ಮಸ್ಕಿ: ಮಸ್ಕಿ ಕ್ಷೇತ್ರದಲ್ಲಿರುವ ಬಿಜೆಪಿ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಭಿನ್ನಮತಗಳೆಲ್ಲ ಬದಿಗೊತ್ತಿ ಎಲ್ಲರೂ ಒಂದಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು! ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಉಮೇದುವಾರಿಕೆ ಸಲ್ಲಿಕೆಗಾಗಿ ಸೋಮವಾರ ಮಸ್ಕಿಗೆ ಆಗಮಿಸುವ ಮಾರ್ಗ ಮಧ್ಯ ಮುದಗಲ್‌ನಲ್ಲಿ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ನಿವಾಸದಲ್ಲಿ ಭೋಜನದ ಬಳಿಕ ನಡೆದ ಕಾಂಗ್ರೆಸ್ ವರಿಷ್ಠರ ಗೌಪ್ಯ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳಿವು.
ಮಾಜಿ ಮುಖ್ಯಮಂತ್ರಿ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ, ಕೆಪಿಸಿಸಿಯ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಉಸ್ತುವಾರಿಗಳು ಸೇರಿ ಸ್ಥಳೀಯ ಹಾಲಿ-ಮಾಜಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಡಿ.ಎಸ್.ಹೂಲಗೇರಿ ನಿವಾಸದ ಪ್ರತ್ಯೇಕ ಕೋಣೆಯೊಂದರಲ್ಲಿ ಸಭೆ ಸೇರಿದ ಕೈ ವರಿಷ್ಠರು ಆರಂಭದಲ್ಲಿ ಮಸ್ಕಿ ಕ್ಷೇತ್ರದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಅವಲೋಕಿಸಿದರು.
ಜನರ ಭಾವನೆ, ಕ್ಷೇತ್ರದಲ್ಲಿನ ಕಾಂಗ್ರೆಸ್, ಬಿಜೆಪಿ ಬಗೆಗಿನ ಅಭಿಪ್ರಾಯಗಳು, ಅಭ್ಯರ್ಥಿಗಳ ಪರ ಮತ್ತು ವಿರೋಧದ ಅಂಶಗಳನ್ನು ಸ್ಥಳೀಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಯಾವುದೇ ಕಾರಣಕ್ಕೂ ಮಸ್ಕಿ ಕ್ಷೇತ್ರ ಬಿಟ್ಟು ಕೊಡಬಾರದು. ಇದು ಸ್ವಾಭಿಮಾನದ ಪ್ರಶ್ನೆ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದವರಿಗೆ ಮಸ್ಕಿ ಚುನಾವಣೆ ಫಲಿತಾಂಶದ ಮೂಲಕ ಪಾಠ ಕಲಿಸಬೇಕು ಎನ್ನುವ ಅಂಶಗಳನ್ನು ವರಿಷ್ಠರು ಪ್ರಸ್ತಾಪಿಸಿದರು. ಇದಕ್ಕಾಗಿ ರಾಜ್ಯ ಮತ್ತು ಸ್ಥಳೀಯ ಎಲ್ಲ ನಾಯಕರು ಒಗ್ಗಟ್ಟಿನಿಂದಲೇ ಚುನಾವಣೆಯಲ್ಲಿ ಹೋರಾಡಬೇಕು ಎಂದು ಐಕ್ಯತೆ ಮಂತ್ರ ಪಠಿಸಿದರು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಹಣಕಾಸಿನ ಚಿಂತೆ: ಕ್ಷೇತ್ರದಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಪರ-ವಿರೋಧದ ಅಲೆ, ಸ್ಥಳೀಯ ಚುನಾವಣೆ ಇಶ್ಯೂಗಳ ಕುರಿತು ವರಿಷ್ಠರ ಗಮನ ಸೆಳೆದ ಸ್ಥಳೀಯ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಹಣದ ಕೊರತೆಯದ್ದೇ ಸಮಸ್ಯೆಯಾಗಿದೆ. ಪ್ರಚಾರ, ಕಾರ್ಯಕ್ರಮಗಳು, ಚುನಾವಣೆ ಖರ್ಚು-ವೆಚ್ಚದ ಹೊರೆಯೇ ಸಮಸ್ಯೆಯಾಗಿದೆ. ಉಳಿದಂತೆ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಇದ್ದು, ಬಿಜೆಪಿ ಅತಿ ಹೆಚ್ಚು ಹಣ ಖರ್ಚು ಮಾಡುವ ಉಮೇದಿಯಲ್ಲಿದೆ ಹೀಗಾಗಿ ಕಾಂಗ್ರೆಸ್ ಪಾಲಿಗೆ ಆರ್ಥಿಕ ಸಂಕಷ್ಟವೇ ಸಮಸ್ಯೆ ಎಂದು ಸಭೆಯಲ್ಲಿ ವಿವರಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದೆಲ್ಲವನ್ನೂ ಪಕ್ಷ ನೋಡಿಕೊಳ್ಳಲಿದೆ. ಆದರೆ ಸ್ಥಳೀಯವಾಗಿ ನೀವೆಲ್ಲ ಒಗ್ಗಟ್ಟಿನಿಂದ ಚುನಾವಣೆ ಕೆಲಸ ಮಾಡಿ, ಜನರ ಭಾವನೆ ಅರ್ಥಮಾಡಿಕೊಳ್ಳಿ, ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕ್ಷೇತ್ರಕ್ಕೆ ಇನ್ನಷ್ಟು ದಂಡು: ಸದ್ಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳೆಲ್ಲವೂ ಮುಗಿಯಲು ಎ.1ರ ಬಳಿಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಕುರಿತು ವರಿಷ್ಠರು ಮುನ್ಸೂಚನೆ ಸಭೆಯಲ್ಲಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಇನ್ನು ಒಂದು ವಾರದ ಬಳಿಕ ಮಸ್ಕಿಯಲ್ಲೇ ವಾಸ್ತವ್ಯ ಹೂಡುವ ಬಗ್ಗೆ ಸಭೆಯಲ್ಲಿ ಭರವಸೆ ನೀಡಿದರು. ಕನಿಷ್ಠ 6-7 ದಿನಗಳ ಕಾಲ ಮಸ್ಕಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಟು, ಪ್ರಮುಖರ ಸಭೆ, ಪ್ರತಿ ಹಳ್ಳಿಗಳಲ್ಲೂ ಸಂಚಾರ ನಡೆಸಿ ಮಸ್ಕಿ ಅಭ್ಯರ್ಥಿ ಬಗ್ಗೆ ಪ್ರಚಾರ ನಡೆಸುತ್ತೇವೆ ಎನ್ನುವ ವಿಶ್ವಾಸವನ್ನು ಸ್ಥಳೀಯ ಮುಖಂಡರಿಗೆ ನೀಡಿದ್ದಾರೆ. ಮಸ್ಕಿ ವಿಧಾನಸಭೆ ಉಪಚುನಾವಣೆ ಇದೊಂದು ಸವಾಲು ಎಂದು ಸ್ವೀಕರಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡರು ಎಂದು ಕಾಂಗ್ರೆಸ್‌ನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ
ಕಾಂಗ್ರೆಸ್ ,ಬಿಜೆಪಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ,ಡಿ.ಕೆ.ಶಿವಕುಮಾರ್