ್ಲ ಮಾತಿನ ಸಮರವೂ ರಾಜಕೀಯ ಅಖಾಡದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪಗೌಡ ಪಾಟೀಲ್ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಏಕವಚನದಲ್ಲಿಯೇ ಮುಗಿಬೀಳುತ್ತಿರುವ ಸನ್ನಿವೇಶಗಳು ಹಲವು ವೇದಿಕೆಯಲ್ಲಿ ನಡೆಯುತ್ತಿದೆ. ಈ ಮೂಲಕ ಈ ಬಾರಿ ಉಪಚುನಾವಣೆ ಕದನ ರೋಚಕ ಎನ್ನುವುದನ್ನು ಈಗಿನಿಂದಲೇ ಸಾರಲಾಗುತ್ತಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ